ಶಿವಮೊಗ್ಗ: ಮದುವೆಯಾದ ಮರುದಿನವೇ ನವವಿವಾಹಿತ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಶಿವಮೊಗ್ಗದ ಕಲ್ಯಾಣ ಮಂದಿರದಲ್ಲಿ ಸಂಭವಿಸಿದೆ.
ಕಳೆದ ನವೆಂಬರ್ 30ರಂದು ಶಿವಮೊಗ್ಗದ ಕಲ್ಯಾಣ ಮಂದಿರದಲ್ಲಿ ವಿವಾಹ ಸಮಾರಂಭದ ವೇಳೆ ಹೃದಾಯಾಘಾತದಿಂದ ಆಸ್ಪತ್ರೆ ಸೇರಿದ್ದ ರಮೇಶ್ (30) ಮೃತಪಟ್ಟಿದ್ದಾರೆ.
ರಮೇಶ್ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಯುವತಿಯನ್ನು ಮದುವೆಯಾಗಿದ್ದರು. ಬಳಿಕ ಮರುದಿನ ವಧುವಿನ ಮನೆಗೆ ಆರಕ್ಷತೆಗಾಗಿ ಹೋಗಿದ್ದರು.
ಆಸ್ಪತ್ರೆಗೆ ಸೇರಿಸುವಷ್ಟರಲ್ಲೇ ಯುವಕ ಕೊನೆಯುಸಿರು: ಈ ವೇಳೆ, ಗ್ರಾಮದ ದೇವಾಲಯದಿಂದ ವಧುವಿನ ಮನೆಯ ತನಕ ನವವಿವಾಹಿತರ ಮೆರವಣಿಗೆ ನಡೆಸಲಾಗಿತ್ತು. ನಂತರ ವಧುವಿನ ಮನೆಯ ದೇವರ ಮನೆಯಲ್ಲಿ ಕೈ ಮುಗಿಯುವಾಗಲೇ ರಮೇಶ್ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ರವಾನೆ ಮಾಡುವಷ್ಟರಲ್ಲಿ ರಮೇಶ್ ಕೊನೆಯುಸಿರೆಳೆದಿದ್ದರು. ರಮೇಶ್ ಸಾವಿನಿಂದ ನವವಧುವಿನ ಮನೆಯಲ್ಲಿ ಸೂತಕದ ವಾತಾವರಣ ಆವರಿಸಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ರಮೇಶ್ ತನ್ನ ತಂದೆ ಮೃತರಾದ ಬಳಿಕ ಹನುಮಂತಪುರದಿಂದ ಶಿವಮೊಗ್ಗ ತಾಲೂಕು ಹೊಸಕೊಪ್ಪ ಗ್ರಾಮದಲ್ಲಿ ತನ್ನ ತಾಯಿಯೊಂದಿಗೆ ನೆಲೆಸಿದ್ದರು. ಅವರಿಗೆ ಓರ್ವ ಸಹೋದರ ಇದ್ದಾರೆ. ರಮೇಶ್ ಅಂತ್ಯಕ್ರಿಯೆ ಮಂಗಳವಾರ (ಡಿ.2) ಹೊಸಕೊಪ್ಪದಲ್ಲಿ ನೆರವೇರಿತು. ನವವಿವಾಹಿತನ ಅಕಾಲಿಕ ಸಾವಿನಿಂದ ಕುಟುಂಬಸ್ಥರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.


