ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾದ ವಿವಾಹಿತ ಮಹಿಳೆಯೊಂದಿಗೆ ಯುವಕನೊಬ್ಬ ಪ್ರೀತಿ, ಪ್ರೇಮದ ಹೆಸರಿನಲ್ಲಿ ಮಜಾ ಮಾಡಿದ ಬಳಿಕ ಆಕೆಯನ್ನು ಕೊಲೆ ಮಾಡಿ ತನ್ನ ಜಮೀನಿನಲ್ಲಿ ಹೂತು ಹಾಕಿದ್ದ ಪ್ರಕರಣ ಮಂಡ್ಯದ ಕರೋಟಿ ಗ್ರಾಮದಲ್ಲಿ ಬಹಿರಂಗಗೊಂಡಿದೆ.
ಹತ್ಯೆಯಾದ ಮಹಿಳೆಯನ್ನು ಹಾಸನ ಜಿಲ್ಲೆಯ ಹೊಸಕೊಪ್ಪಲು ಗ್ರಾಮದ ಪ್ರೀತಿ (35) ಎಂದು ಗುರುತಿಸಲಾಗಿದೆ. ಕರೋಟಿ ಗ್ರಾಮದ ಪುನೀತ್ ಹತ್ಯೆ ಮಾಡಿದ ಆರೋಪಿ. ಇನ್ಸ್ಟಾಗ್ರಾಮ್ನಲ್ಲಿ ಯುವಕನಿಗೆ ಗಂಡ, ಮಕ್ಕಳಿದ್ದ ಪ್ರೀತಿ ಎಂಬಾಕೆಯ ಪರಿಚಯವಾಗಿ ಇಬ್ಬರ ನಡುವೆ ಹತ್ತೇ ದಿನದಲ್ಲಿ ಪ್ರೀತಿ, ಪ್ರೇಮ ಹಾಗೂ ಪ್ರಣಯ ಎಲ್ಲ ನಡೆದು ಆಕೆಯ ಕೊಲೆಯಲ್ಲಿ ಅಂತ್ಯವಾಗಿದೆ.
ಕಳೆದ ಭಾನುವಾರ ಒಟ್ಟಿಗೆ ಕಾರಿನಲ್ಲಿ ತೆರಳಿದ್ದ ಇಬ್ಬರು ಮೈಸೂರು, ಮಂಡ್ಯ ಪ್ರವಾಸಿ ಸ್ಥಳಗಳಲ್ಲಿ ಸುತ್ತಾಡಿದ್ದರು. ನಂತರ ಕೆ.ಆರ್.ಪೇಟೆಯ ಕತ್ತರಘಟ್ಟ ಅರಣ್ಯ ಪ್ರದೇಶದಲ್ಲಿ ಇಬ್ಬರ ನಡುವೆ ಜಗಳ ನಡೆದಿದೆ. ಅಲ್ಲೇ ಮಹಿಳೆಯನ್ನು ಕೊಲೆಗೈದು ಆರೋಪಿ ಚಿನ್ನಾಭರಣ ದೋಚಿದ್ದಾನೆ. ಬಳಿಕ ತನ್ನ ಜಮೀನಿನಲ್ಲಿ ಶವ ಮುಚ್ಚಿಟ್ಟು ಪರಾರಿಯಾಗಿದ್ದ. ಪ್ರಿಯತಮೆಯ ಮೊಬೈಲ್ಗೆ ಬಂದಿದ್ದ ಕರೆಗಳಿಂದ ಆರೋಪಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈ ಸಂಬಂಧ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.