ಕೋಲಾರ: ಬಹು ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಯಡಿ ಮೊದಲು ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳನ್ನು ತುಂಬಿಸಲಾಗುವುದು ಎಂದು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಸುರೇಶ ಘೋಷಿಸಿದ್ದಾರೆ.
ಕೋಲಾರದಲ್ಲಿ ಶುಕ್ರವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು. ಹಾಸನ ಜಿಲ್ಲೆಯಲ್ಲಿ ಆರಂಭವಾಗುವ ಯೋಜನೆಯಡಿ ವಿವಿಧ ಜಿಲ್ಲೆಗಳ ಕೆರೆಗಳನ್ನು ತುಂಬಿಸಲು ನಿರ್ಧರಿಸಲಾಗಿತ್ತು. ಆದರೆ, ಕೊನೆಯ ಭಾಗದ ಈ ಮೂರು ಜಿಲ್ಲೆಗಳಿಗೆ ನೀರಿನ ಲಭ್ಯತೆ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳು ಮತ್ತು ನಾನು ಆತಂಕಕ್ಕೆ ಒಳಗಾಗಿದ್ದೆವು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಲ್ಲಿ ಮನವಿ ಮಾಡಿದ್ದೆವು ಎಂದರು.
ನಮ್ಮ ಮನವಿಯನ್ನು ಪುರಸ್ಕರಿಸಿದ ಸಿಎಂ ಮತ್ತು ಡಿಸಿಎಂ ಮೊದಲು ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆರೆಗಳನ್ನು ತುಂಬಿಸುವ ನಿರ್ಧಾರ ಮಾಡಿದರು ಎಂದರು.
ತನಿಖೆ ಮಾಡುತ್ತೇವೆ
ಕೋಮಲ್ ನಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಸಚಿವರು ಪ್ರಶ್ನೆಗೆ ಉತ್ತರ ನೀಡಿದರು.
ಮೇವು ಮತ್ತು ವಿದ್ಯುತ್ ಎರಡೂ ಅಗತ್ಯವಿದೆ. ಹೀಗಾಗಿ ಪ್ರಕರಣದ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದ ಅವರು, ಜಿಲ್ಲೆಯ ಶಾಸಕರಾದ ನಾರಾಯಣ ಸ್ವಾಮಿ ಮತ್ತು ನಂಜೇಗೌಡ ಅವರೊಂದಿಗೆ ಚರ್ಚಿಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿದ್ದೇವೆ ಎಂದರು.
ಕೋಲಾರ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲು ಪರಿಶೀಲಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.
ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಬದ್ಧ
ಕೋಲಾರದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಡಿಪಿಎಆರ್ ಸಿದ್ಧವಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲು ಸಿದ್ಧವಿದೆ. ಒಂದು ವೇಳೆ ಖಾಸಗಿಯವರು ಮುಂದೆ ಬಾರದಿದ್ದಲ್ಲಿ ಸರ್ಕಾರದಿಂದಲೇ ಕಾಲೇಜು ಆರಂಭಿಸಲಾಗುವುದು ಎಂದು ಬಿ. ಎಸ್. ಸುರೇಶ್ ಭರವಸೆ ನೀಡಿದರು.
ಬಿಜೆಪಿಯವರಿಗೆ ತರಾಟೆ
ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡುತ್ತಿರುವ ಬಿಜೆಪಿ ನಾಯಕರನ್ನು ಸುರೇಶ್ ತರಾಟೆಗೆ ತೆಗೆದುಕೊಂಡರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಈ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯದ ಜನರಿಗೆ ನೆಮ್ಮದಿಯ ಜೀವನ ನಡೆಸುವಂತೆ ಮಾಡಿದೆ. ಬಿಜೆಪಿಯವರು ಬರೀ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮದು ಸರ್ವ ಧರ್ಮವನ್ನು ಗೌರವಿಸುವ ಪಕ್ಷವಾಗಿದೆ. ಬಿಜೆಪಿಯವರಿಗೆ ಯಾವಾಗ ಭಾರತೀಯರು ಎಂಬ ಭಾವನೆ ಬರುತ್ತದೋ ಆಗ ಆ ಪಕ್ಷ ಉದ್ಧಾರವಾಗುತ್ತದೆ ಎಂದು ವ್ಯಂಗ್ಯವಾಡಿದರು.
ಹೈಕಮಾಂಡ್ ನಿರ್ಧಾರಕ್ಕೆ ಬದ್ಧ
ಕೆ.ಎನ್. ರಾಜಣ್ಣ ಅವರನ್ನು ಸಂಪುಟದಿಂದ ಕೈಬಿಟ್ಟಿರುವುದು ನಮ್ಮ ಹೈಕಮಾಂಡ್. ಈ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ ಎಂದರು.
ರಾಜಣ್ಣ ಬಿಜೆಪಿ ಬಗ್ಗೆ ಆಸಕ್ತಿ ಹೊಂದಿದ್ದಾರೆ ಎಂಬ ಆ ಪಕ್ಷದ ನಾಯಕ ಶ್ರೀರಾಮುಲು ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಶ್ರೀರಾಮುಲು ಅವರು ಮೊದಲು ಬಿಜೆಪಿಯಲ್ಲಿ ತಮ್ಮ ಸ್ಥಾನಮಾನ ಏನಿದೆ ಎಂದು ತಿಳಿಯಲಿ ಎಂದು ಸಲಹೆ ನೀಡಿದರು.
ಸತ್ಯಾಂಶಕ್ಕಾಗಿ ಎಸ್ ಐಟಿ
ಧರ್ಮಸ್ಥಳ ವಿಚಾರದಲ್ಲಿ ಅನಾಮಧೇಯ ನೀಡಿದ ದೂರಿನ ಹಿನ್ನೆಲೆಯಲ್ಲಿ ಸತ್ಯಾಸತ್ಯತೆ ಅರಿಯಲು ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.