ಗುಂಪುಗಾರಿಕೆ ಮಾಡುತ್ತಿರುವ ಬಿವೈ ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಸುವಂತೆ ಆಗ್ರಹಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೈಕಮಾಂಡ್ ಗೆ ನೀಡಿದ ಉತ್ತರದಲ್ಲಿ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಬಣ ಬಡಿದಾಟ ಮುಗಿಲುಮುಟ್ಟಿದ ಹಿನ್ನೆಲೆಯಲ್ಲಿ ಬಿಜೆಪಿ ಶಿಸ್ತು ಸಮಿತಿ 72 ಗಂಟೆಯೊಳಗೆ ಉತ್ತರ ನೀಡುವಂತೆ ಸೂಚಿಸಿ ಯತ್ನಾಳ್ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ಅಲ್ಲದೇ ನಿಗದಿತ ಅವಧಿಯಲ್ಲಿ ಉತ್ತರ ನೀಡದೇ ಇದ್ದರೆ ನಿಮ್ಮ ಸಮ್ಮತಿ ಇದೆ ಎಂದು ಭಾವಿಸಿ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು.
ಈ ಹಿನ್ನೆಲೆಯಲ್ಲಿ ಶಿಸ್ತು ಸಮಿತಿ ಅಧ್ಯಕ್ಷ ಓಂ ಪಾಠಕ್ ಅವರಿಗೆ ಇ-ಮೇಲ್ ಮೂಲಕ 9 ಪುಟಗಳ ಸುದೀರ್ಘ ಉತ್ತರ ಬರೆದಿರುವ ಯತ್ನಾಳ್, ವಿಜಯೇಂದ್ರ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ.
ಪಕ್ಷದಲ್ಲಿ ಕುಟುಂಬ ರಾಜಕೀಯ ಮೀತಿ ಮೀರಿದೆ. ಭವಿಷ್ಯ ದೃಷ್ಟಿಯಿಂದ ಇದಕ್ಕೆ ಬ್ರೇಕ್ ಹಾಕಬೇಕು. ಕುಟುಂಬ ರಾಜಕೀಯದಿಂದ ಪಕ್ಷ ವ್ಯಕ್ತಿಗತವಾಗಿ ಗುರುತಿಸಿಕೊಳ್ಳಬಾರದು. ಬಿ.ವೈ ವಿಜಯೇಂದ್ರ ಅವರು ವ್ಯಕ್ತಿಗತ ಹಾಗೂ ಗುಂಪುಗಾರಿಕೆ ಮಾಡ್ತಿದ್ದಾರೆ. ಇದರಿಂದ ಸಂಘಟನೆಗೆ ತೊಡಕಾಗುತ್ತಿದೆ ಎಂದು ಯತ್ನಾಳ್ ಉತ್ತರದಲ್ಲಿ ದೂರಿದ್ದಾರೆ.
ಹಿರಿಯ ನಾಯಕರನ್ನು ವಿಶ್ವಾಸಕ್ಕೆ ಪಡೆದಿಲ್ಲ. ಹೊಂದಾಣಿಕೆ ರಾಜಕೀಯದಿಂದ ಪಕ್ಷ ಸಂಘಟನೆಯಲ್ಲಿ ಬಲಹೀನವಾಗಬಾರದು. ಕಾರ್ಯಕರ್ತರು ಭಾವನೆಗಳನ್ನು ನಾನು ಬಹಿರಂಗವಾಗಿ ವ್ಯಕ್ತಪಡಿಸುತ್ತಿದ್ದೇನೆ. ನನ್ನ ಹೇಳಿಕೆ ಪಕ್ಷದ ಅನೇಕ ಹಿರಿಯ ನಾಯಕರು ಹಾಗೂ ಕಾರ್ಯಕರ್ತರು ಅಭಿಪ್ರಾಯವಾಗಿದೆ. ಹೀಗಾಗಿ, ಬಿ.ವೈ ವಿಜಯೇಂದ್ರ ಅವರನ್ನು ಕೆಳಗಿಳಿಸಿ, ಸಮರ್ಥ ನಾಯಕರಿಗೆ ಜವಬ್ದಾರಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ವಕ್ಫ್ ಹೋರಾಟವನ್ನು ನಾವು ಪಕ್ಷದ ವೇದಿಕೆಯಲ್ಲೇ ಮಾಡಿದ್ದೇವೆ. ಈ ಹೋರಾಟಕ್ಕೆ ಕೇಂದ್ರದ ನಾಯಕರೇ ಖುದ್ದು ಶ್ಲಾಘಿಸಿದ್ದಾರೆ. ಪಕ್ಷದ ಹಿತಕ್ಕೆ ನಾವು ಕೆಲಸ ಮಾಡುತ್ತಿದ್ದೇವೆ. ಈ ಹಿಂದೆ ನೀಡಿದ ಉತ್ತರವನ್ನು ನೀವು ಪರಿಗಣಿಸಬಹುದು. ನಾನು ಶಿಸ್ತು ಉಲ್ಲಂಘಿಸಿಲ್ಲ. ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.