ಯತೀಂದ್ರ ಸಿದ್ದರಾಮಯ್ಯ ಆರಾಮವಾಗಿ ಇರಬೇಕು ಅಷ್ಟೇ, ಅಧಿಕಾರ ಹಂಚಿಕೆ ವಿಚಾರವಾಗಿ ಇಂತಹ ಹೇಳಿಕೆ ಕೊಡಬಾರದಿತ್ತು. ಸಿದ್ದರಾಮಯ್ಯ ರಾಜ್ಯದ ನಾಯಕ, ಅವಕಾಶ ಸಿಕ್ಕಿದರೆ ರಾಷ್ಟ್ರೀಯ ನಾಯಕರೂ ಆಗಬಹುದು ಎಂದು ಶಾಸಕ ಕೆವೈ ನಂಜೇಗೌಡ ಹೇಳಿದರು
ಕೋಲಾರದ ಬೆಳಗಾನಹಳ್ಳಿಯಲ್ಲಿರುವ ಹಾಲು ಒಕ್ಕೂಟದ ಕಚೇರಿಯಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ಪರ ತುಂಬಾ ಶಾಸಕರು ಇದ್ದಾರೆ. ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಅಧಿಕಾರ ಹಂಚಿಕೆ ವಿಚಾರವಾಗಿ ಯಾವುದೇ ಶಾಸಕರು ಮಾತನಾಡಬಾರದು. ಈ ಸಂಬಂಧ ನಮಗೆ ಹೈಕಮಾಂಡ್ ಸೂಚನೆ ನೀಡಿದೆ. ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ. ಅದಕ್ಕೆ ನಾವೆಲ್ಲಾ ಬದ್ಧ ಎಂದರು.
ನಮ್ಮ ಗೆಲುವಿಗೆ ಸಿದ್ದರಾಮಯ್ಯ ಹಾಗೂ ಡಿಕೆಶಿವಕುಮಾರ್ ಕಾರಣ. ಅವರು ನಮ್ಮ ನಾಯಕರು. ಮುಖ್ಯಮಂತ್ರಿ ಆಯ್ಕೆಗೆ ಮತದಾನ ಮಾಡುವ ಸಂದರ್ಭ ಬರಲ್ಲ ಎಂಬುದು ನನ್ನ ಅಭಿಪ್ರಾಯ ಎಂದು ನುಡಿದರು. ರಾಜ್ಯ ಕಾಂಗ್ರೆಸ್ ಸರ್ಕಾರದ ಇನ್ನುಳಿದ ಅವಧಿಯಲ್ಲಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವಂತೆ ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆವೈನಂಜೇಗೌಡ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ಸಲಹೆ ನೀಡಿದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾನೇ ಈ ವಿಚಾರ ಪ್ರಸ್ತಾಪಿಸಿದೆ. ಅದು ಹೇಗೆ ಹೊರಗಡೆ ಬಂತು ಎಂಬುದು ನನಗೆ ಗೊತ್ತಿಲ್ಲ. ಆದರೆ, ಹೆಚ್ಚಿನ ಶಾಸಕರು ಮುಂದಿನ ಎರಡೂವರೆ ವರ್ಷಗಳಲ್ಲಿ ರಸ್ತೆ ಸೇರಿದಂತೆ ಅಭಿವೃದ್ಧಿ ವಿಚಾರಗಳಿಗೆ ಆದ್ಯತೆ ನೀಡಬೇಕೆಂಬ ನನ್ನ ಮಾತಿಗೆ ಸಹಮತ ವ್ಯಕ್ತಪಡಿಸಿದ್ದದಾಗಿ ತಿಳಿಸಿದರು.
ಎರಡೂವರೆ ವರ್ಷಗಳಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಬಡವರಿಗೆ ತಲುಪಿಸಿರುವುದಕ್ಕೆ ನಾವು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದೇವೆ. ಯಾವುದೇ ಕಾರಣಕ್ಕೂ ನಾನು ಟೀಕೆ ಮಾಡಿಲ್ಲ ಎಂದು ಹೇಳಿದರು. ನಮ್ಮ ಗುರಿ 2028ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಈ ಉದ್ದೇಶದಿಂದ ಮತ್ತಷ್ಟು ಅಭಿವೃದ್ಧಿ ಅಗತ್ಯವಿದೆ ಎಂದು ತಿಳಿಸಿದರು.
ಕೋಮುಲ್ ವಿಚಾರದಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮೃದು ಧೋರಣೆ ತಾಳಿರುವುದಕ್ಕೆ ಪ್ರತಿಕ್ರಿಯಿಸಿ, ‘ನಾನು ಹಾಗೂ ನಾರಾಯಣಸ್ವಾಮಿ ಸ್ನೇಹಿತರು. ನನ್ನನ್ನು ಸದಾ ಅಣ್ಣ ಎಂದೇ ಕರೆಯುತ್ತಾರೆ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಬರುತ್ತದೆ. ಹಾಲು ಒಕ್ಕೂಟದ ವಿಚಾರದಲ್ಲಿ ಅವರಿಗೆ ಕೆಲವೊಂದು ಗೊಂದಲ ಇದ್ದು, ಆ ಬಗ್ಗೆ ಮಾತನಾಡಿದ್ದಾರೆ’ ಎಂದು ಹೇಳಿದರು.
ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿ ಎಂಬುದನ್ನು ಈ ಮೊದಲೇ ಹೇಳಿದ್ದೇನೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಬೈರತಿ ಸುರೇಶ್, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಎಲ್ಲರೂ ನನ್ನ ಪರ ಇದ್ದಾರೆ. ನನ್ನನ್ನೇ ಆ ಸ್ಥಾನಕ್ಕೆ ಪರಿಗಣಿಸುತ್ತಾರೆ ಎಂಬ ವಿಶ್ವಾಸವಿದೆ.ಕಾಂಗ್ರೆಸ್ ಪಕ್ಷದ ಹೆಜ್ಜು ಗುರುತು ಇಲ್ಲದ ಸಂದರ್ಭದಲ್ಲಿ ನಾನು ಮಾಲೂರಿನಲ್ಲಿ ಪಕ್ಷ ಕಟ್ಟಿದ್ದೇನೆ. ಪಕ್ಷದ ಗೌರವ ಉಳಿಸಿದ್ದೇನೆ. ಸ್ಥಳೀಯ ಸಂಘ ಸಂಸ್ಥೆ, ಡಿಸಿಸಿ ಬ್ಯಾಂಕ್, ಕೋಮುಲ್ ಚುನಾವಣೆ, ಪಿಎಲ್‌ಡಿ ಬ್ಯಾಂಕ್ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಬೆಂಬಲಿತರಿಗೆ ಯಶಸ್ಸು ಸಿಗುತ್ತಿದೆ.ಒಂದೂವರೆ ತಿಂಗಳಲ್ಲಿ ಮುಖ್ಯಮಂತ್ರಿ ಮಾಲೂರಿಗೆ ಬಂದು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ ಎಂದರು.
ದೇಶದಲ್ಲಿ ಲಂಚ, ಭ್ರಷ್ಟಾಚಾರ ಇಲ್ಲದ ಯಾವುದೇ ಸರ್ಕಾರ ಇಲ್ಲ. ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ ಸರ್ಕಾರದಲ್ಲಿ ತುಂಬಾ ಕಡಿಮೆ ಇದೆ. ಯಾರೋ ಕೆಲ ಅಧಿಕಾರಿಗಳು ಅಂಥ ಕೆಲಸ ಮಾಡುತ್ತಿರಬಹುದು. ಬಿಜೆಪಿ ಸರ್ಕಾರ ಬಂದಾಗಲೆಲ್ಲಾ ಭ್ರಷ್ಟಾ ಚಾರ ಹೆಚ್ಚುತ್ತದೆ. ಕಮಿಷನ್, ಹಗರಣ ಎಲ್ಲರಿಗೂ ಗೊತ್ತೇ ಇದೆ. ನಾವೆಲ್ಲಾ ಕೈ ಬಾಯಿ ಶುದ್ಧವಾಗಿ ಇಟ್ಟುಕೊಂಡಿದ್ದೇವೆ. ಯಾವ ಅಧಿಕಾರಿ ಬಳಿ ನಾನು ದುಡ್ಡು ಪಡೆದಿದ್ದೇನೆ ಎಂಬುದನ್ನು ಬಿಜೆಪಿ ಮುಖಂಡರು ಹೇಳಲಿ, ಸಾಕ್ಷ್ಯ ಕೊಡಲಿ ನೋಡೋಣ. ಇದು ನಾನು ಅವರಿಗೆ ಹಾಕುವ ಸವಾಲು ಎಂದರು.
ಬೆಳಗಾವಿಯ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರು ಹಮ್ಮಿಕೊಂಡಿದ್ದ ಡಿನ್ನರ್ ಪಾರ್ಟಿಗೆ ನಾನೂ ಹೋಗಿದ್ದೆ. ಅದು ಡಿಕೆಶಿವಕುಮಾರ್ ಆಯೋಜಿಸಿದ ಪಾರ್ಟಿ ಅಲ್ಲ. ಆದರೆ, ರಾಜಕೀಯ ವಿಷಯ ಚರ್ಚೆ ಆಗಿಲ್ಲ. ಊಟ ಮಾಡಿ ಬಂದೆವು ಎಂದು ನಂಜೇಗೌಡ ಹೇಳಿದರು


