ಗಾಜಿಯಾಬಾದ್: ಮದುವೆ ಆಗುವುದಾಗಿ ಲೈಂಗಿಕವಾಗಿ ಬಳಸಿಕೊಂಡು ಆರ್ ಸಿಬಿ ಆಟಗಾರ ಯಶ್ ದಯಾಳ್ ವಂಚಿಸಿದ್ದಾರೆ ಎಂದು ಉತ್ತರ ಪ್ರದೇಶದ ಮಹಿಳೆ ಆರೋಪಿಸಿದ್ದಾರೆ.
ದೈನಿಕ್ ಭಾಸ್ಕರ್ ಗೆ ನೀಡಿದ ಸಂದರ್ಶನದಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ ಮಹಿಳೆ, ನಾಲ್ಕೂವರೆ ವರ್ಷಗಳ ಕಾಲ ಜೊತೆಗಿದ್ದೆವು. ಈ ವೇಳೆ ನನ್ನ ಜೊತೆಗೆ ಮಾತ್ರವಲ್ಲ ಹಲವಾರು ಮಹಿಳೆಯರೊಂದಿಗೆ ಯಶ್ ದಯಾಳ್ ಸಂಬಂಧ ಹೊಂದಿದ್ದರು ಎಂದು ಆರೋಪಿಸಿದ್ದಾರೆ.
ಮದುವೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ಯಶ್ ದಯಾಳ್ ಅವರ ಮನೆಯಲ್ಲಿ 15 ದಿನ ತಂಗಿದ್ದೆ. ಅಲ್ಲದೇ ಊಟಿಗೆ ನನ್ನನ್ನು ಪ್ರವಾಸಕ್ಕೆ ಕೂಡ ಕರೆದುಕೊಂಡು ಹೋಗಿದ್ದರು. ಪ್ರಕರಣವನ್ನು ಮುಚ್ಚಿಹಾಕಲು ಯಶ್ ಹಾಗೂ ಅವರ ಕುಟುಂಬದವರನ್ನು ತಮ್ಮ ಖ್ಯಾತಿ ಹಾಗೂ ಹಣದ ಪ್ರಭಾವ ಬಳಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.
ಯಶ್ ನನಗೆ ಮಾತ್ರವಲ್ಲ, ನನಗೆ ಸಂಪರ್ಕ ಇರುವ ಮತ್ತೊಬ್ಬ ಮಹಿಳೆಗೂ ವಂಚಿಸಿದ್ದಾರೆ. ಅವರು ಪ್ರಭಾವ ಬಳಸಿ ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ. ಆದರೆ ನನಗೆ ನ್ಯಾಯದ ಮೇಲೆ ನಂಬಿಕೆ ಇದೆ. ಪೊಲೀಸರು ದಯಾಳ್ ಗೆ ನೋಟಿಸ್ ನೀಡಿರುವುದಾಗಿ ಹೇಳಿದ್ದಾರೆ ಎಂದು ಆಕೆ ಹೇಳಿದ್ದಾರೆ.
ದಯಾಳ್ ಇತರ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ತನ್ನ ಅನುಮಾನಗಳು ಏಪ್ರಿಲ್ 17, 2025 ರಂದು ಮತ್ತೊಬ್ಬ ಮಹಿಳೆ ತನ್ನನ್ನು ಸಂಪರ್ಕಿಸಿದಾಗ ದೃಢಪಟ್ಟವು ಎಂದು ಮಹಿಳೆ ಹೇಳಿದ್ದಾಳೆ. ದಯಾಳ್ ವಂಚನೆ ಮತ್ತು ಇತರ ಹಲವಾರು ಮಹಿಳೆಯರೊಂದಿಗೆ ಮಾತನಾಡಿದ್ದಕ್ಕೆ ಪುರಾವೆಗಳನ್ನು ಸಹ ಪೊಲೀಸರಿಗೆ ನೀಡಿದ್ದಾಗಿ ಅವರು ಹೇಳಿದ್ದಾರೆ.
ದಯಾಳ್ ಕನಿಷ್ಠ ಮೂವರು ಮಹಿಳೆಯರೊಂದಿಗೆ ಸಂಬಂಧ ಹೊಂದಿರುವುದು ನನಗೆ ತಿಳಿದಿದೆ. “ನಾನು ದೂರ ಸರಿಯಬಹುದಿತ್ತು, ಆದರೆ ಇದೇ ರೀತಿ ಹಲವರಿಗೆ ಮೋಸ ಮಾಡಿದ್ದು ತಿಳಿದ ನಂತರ ಹೋರಾಟ ಮಾಡಲು ನಿರ್ಧರಿಸಿದ್ದೇನೆ. ಅವರ ಕುಟುಂಬವು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಲು ಪ್ರಾರಂಭಿಸಿದ್ದರಿಂದ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದೆ ಎಂದು ಮಹಿಳೆ ವಿವರಿಸಿದ್ದಾರೆ.
“ನನಗೆ ಮೋಸ ಮಾಡಿದ್ದರೂ ಸುಮ್ಮನಾಗಲು ಬಯಸಿದ್ದೆ. ಆದರೆ ನಂತರ ಯಶ್ ದಯಾಳ್ ಮತ್ತು ಅವರ ಕುಟುಂಬವು ತುಂಬಾ ಕೆಟ್ಟದಾಗಿ ಮಾತನಾಡಿದೆ. ಪ್ರೀತಿಯಲ್ಲಿ ಸ್ವಾಭಿಮಾನ ಎಂಬ ವಿಷಯವಿದೆ, ಅದನ್ನು ಹುಡುಗಿಯರು ಕಳೆದುಕೊಳ್ಳುತ್ತಾರೆ. ದೂರು ನೀಡಿದ ನಂತರ ಯಶ್ ದಯಾಳ್ ನಾಪತ್ತೆಯಾಗಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ.
ದಯಾಳ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಐಪಿಎಲ್ ನಲ್ಲಿ ಆಡುತ್ತಿದ್ದು, ಈ ಬಾರಿ ಆರ್ ಸಿಬಿ ಪ್ರಶಸ್ತಿ ಗೆದ್ದು ಇತಿಹಾಸ ಬರೆದಿತ್ತು.