ಕಬ್ಬು ಕಡಿಯುವಾಗ ಕುಡುಗೋಲು ತಾಗಿ ಸಾವು ಎಂದು ಬಿಂಬಿತವಾಗಿದ್ದ ಪ್ರಕರಣವನ್ನು ಆರು ಗಂಟೆಯೊಳಗೆ ಬೇಧಿಸಿದ ಪೊಲೀಸರು ಅದೊಂದು ಕೊಲೆ ಎಂಬುದನ್ನು ದೃಢಪಡಿಸಿ ಆರೋಪಿಗಳಾದ ಸಹೋದರ ಮತ್ತು ಸಂಬಂಧಿಯನ್ನು ಅರೆಸ್ಟ್ ಮಾಡಿರುವ ಘಟನೆ ಬೆಳಗಾವಿಯ ಯಮಕನಮರಡಿಯ ಲ್ಲಿ ನಡೆದಿದೆ.
ಯಮಕನಮರಡಿ ಪೊಲೀಸ್ ಇನ್ಸ್‌ಪೆಕ್ಟರ್ ಜಾವೇದ್ ಮುಷಾಪುರಿ ಅವರ ಸಮಯಪ್ರಜ್ಞೆ ಮತ್ತು ಬುದ್ಧಿಮತ್ತೆಯ ಫಲವಾಗಿ ಹುಕ್ಕೇರಿ ತಾಲೂಕಿನ ಕುರಣಿ ಗ್ರಾಮದಲ್ಲಿ ನಡೆದ ಜಟಿಲ ಕೊಲೆ ಪ್ರಕರಣ ಆರು ಗಂಟೆಗಳ ಅವಧಿಯಲ್ಲಿ ಅನಾವರಣಗೊಂಡಿದೆ.
ತನಿಖಾಧಿಕಾರಿಗಳು ಎಚ್ಚರ ಮತ್ತು ಚುರುಕುತನವನ್ನು ತೋರಿದಾಗ ಮಾತ್ರ ಸತ್ಯವು ಹೊರಬರುತ್ತದೆ. ಇಲ್ಲವಾದರೆ, ತನಿಖೆಯ ದಾರಿ ತಪ್ಪಿ, ನಿಜವಾದ ಅಪರಾಧಿಗಳು ನಿರಾಳರಾಗಿ ತಪ್ಪಿಸಿಕೊಳ್ಳುವ ಅಪಾಯವಿರುತ್ತದೆ ಎಂಬುದನ್ನು ಇದು ತೋರಿಸಿದೆ.
ಕುರಣಿ ಗ್ರಾಮದ ನಿವಾಸಿ ಸಂಜು ಅಲಿಯಾಸ್ ಪಿಂಟು ಮಹಾದೇವ ಪಾಟೀಲ್ (31) ನವೆಂಬರ್ 4ರ ಮಧ್ಯಾಹ್ನ ತೀವ್ರವಾಗಿ ಗಾಯಗೊಂಡಿದ್ದರು. ಸಂಕೇಶ್ವರದ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದರು. ಸಂಜು ಅವರ ಕುಟುಂಬ ಸದಸ್ಯರು, ಕಬ್ಬು ಕಟಾವು ಮಾಡುವಾಗ ಆಕಸ್ಮಿಕವಾಗಿ ಕುಡುಗೋಲು ತಗುಲಿ ಗಾಯಗಳಾಗಿವೆ ಮತ್ತು ಇದೇ ಕಾರಣಕ್ಕೆ ಸಾವು ಸಂಭವಿಸಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಾಥಮಿಕವಾಗಿ ಪೊಲೀಸರು ಈ ಹೇಳಿಕೆಯನ್ನು ನಂಬಿದ್ದರು.
ಸಂಕೇಶ್ವರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಇನ್ಸ್‌ಪೆಕ್ಟರ್ ಜಾವೇದ್ ಮುಷಾಪುರಿ ಅವರು ಮೃತದೇಹವನ್ನು ಪರಿಶೀಲಿಸಿದರು. ಸಂಜು ಅವರ ಎಡ ಎದೆ ಮತ್ತು ಗಲ್ಲದ ಮೇಲೆ ಗಂಭೀರ ಗಾಯಗಳು ಇರುವುದನ್ನು ಗಮನಿಸಿದರು. ಆದರೆ, ಅತ್ಯಂತ ನಿರ್ಣಾಯಕವಾಗಿ ಗಮನಿಸಬೇಕಾದ ಸಂಗತಿಯೆಂದರೆ, ಅವರ ಬಲಗೈಯಲ್ಲಿಯೂ ಗಾಯವಾಗಿತ್ತು. ಕಬ್ಬು ಕಟಾವು ಮಾಡುವಾಗ ಕುಡುಗೋಲು ತಗುಲಿ ಸಾವು ಸಂಭವಿಸಿದ್ದರೆ, ಆಕಸ್ಮಿಕವಾಗಿ ಕುಡುಗೋಲು ತಗುಲಿದಾಗ ಮನುಷ್ಯ ತನ್ನ ದೇಹವನ್ನು ರಕ್ಷಿಸಲು ಪ್ರಯತ್ನಿಸುತ್ತಾನೆ. ಆದರೆ, ಎಡ ಎದೆಗೆ ಕುಡುಗೋಲು ತಗುಲಿದಾಗ ಬಲಗೈಗೆ ಗಾಯವಾಗಿದ್ದು ಏಕೆ ಎಂಬ ಪ್ರಶ್ನೆ ಇನ್ಸ್‌ಪೆಕ್ಟರ್ ಅವರನ್ನು ಕಾಡಿತ್ತು.
ಇದು ಕಸ್ಮಿಕ ಸಾವಲ್ಲ, ಬದಲಿಗೆ ಕೊಲೆ’ ಎಂಬ ಸಂಶಯವು ಪೊಲೀಸರಿಗೆ ಬಲವಾಯಿತು. ತಕ್ಷಣವೇ ಅವರು ತನಿಖೆಯ ದಿಕ್ಕನ್ನು ಬದಲಿಸಿ, ಕುಟುಂಬದವರ ಮೇಲೆ ನಿಗಾ ಇರಿಸಿದರು. ಕೊಲೆಗೈದ ಸಹೋದರ ಮತ್ತು ಸಂಬಂಧಿ ಸಂಶಯದ ಆಧಾರದ ಮೇಲೆ ತೀವ್ರ ವಿಚಾರಣೆ ನಡೆಸಿದಾಗ, ಕುಟುಂಬದವರು ಹೇಳುತ್ತಿದ್ದ ಕಬ್ಬು ಕಟಾವು ಘಟನೆಯು ಸುಳ್ಳೆಂದು ಬಯಲಾಯಿತು. ಇದು ಆಸ್ತಿ ವಿವಾದದಿಂದ ನಡೆದ ಕೊಲೆ ಎಂದು ದೃಢಪಟ್ಟಿದೆ.
ಕೊಲೆಯಾದ ಸಂಜು ಅಲಿಯಾಸ್ ಪಿಂಟು ಪಾಟೀಲ್ ಅವರ ಸಹೋದರ ರಾಕೇಶ್ ಮಹಾದೇವ ಪಾಟೀಲ್ (29), ಸಂಬಂಧಿ ಕೆಂಚಪ್ಪ ಹುಲ್ಯಾಪ್ಪ ಪಾಟೀಲ್ (21) ಹಾಯದಿಂದ ಸಂಜುನನ್ನು ಕುಡುಗೋಲಿನಿಂದ ಹೊಡೆದು ಕೊಲೆ ಮಾಡಿರುವುದು ದೃಢಪಟ್ಟಿದೆ. ಇಬ್ಬರನ್ನೂ ಬಂಧಿಸಲಾಗಿದೆ.
ಎರಡು ವರ್ಷಗಳ ಹಿಂದೆ, ರಾಕೇಶ್ ಮದುವೆ ವಿಷಯಕ್ಕೆ ಸಂಬಂಧಿಸಿದಂತೆ ಸಂಜು ಮತ್ತು ರಾಕೇಶ್ ನಡುವೆ ದೊಡ್ಡ ಜಗಳ ನಡೆದಿತ್ತು. ಈ ಜಗಳದ ನಂತರ ಸಂಜು ತನ್ನ ತಂದೆ-ತಾಯಿ ಮತ್ತು ಸಹೋದರ ರಾಕೇಶನನ್ನು ಮನೆಯಿಂದ ಹೊರಹಾಕಿ ಸಂಪೂರ್ಣ ಆಸ್ತಿಯನ್ನು ತನ್ನ ಬಳಿಯೇ ಇರಿಸಿಕೊಂಡಿದ್ದನು. ನವೆಂಬರ್ 4ರಂದು ಮಧ್ಯಾಹ್ನ 3 ಗಂಟೆಗೆ ಮತ್ತೆ ಒಡಹುಟ್ಟಿದವರ ನಡುವೆ ಜಗಳವಾಗಿದ್ದು, ಕೋಪಗೊಂಡ ರಾಕೇಶ್ ಕೆಂಚಪ್ಪನ ಸಹಾಯದಿಂದ ಕುಡುಗೋಲಿನಿಂದ ಸಂಜು ಅವರ ಎದೆಗೆ ಹೊಡೆದು ಕೊಲೆ ಮಾಡಿದ್ದಾನೆ. ಆಕಸ್ಮಿಕ ಸಾವಿನ ನಾಟಕವಾಡಲು ಇಡೀ ಕುಟುಂಬ ಪ್ರಯತ್ನಿಸಿದೆ.
ಪ್ರಕರಣದ ಪ್ರಾಮುಖ್ಯತೆ ಅರಿತು ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮಗೊಂಡ ಬಸರಗಿ ಅವರು ತನಿಖಾಧಿಕಾರಿಗಳ ಬುದ್ಧಿವಂತಿಕೆಯನ್ನು ಶ್ಲಾಘಿಸಿದ್ದಾರೆ.


