Menu

ಜಗ-ಜೀವನ: ಹೆಸರು ಬದಲಾವಣೆಯ ಹೊಳಪು ಮತ್ತು ವಾಸ್ತವದ ಕರಿನೆರಳು

mgnrega

ಸರಕಾರಗಳು, ಅವು ಯಾವ ಪಕ್ಷದ್ದೇ ಇರಲಿ, ಯೋಜನೆಗಳನ್ನು ನವರಂಗಿ ಬಣ್ಣಗಳಲ್ಲಿ ಲೇಪಿಸಿ ಜನರ ಮುಂದೆ ತರುವುದು ರಾಜಕೀಯದಷ್ಟೇ ಹಳತಾದ ಸಂಗತಿಯಾಗಿದ್ದು, ಹಲವು ಮರು ನಾಮಾಂಕಿತ ಯೋಜನೆಗಳು ಬಣ್ಣದ ಪೇಪರಲ್ಲಿ ಸುತ್ತಿರುವ ಹಳೆಯ ಮಿಠಾಯಿಯಂತೆಯೇ ಆಗಿದೆ.

ಭಾರತದ ಆಡಳಿತ ವ್ಯವಸ್ಥೆಯಲ್ಲಿ ಕಳೆದ ಒಂದು ದಶಕದಿಂದ ಯೋಜನೆಗಳ ಮರುನಾಮಕರಣದ ಪ್ರಕ್ರಿಯೆಯು ಸಮರೋಪಾದಿಯಲ್ಲಿ ಸಾಗಿದೆ. 2014ರಿಂದ 2025ರ ಅವಯಲ್ಲಿ ಪ್ರಧಾನಿ ಮೋದಿಯವರ ನೇತೃತ್ವದ ಸರ್ಕಾರವು ಈ ಹಿಂದೆ ಚಾಲ್ತಿಯಲ್ಲಿದ್ದ ಸುಮಾರು 30೦ಕ್ಕೂ ಹೆಚ್ಚು ಪ್ರಮುಖ ಯೋಜನೆಗಳನ್ನು ಹೊಸ ಹೆಸರಿನೊಂದಿಗೆ ಜನರೆದುರು ಮಂಡಿಸಿದೆ.

ಈ ಬದಲಾವಣೆಗಳು ಕೇವಲ ಮೇಲ್ನೋಟದ ನಾಮಕರಣಕ್ಕೆ ಸೀಮಿತವೇ ಅಥವಾ ಅವುಗಳ ಆಂತರ್ಯದಲ್ಲಿ ನಿಜವಾದ ಗುಣಾತ್ಮಕ ಸುಧಾರಣೆಗಳಾಗಿವೆಯೇ ಎಂಬ ಪ್ರಶ್ನೆ ಚರ್ಚೆಗೆ ಅರ್ಹವಾಗಿದೆ. ಸರಕಾರಗಳು, ಅವು ಯಾವ ಪಕ್ಷದ್ದೇ ಇರಲಿ, ಯೋಜನೆಗಳನ್ನು ನವರಂಗಿ ಬಣ್ಣಗಳಲ್ಲಿ ಲೇಪಿಸಿ ಜನರ ಮುಂದೆ ತರುವುದು ರಾಜಕೀಯದಷ್ಟೇ ಹಳತಾದ ಸಂಗತಿಯಾಗಿದೆ.

ಯಾವುದೇ ಯೋಜನೆಯ ಹೆಸರು ಬದಲಾದ ಮಾತ್ರಕ್ಕೆ ಪ್ರಭಾವ ಬಲವಾಗುತ್ತದೆ ಎಂದು ಹೇಳಲು ಬರುವುದಿಲ್ಲ. ಜನಧನದಂತಹ ಸಾರ್ಥಕ ಪ್ರಯತ್ನಳ ನಡುವೆಯೂ ಹಲವು ಮರು ನಾಮಾಂಕಿತ ಯೋಜನೆಗಳು ಬಣ್ಣದ ಪೇಪರಲ್ಲಿ ಸುತ್ತಿರುವ ಹಳೆಯ ಮಿಠಾಯಿಯಂತೆಯೇ ಆಗಿವೆ.

ಒಂದು ಯೋಜನೆಯ ಹೆಸರು ಬದಲಾದಾಗ ಅದು ಕೇವಲ ಕಾಗದದ ಮೇಲಷ್ಟೇ ಬದಲಾಗುವುದಿಲ್ಲ; ಗ್ರಾಮ ಪಂಚಾಯತಿ ಮಟ್ಟದಿಂದ ಹಿಡಿದು ರಾಷ್ಟ್ರೀಯ ಹೆದ್ದಾರಿಗಳವರೆಗಿನ ನಾಮಫಲಕಗಳು, ಸರ್ಕಾರಿ ಕಚೇರಿಗಳ ಪತ್ರಗಳು ಮತ್ತು ಡಿಜಿಟಲ್ ಪೋರ್ಟಲ್‌ಗಳನ್ನು ನವೀಕರಿಸಲು ಕೋಟ್ಯಂತರ ರೂಪಾಯಿ ವೆಚ್ಚವನ್ನೂ ತುರತ್ತದೆ ಎಂದಬುದನ್ನು ಇಲ್ಲಿ ಮರೆಯಬಾರದು.

ಇದಲ್ಲದೆ, ಯೋಜನೆಗಳ ಮರುನಾಮಕರಣವು ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಘರ್ಷಕ್ಕೆ ಪ್ರಮುಖ ಕಾರಣವಾಗಿದೆ. ಅನೇಕ ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ರಾಜ್ಯ ಸರ್ಕಾರಗಳು ಶೇ. 40ರಷ್ಟು ಹಣವನ್ನು ಹೂಡುತ್ತವೆ. ಆದರೆ ಯೋಜನೆಗಳು ಕೇವಲ ಕೇಂದ್ರದ ನಾಯಕರ ಹೆಸರಿನಲ್ಲಿ ಅಥವಾ ಕೇಂದ್ರದ ಲೇಬಲ್ ಅಡಿಯಲ್ಲಿ ಬಿಂಬಿತವಾದಾಗ ರಾಜ್ಯಗಳು ಇದನ್ನು ಒಪ್ಪುವುದು ತೀರಾ ಕಷ್ಟವಾಗುತ್ತದೆ ಮತ್ತು ಈ ಕಷ್ಟ ಸಂಘರ್ಷಕ್ಕೆ ಕಾರಣವೂ ಆಗುತ್ತದೆ.

ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ’ಪಿಎಂ ಗ್ರಾಮೀಣ ಆವಾಸ್ ಯೋಜನೆ’ ಮತ್ತು ’ಸ್ವಚ್ಛ ಭಾರತ್’ ಲೋಗೋಗಳನ್ನು ಬಳಸದ ಕಾರಣಕ್ಕಾಗಿ ಕೇಂದ್ರವು ಅನುದಾನವನ್ನು ತಡೆಹಿಡಿದಿದ್ದನ್ನು ಇಲ್ಲಿ ಉದಾಹರಣೆಯಾಗಿ ನೋಡಬಹುದು.

ಒಂದೊಂದು ಸರಕಾರ ಬಂದಾಗಲೂ ಸಾಮಾಜಿಕ ಕಲ್ಯಾಣದ ಯೋಜನೆಗಳ ಹೆಸರನ್ನು ತಮ್ಮ ಸಿದ್ದಾಂತಕ್ಕೆ ಒಪ್ಪುವ ರೀತಿಯಲ್ಲಿ ಬದಲಿಸುವುದರ ಮತ್ತೊಂದು ಸಮಸ್ಯೆ ಎಂದರೆ ಜನರ ಮನಸ್ಸಿನಲ್ಲಿ ಅದು ಸೃಷ್ಟಿಸುವ ಗೊಂದಲ.

ಯೋಜನೆಗಳ ಹೆಸರುಗಳು ಪದೇ ಪದೇ ಬದಲಾಗುವುದರಿಂದ ಅನಕ್ಷರಸ್ಥ ಗ್ರಾಮೀಣ ಜನರಿಗೆ ಸೂಕ್ತ ಮಾಹಿತಿಯೇ ಸಿಗದಂತಾಗಿದೆ. ಉದಾಹರಣೆಗೆ, ’ರಾಜೀವ್ ಗಾಂ ಗ್ರಾಮೀಣ ವಿದ್ಯುದ್ದೀಕರಣ ಯೋಜನೆ’ಯು ’ದೀನ್ ದಯಾಳ್ ಉಪಾಧ್ಯಾಯ ಗ್ರಾಮ್ ಜ್ಯೋತಿ ಯೋಜನೆ’ಯಾಗಿ ಬದಲಾದಾಗ, ಫಲಾನುಭವಿಗಳು ಅರ್ಜಿ ಸಲ್ಲಿಸಲು ಎಲ್ಲಿಗೆ ಹೋಗಬೇಕೆಂದು ತಿಳಿಯದೆ ಮಧ್ಯವರ್ತಿಗಳ ಮೊರೆ ಹೋಗುವಂತಾಯಿತು. ಇತ್ತೀಚಿನ ’ಪಿಎಂ ಪೋಷಣ್’ (ಹಳೆಯ ಬಿಸಿಯೂಟ ಯೋಜನೆ) ಬದಲಾವಣೆಯ ಸಂದರ್ಭದಲ್ಲೂ ಇದೇ ರೀತಿಯ ಗೊಂದಲಗಳುಂಟಾಗಿ, ಪೌಷ್ಟಿಕಾಂಶದ ಕಿಟ್‌ಗಳ ವಿತರಣೆಯಲ್ಲಿ ವ್ಯತ್ಯಯ ಉಂಟಾಗಿರುವುದರ ಬಗ್ಗೆ ಸರಕಾರ ಜಾಣ ಕುರುಡು ಪ್ರದರ್ಶಿಸಿದೆ.

ಅಂಕಿಅಂಶಗಳ ಪ್ರಕಾರ, 2014ರಿಂದ ಈವರೆಗೆ 30ಕ್ಕೂ ಹೆಚ್ಚು ಯೋಜನೆಗಳಿಂದ ’ನೆಹರು-ಗಾಂ’ ಹೆಸರನ್ನು ತೆಗೆಯಲಾಗಿದ್ದು, ಬದಲಿಗೆ 15೫ಕ್ಕೂ ಹೆಚ್ಚು ಯೋಜನೆಗಳಿಗೆ ಸಂಘ ಪರಿವಾರದ ನಾಯಕರ ಹೆಸರುಗಳನ್ನು ಇಡಲಾಗಿದೆ. ಇದು ಆಡಳಿತಾತ್ಮಕ ಸುಧಾರಣೆಗಿಂತ ಹೆಚ್ಚಾಗಿ ಸೈದ್ಧಾಂತಿಕ ಪ್ರಾಬಲ್ಯದ ಪ್ರದರ್ಶನ ಎಂದರೆ ಅದರಲ್ಲಿ ತಪ್ಪಿಲ್ಲ.

ಹೊಸ ಬಣ್ಣ ಬಳಿದರಷ್ಟೇ ಸಾಕೆ?

ಹಳೆಯ ಯೋಜನೆಗಳಿಗೆ ಹೊಸ ಹೆಸರಿಟ್ಟರೆ ಸಾಕೆ ಅಥವಾ ಸಮಗ್ರವಾಗಿ ಅದರ ರೂಪವೇ ಬದಲಾಗಬೇಕೆ ಎಂಬ ಪ್ರಶ್ನೆಗೆ ಉತ್ತರ ಸುಲಭ. ಮೊದಲೇ ಸರಕಾರಿ ಎಡವಟ್ಟುಗಳಿಂದ ಜನರಿಗೆ ಸುಲಭವಾಗಿ ತಲುಪದ ಯೋಜನೆಗಳನ್ನು ಸೈದ್ಧಾಂತಿಕ ಕಾರಣಗಳಿಗೆ ಬದಲಾಯಿಸುವುದರಿಂದ ಜನರಿಗೆ ಹೆಚ್ಚಿನ ಪ್ರಯೋಜನೆ ಆಗುತ್ತದೆ ಎಂದು ನಿರೀಕ್ಷಿಲು ಸಾಧ್ಯವಿಲ್ಲ.

ಗ್ರಾಮೀಣ ಬದುಕಿನ ಜೀವನಾಡಿಯಾಗಿದ್ದ ಎಂಜಿಎನ್‌ಆರ್‌ಇಜಿಎ ಯೋಜನೆಯನ್ನು ಜಿರಾಮ್‌ಜಿ ಎಂದು ಬದಲಿಸಿದ ನಂತರ ಯೋಜನೆಯ ವ್ಯಾಪ್ತಿ ಹೆಚ್ಚಿದೆ ಎಂದು ಸರ್ಕಾರ ಪ್ರತಿಪಾದಿಸಿದರೂ, ಜಿಡಿಪಿಗೆ ಹೋಲಿಸಿದರೆ ಈ ಯೋಜನೆಗೆ ನೀಡುವ ಅನುದಾನದ ಪಾಲು ಕಳೆದ ನಾಲ್ಕು ವರ್ಷಗಳಲ್ಲಿ ಗಣನೀಯವಾಗಿ ಇಳಿಕೆಯಾಗಿದೆ ಎಂಬ ಅಂಶವನ್ನು ಅದು ಬಹಿರಂಗವಾಗಿ ಒಪ್ಪಿಕೊಂಡಿಲ್ಲ.

೨೦೨೪-೨೫ರ ಬಜೆಟ್‌ನಲ್ಲಿ ಉದ್ಯೋಗ ಖಾತರಿಗಾಗಿ ನೀಡಲಾದ ಮೊತ್ತವು ಬೇಡಿಕೆಗಿಂತ ಶೇ. ೨೦ರಷ್ಟು ಕಡಿಮೆಯಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದರ ಜೊತೆಗೆ ’ಆಧಾರ್ ಆಧಾರಿತ ಪಾವತಿ’ ಕಡ್ಡಾಯಗೊಳಿಸಿರುವುದು ತಾಂತ್ರಿಕ ದೋಷಗಳಿಗೆ ಕಾರಣವಾಗಿದ್ದು, ಸುಮಾರು ಶೇ. ೩೫ರಷ್ಟು ಮಹಿಳಾ ಕಾರ್ಮಿಕರು ಕೆಲಸ ಮಾಡಿದ್ದರೂ ವೇತನ ಪಡೆಯಲು ತಿಂಗಳುಗಟ್ಟಲೆ ಕಾಯುವಂತಾಗಿದೆ. ಈ ಪೈಕಿ ತಡಮಾಡದೆ ಪೇಮೆಂಟ್ ನೀಡುವ ವಾಗ್ದಾನವನ್ನು ಸರಕಾರ ನೀಡಿದ್ದರೂ ಬ್ಯೂರಾಕ್ರಸಿಯ ಆಟದಲ್ಲಿ ಅದು ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಜಾರಿಗೆ ಬರುತ್ತದೆ ಎಂದು ಹೇಳಲು ಬರುವುದಿಲ್ಲ.

ಅಂಕಿ ಅಂಶಗಳ ಮಾಯಾಜಾಲ

ಸರಕಾರಗಳು ರೂಪಿಸುವ ಯೋಜನೆಗಳು ಮತ್ತು ಅದಕ್ಕೆ ನೀಡುವ ಪ್ರಚಾರಕ್ಕೆ ಮರುಳಾಗುವ ಮುನ್ನ ಅವುಗಳ ಬಗ್ಗೆ ಎಷ್ಟರಮಟ್ಟಿಗಿನ ಬದ್ಧತೆ ಹೊಂದಿವೆ ಎಂಬುದನ್ನು ಅವುಗಳಿಗೆ ಹಂಚಿಕೆ ಮಾಡಲಾಗುವ ಅನುದಾನದಿಂದಲೇ ತಿಳಿದುಕೊಳ್ಳಬಹುದು.

ಒಂದು ದೇಶವು ಶ್ರೀಮಂತವಾಗುತ್ತಾ ಹೋದಂತೆ (ಜಿಡಿಪಿ ಬೆಳೆದಂತೆ), ಸಾಮಾಜಿಕ ಯೋಜನೆಗಳಿಗೆ ನೀಡುವ ಪಾಲೂ ಹೆಚ್ಚಾಗಬೇಕು. ಆದರೆ ಇಲ್ಲಿ ವ್ಯತಿರಿಕ್ತ ಚಿತ್ರಣವಿದೆ. ಅದರಲ್ಲೂ ಜನಕಲ್ಯಾಣದ ಪ್ರಮುಖ ಅಂಗಗಾಳದ ಆರೋಗ್ಯ, ಶಿಕ್ಷಣ ಮುಂತಾದವುಗಳಿಗೆ ನೀಡಲಾಗಿರುವ ಆದ್ಯತೆ ಆತಂಕ ಮೂಡಿಸುವಂತಿದೆ.  ವಿಶ್ವಸಂಸ್ಥೆ ಮತ್ತು ಕೊಠಾರಿ ಆಯೋಗದ ಶಿಫಾರಸಿನಂತೆ ಭಾರತವು ಜಿಡಿಪಿಯ ಶೇ. 6ರಷ್ಟನ್ನು ಶಿಕ್ಷಣಕ್ಕೆ ವ್ಯಯಿಸಬೇಕು. ಶೇ. 3.2 ರಿಂದ 3.4ರ ಆಸುಪಾಸಿನಲ್ಲಿದ್ದ ಈ ಹಂಚಿಕೆ 2024ರ ವೇಳೆಗೆ ಶೇ. 2.8ರಿಂದ 2.9ಕ್ಕೆ ಇಳಿಕೆಯಾಗಿದೆ.

ಬಜೆಟ್ಟಲ್ಲಿ ಶಿಕ್ಷಣಕ್ಕೆ ನೀಡುವ “ಮೊತ್ತ” ಹೆಚ್ಚಾದಂತೆ ಕಂಡರೂ, ದೇಶದ ಒಟ್ಟು ಆರ್ಥಿಕ ಬೆಳವಣಿಗೆಗೆ ಹೋಲಿಸಿದರೆ ಅದು ಕುಸಿಯುತ್ತಿದೆ. ಹೀಗಾದಾಗ ಯಾವ ಯೋಜನೆ ತಂದರೂ, ಇರುವ ಯೋಜನೆಗಳ ಹೆಸರು ಬದಲಾಯಿಸಿದರೂ ಅದರಿಂದ ಆಗುವ ಒಟ್ಟು ಉಪಯೋಗ ನಗಣ್ಯ.

ಇನ್ನೂ ಆರೋಗ್ಯದ ಮೇಲಿನ ಸರ್ಕಾರಿ ವೆಚ್ಚವು ಜಿಡಿಪಿಯ ಶೇ. 2.5ಕ್ಕೆ ಏರಬೇಕು ಎಂಬ ಗುರಿ ಇದ್ದರೂ, ಅದು ದಶಕಗಳಿಂದಲೂ ಶೇ. 1.2೨ ರಿಂದ 1.5ರ ನಡುವೆಯೇ ಅಂಟಿಕೊಂಡಿದೆ. ಇದು ಎಲ್ಲ ಸರಕಾರಗಳೂ ಮಾಡುವ ಬಜೆಟ್ ಗಿಮಿಕ್ ಎಂದರೂ ತಪ್ಪಲ್ಲ. ಉದಾಹರಣೆಗೆ 2014೪ರಲ್ಲಿ 1000 ಕೋಟಿ ಇದ್ದದ್ದು 2024ರಲ್ಲಿ 2000 ಕೋಟಿ ಆಗುವುದು. ಇದು 100% ಹೆಚ್ಚಳದಂತೆ ಕಾಣುತ್ತದೆ. ಆದರೆ ಇದು ಹಣದುಬ್ಬರವನ್ನು ಕಳೆದ ನಂತರ ಬರುವ ಅಂಕಿಅಂಶ ಎಂಬುದನ್ನು ಮರೆಯಬಾರದು.

ಕಳೆದ ಹತ್ತು ವರ್ಷಗಳ ಸರಾಸರಿ ಹಣದುಬ್ಬರವನ್ನು ಲೆಕ್ಕಹಾಕಿದರೆ ಹಲವು ಯೋಜನೆಗಳ ಹಂಚಿಕೆಯು 2014ರ ಮೌಲ್ಯಕ್ಕೆ ಸಮನಾಗಿದೆ ಅಥವಾ ಕೆಲವು ಕಡೆಗಳಲ್ಲಿ ಕಡಿಮೆಯಾಗಿದೆ. ಈಗ ಈ ಜಿರಾಮ್‌ಜಿ ವಿಷಯಕ್ಕೇ ಬರೋಣ. ಈ ಯೋಜನೆಯು ಗ್ರಾಮೀಣ ಭಾಗದ ಬಡವರ ಬದುಕಿಗೆ ಆಸರೆಯಾಗಿರುವುದು ಹೌದಾದರೂ ಇದರ ಅನುದಾನದ ಏರಿಕೆಯು ಕೇವಲ ನಾಮಮಾತ್ರವಾಗಿದೆ ಎಂಬುದು ಹಲವರಿಗೆ ತಿಳಿದಿಲ್ಲ.

ಹಣದುಬ್ಬರ ಮತ್ತು ಕೂಲಿ ದರ

2014ರಲ್ಲಿ ಸರಾಸರಿ ದಿನಗೂಲಿ ರೂ. 132 ಇತ್ತು, ಅದು 2024೪ರ ವೇಳೆಗೆ ಸುಮಾರು 230ರಿಂದ 260೦ ರೂ.ಗೆ ಏರಿದೆ. ಆದರೆ ಈ ಹತ್ತು ವರ್ಷಗಳಲ್ಲಿ ಆಹಾರ ಧಾನ್ಯಗಳು ಮತ್ತು ಅಡುಗೆ ಎಣ್ಣೆಯ ಬೆಲೆಗಳು ದುಪ್ಪಟ್ಟಾಗಿವೆ.

ಅಂದರೆ, ಒಬ್ಬ ಕಾರ್ಮಿಕ 2014ರಲ್ಲಿ ತನ್ನ ಒಂದು ದಿನದ ಕೂಲಿಯಲ್ಲಿ ಎಷ್ಟು ಪ್ರಮಾಣದ ಪಡಿತರ ಖರೀದಿಸಬಹುದಿತ್ತೋ, ಅದಕ್ಕಿಂತ ಕಡಿಮೆ ಅಥವಾ ಅಷ್ಟೇ ಪ್ರಮಾಣವನ್ನು 2024ರಲ್ಲಿ ಖರೀದಿಸುತ್ತಿದ್ದಾನೆ.

2024-25ರ ಬಜೆಟ್‌ನಲ್ಲಿ ಈ ಯೋಜನೆಗೆ 86,000 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. ಯುಪಿಎ ಅವಯ ಕೊನೆಯ ಬಜೆಟ್ (ರೂ. 33,000 ಕೋಟಿ) ಹೋಲಿಸಿದರೆ ಎರಡೂವರೆ ಪಟ್ಟು ಹೆಚ್ಚು. ಆದರೆ, ಜಿಡಿಪಿಗೆ ಹೋಲಿಸಿದರೆ ಈ ಪಾಲಿನಲ್ಲಿ ಕುಸಿತ ಕಂಡಿದೆ.

ವಿಶ್ವಬ್ಯಾಂಕ್ ವರದಿಯ ಪ್ರಕಾರ, ಈ ಯೋಜನೆಯು ಪರಿಣಾಮಕಾರಿಯಾಗಿ ನಡೆಯಲು ಜಿಡಿಪಿಯ ಕನಿಷ್ಠ ಶೇ. 1.6 ರಷ್ಟು ಅನುದಾನ ಬೇಕು, ಆದರೆ ಪ್ರಸ್ತುತ ಹಂಚಿಕೆಯು ಶೇ. 0.3ಕ್ಕಿಂತ ಕಡಿಮೆಯಿದೆ. ಇದು ಕೇವಲ ಒಂದು ನಮೂನೆಯಷ್ಟೆ. ಇದೇ ರೀತಿ ನಮಾಮಿ ಗಂಗಾ ಯೋಜನೆ ಸಹ ಅಂಕಿ-ಅಂಶದ ಮ್ಯಾಜಿಕ್‌ಗಷ್ಟೇ ಸೀಮಿತವಾಗಿದೆ. ಹಿಂದಿನ ’ಗಂಗಾ ಕ್ರಿಯಾ ಯೋಜನೆ’ಯನ್ನು ಮರುನಾಮಕರಣ ಮಾಡಿ ’ನಮಾಮಿ ಗಂಗೆ’ ಎಂದು 2014ರಲ್ಲಿ ಹೊಸ ರೂಪ ನೀಡಲಾಯಿತು.

ಈ ಯೋಜನೆಗೆ ಕೇಂದ್ರ ಸರ್ಕಾರವು ಆರಂಭದಲ್ಲಿ ರೂ. 20,000 ಕೋಟಿಗಳಿಗೂ ಅನುದಾಣ ನಿಗದಿಪಡಿಸಿತ್ತು. ನಂತರ 2023ರಲ್ಲಿ ಇದನ್ನು 22,500 ಕೋಟಿ ರೂ.ಗಳಿಗೆ ವಿಸ್ತರಿಸಲಾಯಿತು. ಇಲ್ಲಿ2024೨೦೨೪ರಲ್ಲಿ ನಿರ್ಮಾಣ ಸಾಮಗ್ರಿಗಳ (ಸಿಮೆಂಟ್, ಉಕ್ಕು) ಬೆಲೆ ಏರಿಕೆಯಿಂದಾಗಿ ಸುಮಾರು ಶೇ. 40-50 ರಷ್ಟು ಹೆಚ್ಚಾಗಿದೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ ಅನುದಾನವು ಸಂಪೂರ್ಣವಾಗಿ ಬಳಕೆಯಾದಂತೆ ಕಂಡರೂ, ನೈಜ ಮೌಲ್ಯದಲ್ಲಿ ನದಿಯ ಶುದ್ಧೀಕರಣದ ವೇಗವು ಕುಂಟುತ್ತ ಸಾಗಿದೆ.

ಇನ್ನು ಹೊಸ ಹೆಸರು ಪಡೆದ ಯೋಜನೆಗಳ ಪ್ರಚಾರಕ್ಕೆ ತಗುಲುವ ವೆಚ್ಚ ಕಡಿಮೆಯೇನಿಲ್ಲ. ಅಂಕಿಅಂಶಗಳ ಪ್ರಕಾರ, ಕಳೆದ ೧೧ ವರ್ಷಗಳಲ್ಲಿ ಕೇಂದ್ರ ಸರ್ಕಾರವು ತನ್ನ ಯೋಜನೆಗಳ ಪ್ರಚಾರ ಮತ್ತು ಜಾಹೀರಾತಿಗಾಗಿ ಸರಿಸುಮಾರು 4,000 ಕೋಟಿ ರೂಪಾಯಿಗಳಿಗಿಂತಲೂ ಅಕ ಹಣವನ್ನು ಖರ್ಚು ಮಾಡಿದೆ.

ಈ ಬೃಹತ್ ಮೊತ್ತವನ್ನು ಆಯಾ ಯೋಜನೆಗಳ ಫಲಾನುಭವಿಗಳ ನೇರ ಸಹಾಯಕ್ಕೆ ಬಳಸಿದ್ದರೆ ಲಕ್ಷಾಂತರ ಬಡ ಕುಟುಂಬಗಳ ಜೀವನ ಮಟ್ಟ ಸುಧಾರಿಸಲು ಸಾಧ್ಯವಾಗುತ್ತಿತ್ತು ಎಂಬ ಟೀಕೆಗಳನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ.

ಒಟ್ಟಿನಲ್ಲಿ ಹೇಳುವುದಾದರೆ ವಿಕಸಿತ ಭಾರತದ ಕನಸು ನನಸಾಗಬೇಕಾದರೆ, ಅದು ಹೆಸರಿನ ಅಬ್ಬರವಲ್ಲದೆ ಫಲಾನುಭವಿಯ ತಟ್ಟೆಯಲ್ಲಿ ಅನ್ನ ಮತ್ತು ಆತನ ಕೈ ಗೆ ಉದ್ಯೋಗ ನೀಡುವ ಮೂಲಕವಷ್ಟೇ ಸಾಧ್ಯ.

  • ಕೆ.ಎಸ್. ಜಗನ್ನಾಥ್, ಹಿರಿಯ ಪತ್ರಕರ್ತ

Related Posts

Leave a Reply

Your email address will not be published. Required fields are marked *