ಚಿಕ್ಕಮಗಳೂರು ತಾಲೂಕಿನ ಪುರ ಗ್ರಾಮದಲ್ಲಿ ಕೂಲಿ ಕಾರ್ಮಿಕರೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿ ಸಾಯಿಸಿದೆ. ತೋಟದಲ್ಲಿ ಅವರು ನಡೆದುಕೊಂಡು ಹೋಗುತ್ತಿರುವಾಗ ಕಾಡಾನೆ ಏಕಾಏಕಿ ದಾಳಿ ನಡೆಸಿ ಕೊಂದು ಹಾಕಿದೆ. ಕಾಡಾನೆಯ ಈ ದಾಳಿಯಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ಸಮೀಪ ತಿರುವಳ್ಳಿಯ ಯಲ್ಲಪ್ಪ (45) ಮೃತಪಟ್ಟವರೆಂದು ಗುರುತಿಸಲಾಗಿದೆ. ನಾಗೇಶ್ ಗೌಡ ಎಂಬವರ ತೋಟದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಈ ದುರಂತ ಸಂಭವಿಸಿದೆ. ಯಲ್ಲಪ್ಪ ಕೂಲಿ ಕೆಲಸ ಹಾಗೂ ಗಾರೆ ಕೆಲಸ ಮಾಡಿಕೊಂಡಿದ್ದರು. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಕಳೆದ ನವೆಂಬರ್ನಲ್ಲಿ ವಿರಾಜಪೇಟೆ ಪಾಲಿಬೆಟ್ಟ ಬಳಿಯ ಎಮ್ಮೆಗುಂಡಿ ತೋಟದಲ್ಲಿ ಕಾಡಾನೆ ದಾಳಿಗೆ ಕಾರ್ಮಿಕರೊಬ್ಬರು ಬಲಿಯಾಗಿದ್ದಾರೆ. ಹಾಸನ ಸಮೀಪದ ರಾಮನಾಥಪುರದ ಹನುಮಂತ (57) ಕಾಫಿ ತೋಟದಲ್ಲಿ ಆನೆ ಟ್ರ್ಯಾಕರ್ ಆಗಿ ಕೆಲಸ ಮಾಡುತ್ತಿದ್ದರು. ಪರಿಸರದಲ್ಲಿ ಆನೆಗಳ ಇರುವಿಕೆ ಬಗ್ಗೆ ಇತರ ಕಾರ್ಮಿಕರಿಗೆ ಎಚ್ಚರಿಕೆ ನೀಡುವ ಕೆಲಸ ಅವರದಾಗಿತ್ತು. ಇದೇ ವೇಳೆ ದಾಳಿಗೆ ಬಲಿಯಾಗಿದ್ದರು.
ಕಳೆದ ಅಕ್ಟೋಬರ್ನಲ್ಲಿ ಶೃಂಗೇರಿ ತಾಲೂಕಿನ ಕೆರೆಮನೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಇಬ್ಬರು ರೈತರು ಬಲಿಯಾಗಿದ್ದಾರೆ. ಹರೀಶ್ (44) ಮತ್ತು ಉಮೇಶ್ (40) ಬಲಿಯಾದವರು. ಕೊಟ್ಟಿಗೆಗೆ ಸೊಪ್ಪು ತರಲೆಂದು ಇಬ್ಬರೂ ಕಾಡಿಗೆ ಹೋಗಿದ್ದಾಗ ಆನೆ ದಾಳಿ ನಡೆಸಿ ಈ ದುರಂತ ಸಂಭವಿಸಿತ್ತು. ಹೀಗೆ ಹಾಸನ, ಸಕಲೇಶಪುರ, ರಾಮನಗರ, ಆನೇಕಲ್ಗಳಲ್ಲಿ ಆನೆ ದಾಳಿಗೆ ವ್ಯಕ್ತಿಗಳು ಬಲಿಯಾಗಿರುವ ಹಲವು ಪ್ರಕರಣಗಳು ವರದಿಯಾಗಿವೆ.


