Thursday, November 13, 2025
Menu

ಮುಂದಿನ ಚುನಾವಣೆ ಹೊತ್ತಿಗೆ ಮಹಿಳಾ ಮೀಸಲಾತಿ; ಡಿಕೆ ಶಿವಕುಮಾರ್‌

“ಭವಿಷ್ಯದಲ್ಲಿ ಮಹಿಳಾ ಮೀಸಲಾತಿಯನ್ನು ಯಾರೂ ಸಹ ತಪ್ಪಿಸಲು ಆಗುವುದಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಶೇ. 33 ರಷ್ಟು ಮಹಿಳಾ ಮೀಸಲಾತಿಗೆ ಎರಡು ಮೂರು ಪಕ್ಷಗಳು ಅಂಕಿತ ಹಾಕಿವೆ. ಮಹಿಳಾ ನಾಯಕರ ಅವಶ್ಯಕತೆಯಿದೆ. ಈಗಾಗಲೇ ಸ್ಥಳೀಯ ಸಂಸ್ಥೆಗಳಲ್ಲಿ ಶೇ.50 ರಷ್ಟು ಮೀಸಲಾತಿಯಿದೆ. ಮುಂದಿನ ಚುನಾವಣೆ ಹೊತ್ತಿಗೆ ವಿಧಾನಸಭಾ ಚುನಾವಣೆಗೂ ಮಹಿಳಾ ಮೀಸಲಾತಿ ಬರಬಹುದು. ನಾವು ಸಹ ಇದರ ಬಗ್ಗೆ ತಯಾರಿ ನಡೆಸಿಕೊಳ್ಳುತ್ತಿದ್ದೇವೆ” ಎಂದು ಡಿಸಿಎಂ  ಡಿಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ಉದ್ಯಮಿಗಳ ಸಂಘಗಳ ಪ್ರತಿನಿಧಿಗಳ ಸಮಾವೇಶದಲ್ಲಿ ಭಾಗವಹಿಸಿ ಸಾಧಕಿಯರಿಗೆ ‘ಉಬುಂತು’ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದರು. “ತನ್ನ ಸ್ವಂತ ಶಕ್ತಿಯಿಂದ ನಾಯಕಿಯರು ಬೆಳೆಯುತ್ತಿಲ್ಲ. ಹೀಗೆ ಬೆಳೆದವರಿಗೆ ಹೆಚ್ಚು ಶಕ್ತಿ ನೀಡುವ ಕೆಲಸ ಮಾಡಬೇಕಿದೆ. ಉದಾಹರಣೆಗೆ ಡಿ.ಶಿವಕುಮಾರ್ ಮಗಳು, ತಾಯಿ, ಹೆಂಡತಿ ಹೀಗೆ ಪ್ರಭಾವ ಇರುವವರೇ ಬರುವಂತಾಗಿದೆ. ಹೊಸ ನಾಯಕಿಯರನ್ನು ಗುರುತಿಸಿ ಬೆಳೆಸಬೇಕಿದೆ” ಎಂದರು.

“ಗ್ರಾಮೀಣ ಭಾಗದಲ್ಲಿ ತಕ್ಕಮಟ್ಟಿಗೆ ಮಹಿಳೆಯರು ಒಂದಷ್ಟು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ನಗರ ಭಾಗದಲ್ಲಿಯೂ ಮಹಿಳೆಯರ ಪಾತ್ರ ಹಿರಿದಿದೆ. ಕುಟುಂಬದಲ್ಲಿ ಮಹಿಳೆಯರ ಪಾತ್ರವೇ ಮುಖ್ಯವಾದುದು. ಯಾವುದೇ ಆಹ್ವಾನ ಪತ್ರಿಕೆ ನೀಡುವಾಗ ಡಿಕೆ ಶಿವಕುಮಾರ್ ಹೆಸರು ಬರೆಯುವ ಮುಂಚಿತವಾಗಿ ಶ್ರೀಮತಿಯ ಹೆಸರು ಬರೆಯುತ್ತಾರೆ. ಶಿವ ಪಾರ್ವತಿ, ಲಕ್ಷ್ಮಿ ವೆಂಕಟೇಶ್ವರ ಎಂದು ಕರೆಯುತ್ತಾ” ಎಂದರು.

“ಯಶಸ್ವಿ ಪುರುಷನ ಹಿಂದೆ ಮಹಿಳೆಯ ಪಾತ್ರ ಇದ್ದೇ ಇರುತ್ತದೆ ಎನ್ನುವುದು ನನ್ನ ನಂಬಿಕೆ. ಹೆಣ್ಣು ಕುಟುಂಬದ ಕಣ್ಣು. ಮಹಿಳೆಯರು ರಾಜಕೀಯ ನಾಯಕತ್ವದ ಜೊತೆಯಲ್ಲಿ ಉದ್ದಿಮೆ ಹಾಗೂ ಇತರೇ ಕ್ಷೇತ್ರಗಳಲ್ಲೂ ನಾಯಕತ್ವ ಬೆಳೆಸಿಕೊಳ್ಳಬೇಕು” ಎಂದು  ಹೇಳಿದರು.

“ಮಹಿಳೆಯರು ಸಾಕಷ್ಟು ಸವಾಲುಗಳನ್ನು ಎದುರಿಸಿ ಬೆಳೆಯುವ ಪರಿಸ್ಥಿತಿಯಿದೆ‌. ನನಗೂ ಇದರ ಬಗ್ಗೆ ಅರಿವಿದೆ. ಯಾವುದೇ ವ್ಯವಹಾರ ತೆಗೆದುಕೊಂಡರು ಮಹಿಳೆಯರು ಎಂದು ಇತರರು ರಿಯಾಯಿತಿ ನೀಡುವುದಿಲ್ಲ. ಕಾರ್ಪೋರೇಟ್ ವಲಯದಲ್ಲಿಯೂ ಈಗ ಹೆಚ್ಚು ಮುಂದೆ ಬರುತ್ತಿದ್ದಾರೆ. ನಿಮ್ಮ ಖಾತೆಯಲ್ಲಿ ಹೆಚ್ಚು ಹಣವಿದ್ದರೆ ಮಾತ್ರ ಬ್ಯಾಂಕ್ ಗಳು ಸಹ ಹೆಚ್ಚು ಸಹಾಯ ಮಾಡಲು ಮುಂದೆ ಬರುತ್ತವೆ” ಎಂದರು.

“ರಾತ್ರಿ ಹೊತ್ತು ಹೋಟೆಲ್ ಸೇರಿದಂತೆ ಇತರೇ ಉದ್ದಿಮೆಗಳನ್ನು ನಡೆಸಲು ಪರವಾನಗಿ ನೀಡಬೇಕು ಎನ್ನುವ ಬೇಡಿಕೆಯಿದೆ‌. ಆಗ ಮಹಿಳಾ ಸುರಕ್ಷತೆಯೂ ಮುಖ್ಯವಾಗುತ್ತದೆ. ಈಗ ಎಐ ತಂತ್ರಜ್ಞಾನ ಸೇರಿದಂತೆ ಇತರೇ ತಂತ್ರಜ್ಞಾನ ಮಹಿಳಾ ರಕ್ಷಣೆಗೆ ನೆರವಾಗಿದೆ” ಎಂದು ತಿಳಿಸಿದರು.

“ಮಹಿಳೆಯರು ಒಟ್ಟಾಗಿ ಬೆಳೆಯಬೇಕು. ಜೊತೆಗೂಡುವುದು ಆರಂಭ, ಜೊತೆಗೂಡಿ ಚರ್ಚೆ ನಡೆಸುವುದು ಪ್ರಗತಿ, ಜೊತೆಗೂಡಿ ಕೆಲಸ ಮಾಡುವುದು ಯಶಸ್ಸು. ಮಹಿಳೆಯರು ತಾವು ಕಂಡ ಕನಸನ್ನು ನನಸು ಮಾಡಿಕೊಳ್ಳಲು ಶ್ರಮ, ಬದ್ಧತೆ, ಶಿಸ್ತು ಹಾಗೂ ತೊಡಗಿಸಿಕೊಳ್ಳುವಿಕೆ ಮುಖ್ಯ. ನನ್ನ ಕುಟುಂಬದಲ್ಲಿಯೂ ಸಹ ನನ್ನ ಪತ್ನಿ, ಮಕ್ಕಳ ಹಾಗೂ ಇಡೀ ಸಂಸಾರದ ಜವಾಬ್ದಾರಿಯನ್ನು ಹೊತ್ತು ಮುನ್ನಡೆಸಿದ್ದಾರೆ” ಎಂದರು.

ಗ್ಯಾರಂಟಿ ಯೋಜನೆಯಿಂದ ಮಹಿಳೆಯರ ಮೇಲಿನ ಒತ್ತಡ ಕಡಿಮೆ

“ನಾ ನಾಯಕಿ ಎನ್ನುವ ಕಾರ್ಯಕ್ರಮ ರೂಪಿಸಿದ್ದೆ‌. ಅಂದರೆ ಪ್ರತಿಯೊಂದು ಕುಟುಂಬದ ಮಹಿಳೆಯರೂ ನಾಯಕಿಯರು ಎಂಬುದು ಅದರ ತಾತ್ಪರ್ಯ. ಈ ಕಾರಣಕ್ಕೆ ನಮ್ಮ ಸರ್ಕಾರ ಗೃಹಲಕ್ಷ್ಮೀ ಹಾಗೂ ಗ್ಯಾರಂಟಿ ಯೋಜನೆಯ ಮೂಲಕ ಮಹಿಯರ ಬೆನ್ನಿಗೆ ನಿಂತಿದೆ. ನಾವು ನೀಡುವ ಹಣದಿಂದ ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ, ಪೌಷ್ಟಿಕ ಆಹಾರ ಸೇರಿದಂತೆ ಅನೇಕ ರೀತಿಯಲ್ಲಿ ಸಹಾಯವಾಗುತ್ತಿದೆ. ಒಂದಷ್ಟು ಜನ ಮಹಿಳೆಯರು ಸೋಮಾರಿಗಳಾಗುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಆದರೆ ಶಕ್ತಿ ಯೋಜನೆ ಮೂಲಕ ಅನೇಕ ಪುಣ್ಯಕ್ಷೇತ್ರಗಳಿಗೆ ಪ್ರಮಾಣ ಮಾಡುತ್ತಾ ಇರುವುದರಿಂದ ಮಾನಸಿಕ ಒತ್ತಡವೂ ದೂರವಾಗಿದೆ. ಈ ಗ್ಯಾರಂಟಿ ಯೋಜನೆಗಳಿಂದ 1 ಲಕ್ಷ ಕೋಟಿ ಹಣ ಮಹಿಳೆಯರ ಖಾತೆ ಸೇರಿದೆ” ಎಂದರು.

“ಬೆಂಗಳೂರಿನಲ್ಲಿ ಇರುವ 25 ಲಕ್ಷ ಎಂಜಿನಿಯರ್ ಗಳಲ್ಲಿ ಶೇ. 50 ರಷ್ಟು ಮಹಿಳೆಯರೇ ಇದ್ದಾರೆ. ವೈದ್ಯರಲ್ಲಿ ಶೇ. 38 ರಷ್ಟು, ಪ್ಯಾರ ಮೆಡಿಕಲ್ ಹಾಗೂ ನರ್ಸಿಂಗ್ ಕ್ಷೇತ್ರದಲ್ಲಿ ಶೇ 80 ರಷ್ಟು, ಹೋಟೆಲ್ ಉದ್ದಿಮೆಯಲ್ಲಿ ಶೇ. 60 ರಷ್ಟು ಮಹಿಳೆಯರು ಇದ್ದಾರೆ”. “ಎಫ್ ಕೆಸಿಸಿಐ ಸಾರಥ್ಯವನ್ನು ಮಹಿಳೆಯೊಬ್ಬರು ವಹಿಸಿಕೊಂಡಿದ್ದಾರೆ ಎನ್ನುವುದು ತಿಳಿಯಿತು. ಇವರ ಸಾರಥ್ಯದಲ್ಲಿ ಹೆಚ್ಚು ಬೆಳವಣಿಗೆಯಾಗಲಿ. ಮಹಿಳಾ ಸಾರಥ್ಯದಲ್ಲಿ ಯಶಸ್ಸು ಕಾಣಲಿ. ಈ ಸಮಾವೇಶದಲ್ಲಿ ಚರ್ಚೆಯಾದ ವಿಚಾರಗಳು ಸರ್ಕಾರಕ್ಕೆ ನೀಡಿ ಅದನ್ನು ಸಾಕಾರಗೊಳಿಸಲು ಚರ್ಚೆ ನಡೆಸಲಾಗುವುದು” ಎಂದು ಹೇಳಿದರು.

“ಕೊರೋನಾ ಸಂದರ್ಭದಲ್ಲಿ ಸದನದಲ್ಲಿ ಮಾತನಾಡುವಾಗ ಹಲವರು ಕಾರ್ಮಿಕರಿಗೆ ಪರಿಹಾರ ನೀಡಬೇಕು ಎಂದು ಹೇಳುತ್ತಿದ್ದರು‌. ಆಗ ನಾನು ಉದ್ಯೋಗ ಸೃಷ್ಟಿ ಮಾಡಿರುವ ಉದ್ಯೋಗದಾತರಿಗೂ ಪರಿಹಾರ ನೀಡಬೇಕು ಎಂದು ವಾದಿಸಿದ್ದೆ. ಕೇಂದ್ರ ಸರ್ಕಾರ 20 ಲಕ್ಷ ಕೋಟಿ ನೀಡುತ್ತೇನೆ ಎಂದರೂ ಎಲ್ಲಿಯೂ ಇದು ಕಾಣಲಿಲ್ಲ” ಎಂದರು.

Related Posts

Leave a Reply

Your email address will not be published. Required fields are marked *