ಮಹಿಳೆಯರ ಮೇಲಿನ ಹಿಂಸಾಚಾರ ಕೊನೆಗೊಂಡು ಎಲ್ಲ ಶೋಷಿತ, ದಮನಿತ ಮಹಿಳೆಯರಿಗೆ ನ್ಯಾಯ ಖಾತ್ರಿಪಡಿಸುವಂತೆ ಆಗ್ರಹಿಸಿ “ನಿರ್ಭಯಾ ದಿನ”ವಾದ ಇಂದು ಧರ್ಮಸ್ಥಳದ ಬೆಳ್ತಂಗಡಿಯಲ್ಲಿ ‘ಮಹಿಳೆಯರ ಮೌನ ಮೆರವಣಿಗೆ ಹಾಗೂ ಮಹಿಳಾ ನ್ಯಾಯ ಸಮಾವೇಶ’ ನಡೆಯುತ್ತಿದೆ. ಈ ಸಮಾವೇಶದಲ್ಲಿ ಮಹಿಳೆಯರು ಮಾತ್ರ ಭಾಗವಹಿಸುತ್ತಿದ್ದಾರೆ.
ಧರ್ಮಸ್ಥಳ ಎಂಬ ಊರಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ‘ಕೊಂದವರು ಯಾರು?’ ಸಹಿ ಸಂಗ್ರಹ ಅಭಿಯಾನ ಈಗಾಗಲೇ ನಡೆದಿದೆ. ಈ ಅಭಿಯಾನದ ಮುಂದುವರಿದ ಭಾಗವಾಗಿ ಬೆಳ್ತಂಗಡಿಯಲ್ಲಿ ಮಹಿಳಾ ನ್ಯಾಯ ಸಮಾವೇಶ ನಡೆಯುತ್ತಿದೆ. ರಾಜ್ಯದ ನಾನಾ ಮೂಲೆಗಳಿಂದ ಸಾವಿರಾರು ಮಹಿಳೆಯರು ಪಾಲ್ಗೊಳ್ಳುತ್ತಿದ್ದಾರೆ.
ಮಹಿಳಾ ಹೋರಾಟಗಾರ್ತಿಯರು, ಬರಹಗಾರರಾದ ಡಾ.ವಸುಂಧರಾ ಭೂಪತಿ, ಡಾ. ದು ಸರಸ್ವತಿ, ಇಂದಿರಾ ಕೃಷ್ಣಪ್ಪ, ಡಾ. ಕೆ.ಶರೀಫಾ, ಡಾ.ಎನ್ ಗಾಯತ್ರಿ, ಚಂಪಾವತಿ, ಗೌರಮ್ಮ, ಮೀನಾಕ್ಷಿ, ಇಂದ್ರಮ್ಮ, ಜ್ಯೋತಿ ಎ., ಕೆ.ಎಸ್. ವಿಮಲಾ, ಶಾಂತಮ್ಮ, ಮಧು ಭೂಷಣ್, ಮಮತಾ ಯಜಮಾನ್, ಗೌರಿ, ಗೀತಾ ಸಾಧನಾ, ವೀಣಾ ಹರಿಗೋವಿಂದ್, ಮಲ್ಲಿಗೆ ಸಿರಿಮನೆ, ಸುಷ್ಮಾ ವರ್ಮಾ ಮೊದಲಾದವರು ಆಂದೋಲನವನ್ನು ಮುನ್ನಡೆಸುತ್ತಿದೆ. ಡಿಸೆಂಬರ್ 10ರಂದು ತಂಡವು ಬೆಂಗಳೂರು ನಗರದ ಗಾಂಧಿ ಭವನದಲ್ಲಿ ಸಾಂಸ್ಕೃತಿಕ ಅಭಿವ್ಯಕ್ತಿ, ತಮಟೆ ವಾದನ, ಹಾಡು, ಕಿರುಪುಸ್ತಕ ಬಿಡುಗಡೆ, ಸಹಿಸಂಗ್ರಹ ಸಲ್ಲಿಕೆ ಕಾರ್ಯಕ್ರಮ ಕೂಡ ನಡೆಸಿದೆ.
ಆಂದೋಲನದ ಹಕ್ಕೊತ್ತಾಯಗಳು ಹೀಗಿವೆ,
ಧರ್ಮಸ್ಥಳದ ವ್ಯಾಪ್ತಿಯಲ್ಲಿ ನಡೆದಿರುವ ಎಲ್ಲ ಅಪರಾಧ ಪ್ರಕರಣಗಳ ಸಮಗ್ರ ತನಿಖೆ ಮುಗಿಯುವ ತನಕ ಎಸ್‌ಐಟಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಅಪರಾಧಿಗಳ ಪತ್ತೆಗೆ ಎಸ್‌ಐಟಿಗೆ ಸರ್ಕಾರ ಸೂಕ್ತ ಸೌಕರ್ಯಗಳನ್ನು ಒದಗಿಸಬೇಕು.
ಹಿಂದಿನ ಪ್ರಕರಣಗಳು, ಹೊಸದಾಗಿ ದಾಖಲಾದ ಮತ್ತು ದಾಖಲಾಗುವ ದೂರುಗಳು ಹಾಗೂ ಸಾಕ್ಷಿಗಳ ದಿಢೀರ್ ಸಾವಿನ ಪ್ರಕರಣಗಳನ್ನು ಎಸ್‌ಐಟಿ ಸಮಗ್ರವಾಗಿ ತನಿಖೆ ಮಾಡಬೇಕು.
ಸೌಜನ್ಯ, ಪದ್ಮಲತಾ ಮತ್ತು ಯಮುನ/ ನಾರಾಯಣರ ಸಾವು ಪ್ರಕರಣಗಳನ್ನು ಎಸ್‌ಐಟಿ ತನಿಖೆಗೆ ಒಳಪಡಿಸಬೇಕು. ಸೌಜನ್ಯ ಪ್ರಕರಣದ ಸಾಕ್ಷಿಗಳಾದ ರವಿ ಪೂಜಾರಿ, ಗೋಪಾಲಕೃಷ್ಣ ಗೌಡ, ದಿನೇಶ್ ಗೌಡ, ವಾರಿಜ ಆಚಾರ್ಯ ಮತ್ತು ಹರೀಶ್ ಮಡಿವಾಳ ಅವರ ದಿಢೀರ್ ಸಾವುಗಳು ತನಿಖೆಯಾಗಬೇಕು.
ಸೌಜನ್ಯ ಪ್ರಕರಣದ ತನಿಖೆಯಲ್ಲಿ ನಿಜವಾದ ಅಪರಾಧಿಗಳು ತಪ್ಪಿಸಿಕೊಳ್ಳಲು ಅವಕಾಶ ನೀಡಿದ ವೈದ್ಯರು, ತನಿಖಾಧಿಕಾರಿಗಳು ಹಾಗೂ ಇತರ ಸರ್ಕಾರಿ ಅಧಿಕಾರಿಗಳ ವಿರುದ್ಧ ಐಪಿಎಸ್ ಸೆಕ್ಷನ್ 166ಎ ಹಾಗೂ ಇತರ ಕಾನೂನುಗಳ ಅನ್ವಯ ಕಠಿಣ ಶಿಕ್ಷೆ ವಿಧಿಸಬೇಕು. ಸಿಬಿಐ ನ್ಯಾಯಾಲಯದ ತೀರ್ಪಿನ ಅನ್ವಯ ಕಟ್ಟುನಿಟ್ಟಾಗಿ ಕ್ರಮ ಜರುಗಿಸಬೇಕು.
ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳಿಗೆ ಸಂಬಂಧಿಸಿದ ಉಗ್ರಪ್ಪ ಸಮಿತಿ ವರದಿಯ ಮತ್ತು ನ್ಯಾಯಮೂರ್ತಿ ವರ್ಮಾ ಸಮಿತಿ ವರದಿಯ ಶಿಫಾರಸುಗಳನ್ನು ಜಾರಿಗೊಳಿಸಬೇಕು.


