Menu

ಮಹಿಳಾ ಮೀಸಲು ಜಾರಿಯಾಗಲಿದೆ, ವಿಧಾನಸಭೆ, ಲೋಕಸಭೆ ಚುನಾವಣೆ ಸ್ಪರ್ಧೆಗೆ ಸಜ್ಜಾಗಿ: ಡಿ.ಕೆ.ಶಿವಕುಮಾರ್

“2028 ರ ಹೊತ್ತಿಗೆ ಮಹಿಳಾ ಮೀಸಲಾತಿ ಅಸ್ತಿತ್ವಕ್ಕೆ ಬರಬಹುದು, ಆದ ಕಾರಣ ಮಹಿಳೆಯರು ಚುನಾವಣೆಗೆ ಸ್ಪರ್ಧಿಸಲು ತಯಾರಾಗಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಮ್ಮನ್ನು ಯಾರೂ ತಡೆಯುವುದಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕಲಬುರ್ಗಿಯಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಉದ್ಘಾಟಿಸಿ ಮಾತನಾಡಿ, ಈಗ ಪಂಚಾಯಿತಿಯಿಂದ ಪಾರ್ಲಿಮೆಂಟ್ ತನಕ ಮಹಿಳೆಯರು ಅಧಿಕಾರದಲ್ಲಿ ಇದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಶೇ.50 ರಷ್ಟು ಮೀಸಲಾತಿ ನೀಡಲಾಗಿದೆ. ಈಗ ಅನೇಕ ಸ್ಥಳೀಯ ಸಂಸ್ಥೆಗಳಲ್ಲಿ ಹೆಂಡತಿಯನ್ನು ಸದಸ್ಯೆಯನ್ನಾಗಿಸಿ ಗಂಡ ಅಧಿಕಾರ ಚಲಾಯಿಸುತ್ತಾ ಇರುತ್ತಾನೆ. ಮುಂದಕ್ಕೆ ಇದೆಲ್ಲಾ ಕಡಿಮೆಯಾಗುತ್ತದೆ. ಮಹಿಳೆಯರೇ ಇದನ್ನೆಲ್ಲಾ ಸಮರ್ಥವಾಗಿ ನಿಭಾಯಿಸುತ್ತಾರೆ ಎಂದರು.

“ಮಹಿಳಾ ಮೀಸಲಾತಿ ಜಾರಿಯಾದರೆ ಇಲ್ಲಿ ಇರುವ ಯಾರ ಸ್ಥಾನ ಹೋಗುತ್ತದೆ ಎಂದು ಹೇಳಲು ಆಗುವುದಿಲ್ಲ. ಅಜಯ್ ಸಿಂಗ್, ಅಲ್ಲಮಪ್ರಭು, ಬಿ.ಆರ್.ಪಾಟೀಲ್, ಪ್ರಿಯಾಂಕ್ ಖರ್ಗೆ ಯಾರದ್ದು ಬೇಕಾದರೂ ಆಗಬಹುದು. ಅದಕ್ಕೆ ಈಗಿನಿಂದಲೇ ಸಜ್ಜಾಗಿ” ಎಂದರು.

“ಕಳೆದ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸಿದ್ದು ಹೆಣ್ಣುಮಗಳು. ಸರ್ಕಾರಿ ಶಾಲೆಯಲ್ಲಿ ಓದಿ ಇಡೀ ರಾಜ್ಯದ ಗಮನ ಸೆಳೆದಳು. ಬೆಂಗಳೂರು ಭಾಗದ ಹುಡುಗಿಯರು ಬರಲಿಲ್ಲ ಎಂಬುದನ್ನು ಗಮನಿಸಬೇಕು. ಮಹಿಳೆಯರು ಈಗ ಎಲ್ಲಾ ರಂಗಗಳಲ್ಲೂ ಬೆಳೆಯುತ್ತಿದ್ದಾರೆ. ಮುಂದಕ್ಕೆ ಈ ದೇಶವನ್ನು ಆಳುವ ಶಕ್ತಿ ಮಹಿಳೆಯರಿಗಿದೆ. ಕಾಂಗ್ರೆಸ್ ಪಕ್ಷದಿಂದ ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದರು. ಪಕ್ಷದ ಅಧ್ಯಕ್ಷರಾಗಿದ್ದರು. ಮುಂದಕ್ಕೂ ದೇಶದ ಚುಕ್ಕಾಣಿ ಹಿಡಿಯುವವರು ಇದ್ದಾರೆ. ಶೇ.‌33 ರಷ್ಟು ಮಹಿಳಾ ಮೀಸಲಾತಿ ಜಾರಿಯಾದರೆ ದೇಶದಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ” ಎಂದರು.

“ನಮ್ಮ ಸಂಸ್ಕೃತಿ ಮಹಿಳಾ ಪರವಾದುದು. ಯಾವುದೇ ದೇವರ ಹೆಸರನ್ನು ಪ್ರಸ್ತಾಪಿಸುವಾಗ ಮೊದಲು ಸ್ತ್ರೀ ದೇವತೆಗಳ ಹೆಸರು ಹೇಳುತ್ತೇವೆ. ಉದಾಹರಣೆಗೆ ಲಕ್ಣ್ಮೀ ವೆಂಕಟೇಶ್ವರ, ಪಾರ್ವತಿ ಪರಮೇಶ್ವರ ಹೀಗೆ. ನಮಗೆ ಆಹ್ವಾನ ಪತ್ರಿಕೆ ಕೊಡುವಾಗಲೂ ಶ್ರೀಮತಿ ಮತ್ತು ಶ್ರೀ ಡಿ.ಕೆ.ಶಿವಕುಮಾರ್ ಎಂದು ಬರೆಯುತ್ತಾರೆ‌. ಈ ಮೂಲಕ ಹೆಣ್ಣು ಮಕ್ಕಳಿಗೆ ಮೊದಲ ಆದ್ಯತೆ ನೀಡುವುದು ನಮ್ಮ ಸಂಸ್ಕೃತಿ” ಎಂದು ಹೇಳಿದರು.

“ಶಾಲೆಗೆ ಸೇರುವಾಗ ತಂದೆ ಭಾಷೆ ಕೇಳುವುದಿಲ್ಲ. ಮಾತೃಭಾಷೆ ಯಾವುದು ಎಂದು ಕೇಳುತ್ತಾರೆ.‌ ಹೆಣ್ಣು ಕುಟುಂಬದ ಕಣ್ಣು, ಹೆಣ್ಣಿನಿಂದಲೇ ಸಮಾಜ ಬೆಳೆಯುತ್ತದೆ ಎಂದು ನಂಬಿದವರು. ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಕನ್ನಡಿ ಇದ್ದಂತೆ” ಎಂದರು.

“ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಇಲ್ಲಿಯ ತನಕ ಮಹಿಳೆಯರಿಗೆ ಹೆಚ್ಚು ಒತ್ತನ್ನು ನೀಡುತ್ತಾ ಬಂದಿದೆ. ಹೆಣ್ಣು ಬೆಳೆದರೆ ಸಮಾಜ ಮತ್ತು ಕುಟುಂಬ ಎರಡೂ ಬೆಳೆಯುತ್ತದೆ ಎಂದು ನಂಬಿದ್ದೇವೆ. 5 ಗ್ಯಾರಂಟಿಗಳಲ್ಲಿ 4 ಗ್ಯಾರಂಟಿಗಳು ಮಹಿಳೆಯರಿಗೆ ಅನುಕೂಲವಾಗುವಂತಹವು. ನಿಮಗೆ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ” ಎಂದು ಹೇಳಿದರು.

ಮಹಿಳೆಯರಿಗೆ ಮಾತ್ರ ಅವಕಾಶ ನೀಡಿ: “ಮಹಿಳಾ ದಿನಾಚರಣೆಯನ್ನು ಸಂಪೂರ್ಣವಾಗಿ ಮಹಿಳೆಯರೇ ನಡೆಸಿಕೊಡಬೇಕು. ಪುರುಷರು ವೇದಿಕೆಯ ಕೆಳಗೆ ಕುಳಿತುಕೊಳ್ಳಬೇಕು. ಅವರ ಶಕ್ತಿಯನ್ನು ಈ ಮೂಲಕವೂ ನಾವೆಲ್ಲ ನೋಡಬಹುದು. ಬೆಂಗಳೂರಿನಲ್ಲಿ ದೊಡ್ಡ ಕಾರ್ಯಕ್ರಮ ಇದ್ದರೂ ಈ ಭಾಗದ ಮಹಿಳೆಯರ ಆಶೀರ್ವಾದ ಪಡೆಯಬೇಕು ಎಂದು ಬಂದಿದ್ದೇನೆ. ಮಹಿಳಾ ಪರವಾದ ಕಾರ್ಯಕ್ರಮಗಳನ್ನು ಮಹಿಳೆಯರಿಂದಲೇ ನೆರವೇರಿಸಬೇಕು. ಪುರುಷ ಅಧಿಕಾರಿಗಳು ಇನ್ನು ಮುಂದೆ ಇಂತಹ ಕಾರ್ಯಕ್ರಮಗಳಲ್ಲಿ ಇರಬಾರದು” ಎಂದು ಡಿಸಿಎಂ ಸೂಚನೆ ನೀಡಿದರು.

Related Posts

Leave a Reply

Your email address will not be published. Required fields are marked *