ಮಹಾರಾಷ್ಟ್ರದ ವ್ಯಕ್ತಿಯೊಬ್ಬ ಬೆಳಗಾವಿಯಲ್ಲಿ ಮಹಿಳೆಯರಿಗೆ ವರ್ಕ್ ಫ್ರಂ ಹೋಮ್ ನೀಡುವುದಾಗಿ ನಂಬಿಸಿ ಸಾವಿರಾರು ಮಹಿಳೆಯರನ್ನು ವಂಚಿಸಿದ್ದು, ಎಂಟು ಸಾವಿರ ಮಹಿಳೆಯರಿಂದ 12 ಕೋಟಿ ರೂ. ದೋಚಿ ಪರಾರಿಯಾಗಿದ್ದಾನೆ. ವಂಚಿತ ಮಹಿಳೆಯರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿ ಹಣವನ್ನು ಹಿಂತಿರುಗಿಸಲು ಒತ್ತಾಯಿಸಿದ್ದಾರೆ.
ಮಹಿಳೆಯರಿಂದ ತಲಾ 2,500 ರಿಂದ 5000 ರೂ.ಗಳನ್ನು ಪಡೆದು ವಂಚನೆ ಮಾಡಲಾಗಿದೆ. ಸೊಲ್ಲಾಪುರದಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬ ಅಗರಬತ್ತಿ ಪ್ಯಾಕ್ ಮಾಡುವ ಮೂಲಕ ಹಣ ಗಳಿಬಹುದುದೆಂದು ಹೇಳಿ ತಮ್ಮನ್ನು ವಂಚಿಸಿದ್ದಾನೆ ಎಂದು ಬೆಳಗಾವಿಯ ಪೊಲೀಸ್ ಠಾಣೆಗೆ ಆಗಮಿಸಿದ್ದ ಮಹಿಳೆಯರು ಆರೋಪಿಸಿದ್ದಾರೆ. ಮಹಾರಾಷ್ಟ್ರದ ಬಾಬಾಸಾಹೇಬ್ ಕೋಲೇಕರ್ ತನ್ನನ್ನು ಅಜಯ್ ಪಾಟೀಲ್ ಎಂದು ಪರಿಚಯಿಸಿಕೊಂಡಿದ್ದ. ಒಬ್ಬ ಮಹಿಳೆಯಿಂದ ಗುರುತಿನ ಚೀಟಿಗಾಗಿ 2,500 ರಿಂದ 5,000 ರೂ.ವರೆಗೆ ಹಣ ಪಡೆದಿದ್ದು, ಪ್ರತಿಯೊಬ್ಬ ಮಹಿಳೆ ಚೈನ್-ಮಾರ್ಕೆಟಿಂಗ್ ವ್ಯವಸ್ಥೆಯಡಿ ಇನ್ನಿಬ್ಬರು ವ್ಯಕ್ತಿಗಳನ್ನು ಸಂಪರ್ಕಿಸುವಂತೆ ಒತ್ತಾಯಿಸಿದ್ದ.
ಈ ಯೋಜನೆಯು ಸ್ವ-ಸಹಾಯ ಗುಂಪುಗಳಂತಹ ಮಹಿಳಾ ಗುಂಪುಗಳನ್ನು ಗುರಿಯಾಗಿಸಿಕೊಂಡಿತ್ತು, ಪ್ರತಿ ಮಹಿಳೆಯರ ಮನೆಗೆ ಅಗರಬತ್ತಿಗಳನ್ನು ತಲುಪಿಸಲು ಆಟೋ ರಿಕ್ಷಾ ಬಾಡಿಗೆಯಾಗಿ 2,500 ರಿಂದ 5,000 ರೂ.ಗಳವರೆಗೆ ಮುಂಗಡ ಶುಲ್ಕವನ್ನು ಅವರೇ ಪಾವತಿಸಬೇಕಿತ್ತು. ಮಹಿಳೆಯರು ಅದನ್ನು ಪ್ಯಾಕ್ ಮಾಡಿ ಹಿಂತಿರುಗಿಸಬೇಕಾಗಿತ್ತು.
ಮನೆಯಲ್ಲಿ ಕುಳಿತುಕೊಂಡು ಅಗರಬತ್ತಿಗಳನ್ನು ಪ್ಯಾಕ್ ಮಾಡುವುದರಿಂದ ಪ್ರತಿ ತಿಂಗಳು 2,500 ರೂ. ಗಳಿಸಬಹುದು ಎಂದು ಮಹಿಳೆಯನ್ನು ವಂಚಕ ನಂಬಿಸಿದ್ದ. ಇತರರನ್ನು ಸೇರಿಸಿಕೊಂಡರೆ ತಮ್ಮ ಗಳಿಕೆ ಹೆಚ್ಚಾಗುತ್ತದೆ ಎಂದೂ ನಂಬಿಸಿದ್ದ. ಆದರೆ ಹೂಡಿಕೆ ಮಾಡಿದ ಬಳಿಕ ಪ್ರತಿಫಲ ಮಹಿಳೆಯರ ಕೈಗೆ ಸಿಗದಿದ್ದಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸ್ ಆಯುಕ್ತರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಆರೋಪಿಯನ್ನು ಬಂಧಿಸಬೇಕು ಮತ್ತು ನಮ್ಮ ಹಣವನ್ನು ಹಿಂದಿರುಗಿಸಲು ಸಹಾಯ ಮಾಡಬೇಕು ಎಂದು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.


