Thursday, February 05, 2026
Menu

ಮಹಿಳೆಯ ಅಪಹರಣ: ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್‌, ಹೆಚ್‌.ಡಿ ರೇವಣ್ಣಗೆ ಸಂಕಷ್ಟ

ಕೆ.ಆರ್‌. ನಗರ ಮಹಿಳೆಯ ಅಪಹರಣ ಪ್ರಕರಣ ರದ್ದು ಕೋರಿ ಶಾಸಕ ಹೆಚ್‌.ಡಿ ರೇವಣ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌, ಈ ಹಿಂದೆ ವಿಚಾರಣಾ ನ್ಯಾಯಾಲಯವು ರೇವಣ್ಣ ವಿರುದ್ಧ ದೋಷಾರೋಪಣೆ ಹೊರಿಸದಂತೆ ಹೈಕೋರ್ಟ್ ಮಧ್ಯಂತರ ತಡೆ ನೀಡಿತ್ತು, ಆ ತಡೆಯಾಜ್ಞೆಯನ್ನು ತೆರವು ಮಾಡಿದೆ.

ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿರುವುದರಿಂದ, ಈಗ ವಿಚಾರಣಾ ನ್ಯಾಯಾಲಯವು ಹೆಚ್.ಡಿ. ರೇವಣ್ಣ ವಿರುದ್ಧ ಅಧಿಕೃತವಾಗಿ ದೋಷಾರೋಪಣೆ ಹೊರಿಸುವ ಪ್ರಕ್ರಿಯೆಯನ್ನು ಆರಂಭಿಸಬಹುದು. ಈ ಪ್ರಕರಣದಲ್ಲಿ ರೇವಣ್ಣ ಅವರನ್ನು ಎಸ್‌ಐಟಿ ಬಂಧಿಸಿತ್ತು, ಬಳಿಕ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದರು.

ಹೈಕೋರ್ಟ್‌ನ ಈ ಆದೇಶದಿಂದ ಎಚ್‌.ಡಿ.ರೇವಣ್ಣಗೆ ಹಿನ್ನಡೆಯಾಗಿದೆ. ಪ್ರಕರಣ ರದ್ದು ಕೋರಿ ಎಚ್.ಡಿ.ರೇವಣ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸುನಿಲ್‌ ದತ್‌ ಯಾದವ್‌ ಅವರಿದ್ದ ಹೈಕೋರ್ಟ್‌ ಪೀಠವು, ಎಚ್.ಡಿ.ರೇವಣ್ಣ ವಿರುದ್ಧ ದೋಷಾರೋಪ ಹೊರಿಸದಂತೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಿ ಆದೇಶಿಸಿದೆ. ಎಚ್‌.ಡಿ.ರೇವಣ್ಣ ಪರ ವಕೀಲರು ವಾದ ಮಂಡನೆಗೆ ಕಾಲಾವಕಾಶ ಕೋರಿದ್ದರು. ವಕೀಲರ‌ ಮನವಿಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

 

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿಳಂಬವಾಗಿ ದೂರು ದಾಖಲಿಸಲಾಗಿದೆ ಎಂದು ಪ್ರಕರಣವನ್ನು ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್‌ ರದ್ದುಪಡಿಸಿತ್ತು. ಇದರಿಂದ ರೇವಣ್ಣ ಆರೋಪ ಮುಕ್ತವಾಗಿದ್ದರು. ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮನೆಕೆಲಸದಾಕೆ ನೀಡಿದ ದೂರಿನ ಅನ್ವಯ ಹೊಳೆನರಸೀಪುರ ಪೊಲೀಸ್‌ ಠಾಣೆಯಲ್ಲಿ 2024ರ ಏ.28ರಂದು ಎಚ್.ಡಿ. ರೇವಣ್ಣ ಹಾಗೂ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿತ್ತು.

Related Posts

Leave a Reply

Your email address will not be published. Required fields are marked *