ಪೊಲೀಸರು ಸೇರಿದಂತೆ ಸರ್ಕಾರಿ ಅಧಿಕಾರಿಗಳು, ಬ್ಯಾಂಕ್ ಮ್ಯಾನೇಜರ್‌ಗಳನ್ನು ಒಲಿಸಿ ಮದುವೆಯಾಗಿ ನಂಬಿಸುವುದು, ಮತ್ತೆ ಕೆಲವರನ್ನು ಸಂಬಂಧ ಬೆಳೆಸಿ ಬಲೆಗೆ ಬೀಳಿಸುವುದು, ಬಳಿಕ ಅವರಲ್ಲಿದ್ದ ಹಣವನ್ನೆಲ್ಲ ದೋಚುವುದನ್ನೇ ಜೀವನವನ್ನಾಗಿಸಿಕೊಂಡಿದ್ದ ಉತ್ತರ ಪ್ರದೇಶದ ಮಹಿಳೆಯೊಬ್ಬಳು ಈಗ ಪೊಲೀಸರ ಅತಿಥಿಯಾಗಿದ್ದಾಳೆ.
ಕೆಲವು ಬ್ಯಾಂಕ್ ಮ್ಯಾನೇಜರ್ ಮತ್ತು ಪೊಲೀಸ್ ಅಧಿಕಾರಿಗಳನ್ನು ಮದುವೆಯಾಗಿರುವ ಈ ವಂಚಕಿ ಕೆಲವರನ್ನು ಹನಿಟ್ರ್ಯಾಪ್ ಮಾಡಿ ಹಣ ಲೂಟಿ ಮಾಡಿದ್ದಾಳೆ. 15ಕ್ಕೂ ಅಧಿಕ ಪುರುಷರು ಈಕೆಯ ಹನಿಟ್ರ್ಯಾಪ್ಗೆ ಒಳಗಾಗಿ ಹೇಳಿಕೊಳ್ಳಲಾಗದೆ ಕೋಟಿ ಕೋಟಿ ಹಣ ಕಳೆದುಕೊಂಡಿರುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಆಕೆಯ ಜೊತೆ ದೊಡ್ಡ ತಂಡವೇ ಕೆಲಸ ಮಾಡುತ್ತಿರುವುದು ಕೂಡ ಗೊತ್ತಾಗಿದೆ.
ಉತ್ತರ ಪ್ರದೇಶದ ಕಾನ್ಪುರದ ನಿವಾಸಿ ದಿವ್ಯಾಂಶಿ ಸರ್ಕಾರಿ ಅಧಿಕಾರಿಗಳೊಂದಿಗೆ ಸಂಬಂಧ ಬೆಳೆಸುವ ಮೂಲಕ ಅವರನ್ನು ಬಲೆಗೆ ಬೀಳಿಸುವುದು, ಕೆಲವರನ್ನು ಮದುವೆಯಾಗುವುದು ನಂತರ ಕೆಲವರ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದು, ಮದುವೆಯಾದವರ ವಿರುದ್ಧ ಕಿರುಕುಳ ಪ್ರಕರಣಗಳನ್ನು ದಾಖಲಿಸುವುದನ್ನೇ ವೃತ್ತಿಯಾಗಿಸಿಕೊಂಡು ಹಣ ವಸೂಲಿ ಮಾಡುತ್ತಿದ್ದಳು. ಸರ್ಕಾರಿ ಅಧಿಕಾರಿಗಳು ಇಂಥ ಮೋಸಕ್ಕೆ ಒಳಗಾಗಿರುವುದನ್ನು ಬಾಯಿ ಬಿಡುತ್ತಿರಲಿಲ್ಲ.
ಉತ್ತರ ಪ್ರದೇಶದ ಗ್ವಾಲ್ಟೋಲಿ ಪೊಲೀಸ್ ಠಾಣೆಯಲ್ಲಿ ಸಬ್-ಇನ್ಸ್‌ಪೆಕ್ಟರ್ ಆದಿತ್ಯ ಕುಮಾರ್ ಲೊವಾಚ್ ಎಂಬವರನ್ನು ಕೂಡ ಆಕೆ ಮೋಸದಿಂದ ಮದುವೆಯಾಗಿದ್ದಳು. ಫೆಬ್ರವರಿ 17, 2024ರಲ್ಲಿ ಇವರಿಬ್ಬರ ಮದುವೆಯಾದ ಬಳಿಕ ಆಕೆ ಪದೇ ಪದೆ ಹಣ ಕೇಳಿ ಕಿರುಕುಳ ನೀಡುತ್ತಿದ್ದಳು. ತಮ್ಮ ಬ್ಯಾಂಕ್ ಹಣ ಖಾಲಿಯಾಗುತ್ತಿರುವುದು ಗಮನಕ್ಕೆ ಬಂದಿತ್ತು. ಇದು ತಿಳಿದ ಆಕೆ ಕಿರುಕುಳದ ಕೇಸ್ ಹಾಕುವುದಾಗಿ ಹೆದರಿಸುತ್ತಿದ್ದಳು. ಈಕೆಯ ತಂಡ ಆದಿತ್ಯ ಕುಮಾರ್ ಅವರಿಗೆ ಪದೇ ಪದೆ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಈ ಒತ್ತಡ, ಬೆದರಿಕೆಗೆ ನೊಂದ ಅವರು ಎರಡು ಬಾರಿ ಆ*ತ್ಮಹತ್ಯೆಗೂ ಯತ್ನಿಸಿದ್ದಾರೆಂದು ಹೇಳಲಾಗಿದೆ. ಇವರ ವಿರುದ್ಧ ಆಕೆ ಕಿರುಕುಳ, ದಾಂಪತ್ಯ ದ್ರೋಹ ಮತ್ತು ₹14.5 ಲಕ್ಷ ದುರುಪಯೋಗ ಆರೋಪ ಹೊರಿಸಿ ದೂರು ದಾಖಲಿಸಿ ದ್ದರು. ಆಗ ಆದಿತ್ಯ ಕುಮಾರ್ ಕಿರುಕುಳ, ವಂಚನೆ ಮತ್ತು ಸುಲಿಗೆ ಆರೋಪ ಹೊರಿಸಿ ದೂರು ದಾಖಲಿಸಿದ್ದಾರೆ.
ದೂರು ದಾಖಲಾದ ಬಳಿಕ ತನಿಖೆ ಆರಂಭಿಸಿದಾಗ ದಿವ್ಯಾಂಶಿಯ ವಂಚನೆಯ ವಿರಾಟ್ ದರ್ಶನವಾಗಿದೆ. ಆಕೆಯ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ 10 ಕ್ಕೂ ಹೆಚ್ಚು ವಿಭಿನ್ನ ಖಾತೆಗಳಿಗೆ 8 ಕೋಟಿ ರೂಪಾಯಿಗೂ ಹೆಚ್ಚು ವಹಿವಾಟು ಪತ್ತೆಯಾಗಿದೆ. ಕೆಲವು ಮೀರತ್ ವ್ಯಾಪ್ತಿಯಲ್ಲಿ ನಿಯೋಜನೆಗೊಂಡಿರುವ ಪೊಲೀಸ್ ಅಧಿಕಾರಿಗಳಿಗೆ ಸಂಬಂಧಿಸಿದ್ದಾಗಿವೆ. ಪ್ರಕರಣದ ತನಿಖೆ ಮುಂದುವರಿಯುತ್ತಿದೆ.


