ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಮಹಿಳೆಯೊಬ್ಬರು ಗಂಡನಿಂದ 12 ಕೋಟಿ ರೂ., ಮುಂಬೈನಲ್ಲಿ ಮನೆ, ಬಿಎಂಡಬ್ಲ್ಯೂ ಕಾರು ಬೇಕೆಂದು ಬೇಡಿಕೆಯಿಟ್ಟಿದ್ದು, ಸುಪ್ರೀಂ ಕೋರ್ಟ್ ಆಕೆಯನ್ನು ತರಾಟೆಗೆ ತೆಗೆದುಕೊಂಡಿದೆ. ಮಹಿಳೆ ಮದುವೆಯಾಗಿ 18 ತಿಂಗಳಾಗಿತ್ತು. ಅಷ್ಟರಲ್ಲೇ ದಾಂಪತ್ಯ ಬೇಸರವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಜೀವನಾಂಶವಾಗಿ 12 ಕೋಟಿ ರೂ., ಮುಂಬೈನಲ್ಲಿ ಮನೆ, ಬಿಎಂಡಬ್ಲ್ಯೂ ಕಾರು ಬೇಕೆಂದು ಬೇಡಿಕೆಯಿಟ್ಟಿದ್ದಾರೆ. ಪ್ರಕರಣದ ವಿಚಾರಣೆಯ ಸಮಯದಲ್ಲಿ ಬೇಡಿಕೆಯನ್ನು ಕೇಳಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮದುವೆಯಾಗಿ ಕೇವಲ 18 ತಿಂಗಳಾಯಿತು. ಈಗ ನೀವು 12 ಕೋಟಿ ರೂ. ಮಾತ್ರವಲ್ಲದೆ ಬಿಎಂಡಬ್ಲ್ಯೂ ಕೂಡ ಬಯಸುತ್ತೀರಾ, ಅಂದರೆ ನೀವು ಸಂಸಾರ ಮಾಡಿದ ಪ್ರತಿ ತಿಂಗಳಿಗೆ ಒಂದು ಕೋಟಿ ರೂ. ನೀಡಬೇಕಾ, ವಿದ್ಯಾವಂತರಾದ ನೀವೇ ಏಕೆ ಸಂಪಾದಿಸಬಾರದು ಎಂದು ಪ್ರಶ್ನಿಸಿದ್ದಾರೆ.
ಮಹಿಳೆ ಎಂಬಿಎ ಪದವೀಧರೆಯಾಗಿದ್ದು, ಐಟಿ ತಜ್ಞರಾಗಿ ಅನುಭವ ಹೊಂದಿದ್ದಾರೆ ಎಂದು ಎತ್ತಿ ತೋರಿಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಗಂಡ ನೀಡುವ ಜೀವನಾಂಶವನ್ನು ನೀವು ಅವಲಂಬಿಸಬಾರದು ಎಂದು ಸ್ವಾವಲಂಬನೆ ಮತ್ತು ಘನತೆಯ ಮಹತ್ವವನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಪ್ರಕರಣದ ತೀರ್ಪನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದೆ.