ಮದುವೆಗೆ ನಿರಾಕರಿಸಿದ್ದ ಯುವತಿಗೆ ವ್ಯಕ್ತಿಯೊಬ್ಬ ಹೆಚ್‌ಐವಿ ಪಾಸಿಟಿವ್ ರಕ್ತ ಇಂಜೆಕ್ಟ್ ಮಾಡಿದ್ದು, ಇದರಿಂದ ಭಯಗೊಂಡ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಆರೋಪಿ ಮನೋಹರ್ ಎಂಬಾತ ಯುವತಿಗೆ ಮನೆಯಲ್ಲಿ ಬಲವಂತವಾಗಿ ತನ್ನ ಹೆಚ್‌ಐವಿ ಸೋಂಕಿತ ರಕ್ತವನ್ನು ಇಂಜೆಕ್ಟ್ ಮಾಡಿ ಪರಾರಿಯಾಗಿದ್ದ.
ಮನೋಹರ್ ಮತ್ತು ಯುವತಿ ಸಂಬಂಧಿಕರು. ಆತನ ಜೊತೆ ತಮ್ಮ ಮಗಳ ಮದುವೆ ಮಾಡಲು ಪೋಷಕರು ಮೊದಲೇ ಯೋಜಿಸಿದ್ದರು. ಆತನ ಪೋಷಕರು ಹೆಚ್ಐವಿ ಪೀಡಿತರಾಗಿದ್ದರು. ಯುವತಿಯ ಪೋಷಕರು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಹುಡುಗನಿಗೂ ವೈರಸ್ ಪರೀಕ್ಷೆ ಮಾಡಿಸಿದ್ದರು. ಅದರಲ್ಲಿ ಅವನಿಗೂ ಸೋಂಕು ಇರುವುದು ದೃಢಪಟ್ಟಿತು. ಯುವತಿ ತಕ್ಷಣ ಮದುವೆಯನ್ನು ರದ್ದುಗೊಳಿಸಿದಳು. ಇದರಿಂದ ಸಿಟ್ಟಿಗೆದ್ದ ಆರೋಪಿ ಆಕೆಗೆ ಹೆಚ್‌ಐವಿ ಇಂಜೆಕ್ಷನ್ ನೀಡಿದ್ದಾನೆ.
ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಘಟನೆ ನಡೆದು ತಿಂಗಳ ನಂತರ ಯುವತಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ನಡೆದಿದ್ದ ಘಟನೆಯಿಂದ ಯುವತಿ ತೀವ್ರ ಮಾನಸಿಕ ಒತ್ತಡದಲ್ಲಿದ್ದಳು. ಭಯ, ಸಾಮಾಜಿಕ ಕಳಂಕ ಮತ್ತು ಭಾವನಾತ್ಮಕ ಆಘಾತಕ್ಕೆ ಒಳಗಾಗಿದ್ದಳು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.


