ಅಸ್ಸಾಂನ ಸಿಲ್ಚಾರ್ ಪಟ್ಟಣದಲ್ಲಿ ಗೆಳೆಯನೊಂದಿಗೆ ಡಿನ್ನರ್‌ಗೆ ಹೋಗಿದ್ದ 28 ವರ್ಷದ ಮಹಿಳೆಗೆ ಚಾಕು ತೋರಿಸಿ ಏಳು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಕೆಲವು ದಿನಗಳ ಹಿಂದೆ ಘಟನೆ ನಡೆದಿದ್ದು, ಸಂತ್ರಸ್ತೆ ದೂರು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಏಳು ಮಂದಿ ಒಬ್ಬೊಬ್ಬರಾಗಿ ಅತ್ಯಾಚಾರ ಎಸಗಿ ತನ್ನಿಂದ ಅವರ ಖಾತೆಗೆ ಹತ್ತು ಸಾವಿರ ರೂ. ವರ್ಗಾಯಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಆಕೆ ಸಿಲ್ಚಾರ್ ಪಟ್ಟಣದಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಬೈಪಾಸ್ ರಸ್ತೆಯಲ್ಲಿ ಗೆಳೆಯನೊಂದಿಗೆ ಡಿನ್ನರ್‌ಗೆ ತೆರಳಿದ್ದರು. ಅವರು ಕಾರಿನಲ್ಲಿದ್ದಾಗ ಮಹೀಂದ್ರಾ ಥಾರ್‌ನಲ್ಲಿ ಬಂದ ಪುರುಷರ ಗುಂಪು ದಾಳಿ ಮಾಡಿ ಮಹಿಳೆ ಮತ್ತು ಗೆಳೆಯನನ್ನು ಎಳೆದಾಡಿದ್ದಾರೆ. ಬಳಿಕ ಒಬ್ಬೊಬ್ಬರಾಗಿ ಗೆಳೆಯನ ಮುಂದೆಯೇ ಅತ್ಯಾಚಾರ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಸಿಲ್ಚಾರ್ ಸದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅತ್ಯಾಚಾರ ಎಸಗಿದವರಲ್ಲಿ ಇಬ್ಬರನ್ನು ಮಹಿಲೆ ಗುರುತಿಸಿದ್ದಾರೆ. ಸಿಲ್ಚಾರ್ ಪಟ್ಟಣದ ಆಶ್ರಮ ರಸ್ತೆ ಪ್ರದೇಶದ ನೀಲೋತ್ಪಾಲ್ ದಾಸ್ (25) ಮತ್ತು ಸುಬೋಲ್ ದಾಸ್ (27) ಎಂದು ಪೊಲೀಸರು ತಿಳಿಸಿದ್ದಾರೆ.


