ಬೆಂಗಳೂರಿನ ತಿಲಕ್ನಗರ ಮುಖ್ಯರಸ್ತೆಯಲ್ಲಿ ನಾಲ್ಕು ಮಕ್ಕಳ ತಾಯಿಯನ್ನು ಹತ್ಯೆಗೈದು ಆಟೋದಲ್ಲಿ ಶವವಿಟ್ಟು ಪ್ರಿಯಕರ ಪರಾರಿ ಆಗಿದ್ದಾನೆ. ಸಲ್ಮಾ(35) ಹತ್ಯೆಯಾದ ಮಹಿಳೆ, ಪ್ರಿಯಕರ ಸುಬ್ಬುಮಣಿ ಕೊಲೆ ಆರೋಪಿ. ಆಟೋದಲ್ಲಿ ಮೃತದೇಹ ಇರುವುದನ್ನು ನೋಡಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೇಸ್ ದಾಖಲಿಸಿಕೊಂಡು ತಿಲಕ್ನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ತಿಲಕ್ನಗರ ಠಾಣಾ ವ್ಯಾಪ್ತಿಯಲ್ಲಿ ಸುಬ್ಬುಮಣಿ ವಾಸವಿದ್ದ. ಪತಿ ಮೃತಪಟ್ಟ ನಂತರ ಸುಬ್ಬುಮಣಿ ಮತ್ತು ಸಲ್ಮಾ ಮಧ್ಯೆ ಗೆಳೆತನವಿತ್ತು. ರಾತ್ರಿ ಇಬ್ಬರ ನಡುವೆ ಜಗಳವಾಗಿದ್ದು, ಸುಬ್ಬುಮಣಿಯು ಆಕೆಯ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ. ಬಳಿಕ ಸಲ್ಮಾ ಮೃತದೇಹಕ್ಕೆ ಬಟ್ಟೆಸುತ್ತಿ ಕೆಟ್ಟುನಿಂತಿದ್ದ ಆಟೋದಲ್ಲಿಟ್ಟು ಪರಾರಿ ಆಗಿದ್ದಾನೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕಳಿಸಿದ್ದಾರೆ.
ದಂಪತಿ ಜಗಳ: ಅವಳಿ ಮಕ್ಕಳ ಕೊಂದ ತಂದೆ
ಮಹಾರಾಷ್ಟ್ರದ ಬುಲ್ದಾನಾದಲ್ಲಿ ಗಂಡ-ಹೆಂಡತಿ ಮಧ್ಯೆ ಜಗಳ ನಡೆದಿದ್ದು, ಪತ್ನಿ ತವರು ಮನೆಗೆ ಹೋಗಿದ್ದಕ್ಕೆ ಕೋಪಗೊಂಡ ಪತಿ ತನ್ನ ಅವಳಿ ಮಕ್ಕಳ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ಅವಳಿ ಹೆಣ್ಣುಮಕ್ಕಳನ್ನು ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಕೊಂದು ಹಾಕಿದ್ದಾನೆ.
ಪೊಲೀಸ್ ಠಾಣೆಗೆ ಹೋಗಿ ಮಕ್ಕಳನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ವಾಶಿಮ್ ಜಿಲ್ಲೆಯ ನಿವಾಸಿ ರಾಹುಲ್ ಚವಾಣ್ ಎಂದು ಗುರುತಿಸಲಾಗಿದೆ.ಜಗಳ ನಡೆದ ಬಳಿಕ ಚವಾಣ್ ಪತ್ನಿ ತವರು ಮನೆಗೆ ಹೋಗಲು ನಿರ್ಧರಿಸಿದ್ದಾರೆ. ಆಕೆ ತವರು ಮನೆಗೆ ಹೋದ ಕೋಪದ ಭರದಲ್ಲಿ ಆತ ಮಕ್ಕಳನ್ನು ಬುಲ್ಧಾನಾ ಜಿಲ್ಲೆಯ ಅಂಚಾರ್ವಾಡಿಯಲ್ಲಿರುವ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಕತ್ತು ಸೀಳಿ ಕೊಲೆ ಮಾಡಿದ್ದಾನೆ.
ಘಟನೆಯ ನಂತರ ಚವಾಣ್ ನೇರವಾಗಿ ವಾಶಿಮ್ ಪೊಲೀಸ್ ಠಾಣೆಗೆ ಹೋಗಿ ಮಕ್ಕಳನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸ್ ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ತನಿಖೆ ಮುಂದುವರಿಸಿದ್ದಾರೆ.


