ಬೆಳಗಾವಿ ಜಿಲ್ಲೆಯ ಗಣೇಶಪುರದ ಲಕ್ಷ್ಮಿ ನಗರದಲ್ಲಿ ಅಪಾರ್ಟ್‌ಮೆಂಟ್‌ಗೆ ನುಗ್ಗಿ ಮಂಗಳಸೂತ್ರ ಕಿತ್ತುಕೊಂಡು ಕತ್ತು ಹಿಸುಕಿ ಮಹಿಳೆಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.
ಲಕ್ಷ್ಮಿ ನಗರದ ನಿವಾಸಿ ಅಂಜನಾ ಅಜೀತ ದಡ್ಡೀಕರ್(53) ಕೊಲೆಯಾದವರು. ಅಪಾರ್ಟ್ಮೆಂಟ್ ಮನೆಯಲ್ಲಿ ಗಂಡ-ಹೆಂಡತಿ ಮಾತ್ರ ವಾಸವಾಗಿದ್ದರು. ಪತಿ ಅಜಿತ್ ಆಟೋ ಓಡಿಸುತ್ತಾರೆ. ಅವರು ಕೆಲಸ ಮುಗಿಸಿ ಸಂಜೆ ಮನೆಗೆ ಬಂದಾಗ ಪತ್ನಿ ಕೊಲೆಯಾಗಿದ್ದರು.
ಪ್ರಜ್ಞೆತಪ್ಪಿ ಬಿದ್ದಿದ್ದ ಅಂಜನಾ ಅವರನ್ನು ಬೆಳಗಾವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಫಲಕಾರಿಯಾಗಿಲ್ಲ. ಕೊರಳಲ್ಲಿದ್ದ ಮಂಗಳಸೂತ್ರ, ಕಿವಿಯೊಲೆ, ಬೆರಳಲ್ಲಿದ್ದ ಎರಡು ಬಂಗಾರದ ಉಂಗುರ ಕಳವಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಸ್ಥಳಕ್ಕೆ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ನಿರಂಜನರಾಜೆ ಅರಸ್, ಕ್ಯಾಂಪ್ ಪೊಲೀಸ್ ಠಾಣೆ ಸಿಪಿಐ ಅಲ್ತಾಫ್ ಮುಲ್ಲಾ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಆಗಮಿಸಿ ಪರಿಶೀಲಿಸಿದ್ದಾರೆ. ಬೆಳಗಾವಿ ಕ್ಯಾಂಪ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಸಂಜೆ 7.30ರ ಸುಮಾರಿಗೆ ಅಂಜನಾ ಎಂಬವರನ್ನು ಕತ್ತು ಹಿಸುಕಿ ಕೊಲೆ ಮಾಡಿ ಮೈಮೇಲಿನ ಚಿನ್ನಾಭರಣ ಕದ್ದೊಯ್ದಿದ್ದಾರೆ. ಮನೆಯಲ್ಲಿ ಗಂಡ-ಹೆಂಡತಿ ಮಾತ್ರ ಇದ್ದರು. ಇಬ್ಬರು ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದು, ಪುಣೆಯಲ್ಲಿದ್ದಾರೆ. ಸ್ವಲ್ಪ ಸಾಕ್ಷಿ ಸಿಕ್ಕಿದೆ. ಆರೋಪಿಗಳನ್ನು ಪತ್ತೆ ಹಚ್ಚುತ್ತೇವೆ. ಪರಿಚಯಸ್ಥರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದು ಡಿಸಿಪಿ ನಿರಂಜನರಾಜೆ ಅರಸ್ ತಿಳಿಸಿದ್ದಾರೆ.