ಬೆಂಗಳೂರಿನ ಹೊಂಗಸಂದ್ರದ ಮನೆಯೊಂದರಲ್ಲಿ ಗೃಹಿಣಿ ಮೇಲೆ ದುಷ್ಕರ್ಮಿಗಳು ಮಾರಾಕಾಸ್ತ್ರದಿಂದ ದಾಳಿ ನಡೆಸಿಹತ್ಯೆ ಮಾಡಿರುವ ಘಟನೆ ನಡೆದಿದೆ. ಶಿರಸಿಯ ಪ್ರಮೋದಾ(35) ಹತ್ಯೆಯಾದ ಮಹಿಳೆ.
ಹತ್ಯೆಯಾದ ಮಹಿಳೆಯ ಪತಿ ಸುರೇಶ, ಅಕ್ಕ ತಂಗಿ ಇಬ್ಬರನ್ನು ಮದುವೆಯಾಗಿದ್ದ. ಕೊಲೆಯಾಗಿರುವ ಪ್ರಮೋದಾ ಎರಡನೇ ಹೆಂಡತಿ. ಆಕೆಗೆ ಇಬ್ಬರು ಮಕ್ಕಳಿದ್ದು, ದಾಂಪತ್ಯ ಕಲಹದಿಂದ ಪತಿಯಿಂದ ದೂರವಾಗಿ ಪ್ರತ್ಯೇಕವಾಗಿ ವಾಸವಿದ್ದರು.
ಬೊಮ್ಮನಹಳ್ಳಿ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮಹಿಳೆ ಅನೈತಿಕ ಸಂಬಂಧಕ್ಕೆ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ. ಆಕೆ ಪತಿಯಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದು ಏಕೆ, ಹತ್ಯೆಗೈದು ಪರಾರಿಯಾಗಿರುವ ಆರೋಪಿಗಳು ಯಾರು ಎಂಬುದು ಸೇರಿದಂತೆ ಎಲ್ಲ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ದಾಂಪತ್ಯ ಕಲಹ: ಪತಿ ಪತ್ನಿ ಆತ್ಮಹತ್ಯೆ
ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಸಿರಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡರಾಜ್ ಕ್ಯಾಂಪ್ನಲ್ಲಿ ದಾಂಪತ್ಯ ಕಲಹದ ಕಾರಣ ಗಂಡ-ಹೆಂಡತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಂಬರೀಶ್(24), ಶೃತಿ (20) ಮೃತಪಟ್ಟವರು. ಎರಡು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದ ಈ ದಂಪತಿ ಸಣ್ಣಪುಟ್ಟ ವಿಚಾರಗಳಿಗೆ ಜಗಳವಾಗುತ್ತಿದ್ದರು. ಕ್ಷುಲ್ಲಕ ಕಾರಣಕ್ಕೆ ವಾಗ್ವಾದ ನಡೆದು ದಂಪತಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ಬಂದ ಸಿರಿಗೇರಿ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಶವರಗಳನ್ನು ಮರಣೋತ್ತರ ಪರೀಕ್ಷೆಗೆ ಕಂಪ್ಲಿ ಸರ್ಕಾರಿ ಆಸ್ಪತ್ರೆ ರವಾನಿಸಿದ್ದಾರೆ. ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


