ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿ ಶಿಕ್ಷಣ ಇಲಾಖೆಯ ಎಫ್ಡಿಎ ಅಧಿಕಾರಿ ಜಯಲಕ್ಷ್ಮಿ ಎಂಬವರನ್ನು ಆಸ್ತಿ, ಹಣಕ್ಕಾಗಿ ಸ್ವಂತ ತಂಗಿ ಮತ್ತು ಸಾಕುಮಗನೇ ಉಸಿರುಗಟ್ಟಿಸಿ ಕೊಲೆ ಮಾಡಿರು ವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ತುರುವೇಕೆರೆ ಕಂಟಲಗೆರೆ ಗ್ರಾಮದ ಜಯಲಕ್ಷ್ಮಿ (58) ಬಿಇಒ ಕಚೇರಿಯಲ್ಲಿ ಎಫ್ಡಿಎ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ಅವರಿಗೆ ಮಕ್ಕಳು ಇಲ್ಲ. ಅನುಕಂಪದ ಆಧಾರದ ಮೇಲೆ ಪತಿಯ ಕೆಲಸ ಸಿಕ್ಕಿತ್ತು. ಜಯಲಕ್ಷ್ಮಿ ಅವರು ತಂಗಿ ಅನುಸೂಯ ಎಂಬಾಕೆಯ ಮಗ ಚಂದ್ರಶೇಖರ್ನನ್ನು ದತ್ತು ಪಡೆದು ಸಾಕುತ್ತಿದ್ದರು. ಜೋಗಿಹಳ್ಳಿ ಯಲ್ಲಿ ರುವ ಮನೆಯಲ್ಲಿ ಇವರೆಲ್ಲರೂ ವಾಸವಾಗಿದ್ದರು. ಜಯಲಕ್ಷ್ಮಿತಮ್ಮ ಹೆಸರಿನಲ್ಲಿದ್ದ ಆಸ್ತಿಯನ್ನೆಲ್ಲಾ ದತ್ತು ಮಗ ಚಂದ್ರಶೇಖರ್ ಹೆಸರಿಗೆ ವಿಲ್ ಮಾಡಿದ್ದರು ಎನ್ನಲಾಗಿದೆ.
ಬುಧವಾರ ರಾತ್ರಿ ಜಯಲಕ್ಷ್ಮಿ ಮನೆಯಲ್ಲಿ ಮೃತಪಟ್ಟಿದ್ದರು. ಮರುದಿನ ಬೆಳಗ್ಗೆ ಚಂದ್ರಶೇಖರ್, ಜಯಲಕ್ಷ್ಮಿ ಸಹಜ ಸಾವು ಎಂದು ಬಿಂಬಿಸಿ ಅಂತ್ಯಕ್ರಿಯೆ ಮಾಡಲು ಸಿದ್ಧತೆ ನಡೆಸಿದ್ದರು. ಈ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದ ಚಿಕ್ಕನಾಯಕನಹಳ್ಳಿ ಪೊಲೀಸರು, ಅಂತ್ಯಕ್ರಿಯೆಯನ್ನು ಅರ್ಧಕ್ಕೆ ನಿಲ್ಲಿಸಿದರು.
ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದಾಗ ಜಯಲಕ್ಷ್ಮಿ ಅವರ ಸಾವು ಸಹಜವಲ್ಲ ಎಂಬುದು ಗೊತ್ತಾಗಿದೆ. ವಿಚಾರಣೆ ತೀವ್ರಗೊಳಿಸಿದಾಗ ಹಣ ಮತ್ತು ಆಸ್ತಿಯ ಹಪಾ ಹಪಿಯಿಂದ ಜಯಲಕ್ಷ್ಮಿ ಚಂದ್ರಶೇಖರ್ ಮತ್ತು ಅನುಸೂಯ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಚಿಕ್ಕನಾಯಕನಹಳ್ಳಿ ಪೊಲೀಸರು ಕೊಲೆ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


