ಆನ್‌ಲೈನ್‌ನಲ್ಲಿ ವರ್ಕ್‌ಫ್ರಮ್ ಹೋಂ ಕುರಿತಾದ ಜಾಹೀರಾತು ನಂಬಿ ಚಿಕ್ಕಮಗಳೂರಿನ ಮಹಿಳೆಯೊಬ್ಬರು 2,57,600 ರೂ. ಕಳೆದುಕೊಂಡಿದ್ದಾರೆ. ಸೈಬರ್ ವಂಚಕರು ಟೆಲಿಗ್ರಾಂ ಆ್ಯಪ್ ಮೂಲಕ ‘ವರ್ಕ್‌ಫ್ರಮ್ ಹೋಂ ಮಾಡಲು ಇಚ್ಛಿಸುವವರು ಈ ಲಿಂಕ್ ಕ್ಲಿಕ್ ಮಾಡಿ’ ಎಂದು ಜಾಹೀರಾತು ಕಳುಹಿಸಿದ್ದರು. ಮಹಿಳೆ ಲಿಂಕ್ ಕ್ಲಿಕ್ ಮಾಡಿ, ವಂಚಕರ ಸೂಚನೆಗಳನ್ನು ಪಾಲಿಸಿದ್ದಾರೆ.
ಮೊದಲಿಗೆ ವಂಚಕರು ಸಣ್ಣ ಟಾಸ್ಕ್‌ಗಳನ್ನು ನೀಡಿ ವಿಶ್ವಾಸ ಗಳಿಸಲು 1000 ಮತ್ತು 1300 ರೂ. ಪಾವತಿಸಿದ್ದಾರೆ. ನಂತರ ಹಣ ಇನ್ವೆಸ್ಟ್ ಮಾಡಿದರೆ ದುಪ್ಪಟ್ಟು ಲಾಭ ಎಂದು ನಂಬಿಸಿ ಹಂತ ಹಂತವಾಗಿ 2,57,600 ಪಡೆದುಕೊಂಡು ಮೋಸ ಮಾಡಿದ್ದಾರೆ.
ಸಂತ್ರಸ್ತ ಮಹಿಳೆ ಚಿಕ್ಕಮಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದು, ಇಂತಹ ಆನ್‌ಲೈನ್ ಜಾಹೀರಾತುಗಳ ಬಗ್ಗೆ ಜನರು ಎಚ್ಚರಿಕೆಯಿಂದಿರಬೇಕು ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಶಿಗ್ಗಾವಿಯಲ್ಲಿ ವಿದ್ಯಾರ್ಥಿನಿಯ ಅಪಹರಿಸಿ ಅತ್ಯಾಚಾರ
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ತಡಸದಲ್ಲಿ ನರ್ಸಿಂಗ್ ಕಾಲೇಜಿನಲ್ಲಿ ಪ್ಯಾರಾಮೆಡಿಕಲ್ ಕೋರ್ಸ್‌ನ ಮೊದಲನೇ ವರ್ಷದ ವಿದ್ಯಾರ್ಥಿನಿಯನ್ನು ಅಪಹರಿಸಿ ಕಾಡಿನಲ್ಲಿ ಅತ್ಯಾಚಾರ ಎಸಗಿರುವ ಪ್ರಕರಣ ವರದಿಯಾಗಿದೆ.
ಪ್ರಕರಣ ಸಂಬಂಧ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ಆರೋಪಿಗಳಾದ ಅಭಿಷೇಕ್ ಲಮಾಣಿ ಮತ್ತು ಪ್ರವೀಣ್ ಲಮಾಣಿ ಎಂಬ ಇಬ್ಬರು ಯುವಕರು ಕಾರಿನಲ್ಲಿ ಅಪಹರಿಸಿದ್ದಾರೆ. ಬಾಯಿಗೆ ಬಟ್ಟೆ ಕಟ್ಟಿ ಕಾಡಿಗೆ ಕರೆದೊಯ್ದು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ್ದಾರೆ.
ಘಟನೆಯ ವೀಡಿಯೊ ಚಿತ್ರೀಕರಿಸಿ ಯಾರಿಗಾದರೂ ತಿಳಿಸಿದರೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ವಿದ್ಯಾರ್ಥಿನಿಗೆ ಆರೋಪಿಗಳು ಬೆದರಿಕೆ ಹಾಕಿದ್ದಾರೆ. ತಡಸ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಅಭಿಷೇಕ್ ಲಮಾಣಿಯನ್ನು ಬಂಧಿಸಿದ್ದಾರೆ. ಪ್ರವೀಣ್ ಲಮಾಣಿಯನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.