ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಶನಿವಾರ ಕುರ್ಜುಗಳು (ತೇರು) ಉರುಳಿಬಿದ್ದಾಗ ಗಾಯಗೊಂಡಿದ್ದ ಯುವತಿ ಮೃತ ಪಟ್ಟಿದ್ದಾರೆ. ಕುರ್ಜು ಕೆಳಗೆ ಸಿಲುಕಿ28ರ ಯುವಕ ಲೋಹಿತ್ ಶನಿವಾರವೇ ಮೃತಪಟ್ಟಿದ್ದು, ಜ್ಯೋತಿ ಇಂದು ಅಸು ನೀಗಿದ್ದಾರೆ. ಗಂಭೀರವಾಗಿ ಗಾಯಗೊಂಡಿ ರುವ ಮತ್ತೊಬ್ಬ ಯುವಕ ರಾಕೇಶ್ ಸದ್ಯ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.
ಜಾತ್ರೆಗೆ ಗ್ರಾಮಗಳಿಂದ 150ಕ್ಕೂ ಹೆಚ್ಚು ಅಡಿ ಎತ್ತರದ ಕುರ್ಜುಗಳು ಆಗಮಿಸಿದ್ದವು. ತೇರು ಎಳೆದು ತರುವ ಸಂದರ್ಭದಲ್ಲಿ ಶನಿವಾರ ದುರಂತ ಸಂಭವಿಸಿತ್ತು. ಗಾಳಿ ಸಹಿತ ಮಳೆಯಿಂದಾಗಿ ಆಯತಪ್ಪಿ ತೇರು ಬಿದ್ದಿದೆ. ತೇರಿನಲ್ಲಿ ಇದ್ದ ಹಲವರಿಗೆ ಗಾಯಗಳಾಗಿವೆ.
ಮದ್ದೂರಮ್ಮ ಜಾತ್ರೆಗೆ 200 ವರ್ಷಗಳ ಇತಿಹಾಸವಿದೆ. ಟ್ರ್ಯಾಕ್ಟರ್ ಹಾಗೂ ನೂರಾರು ಎತ್ತುಗಳ ಮೂಲಕ ಎಳೆದು ಕುರ್ಜು ತರುವ ಹೆಸರಾಂತ ಜಾತ್ರೆ ಇದು. ಅತಿ ಎತ್ತರ ತೇರು ಕಟ್ಟಿ ಎಳೆದು ತರುವ ಜಾತ್ರೆ ನೋಡಲು ಲಕ್ಷಾಂತರ ಜನ ಆಗಮಿಸುತ್ತಾರೆ. ಈ ಅವಘಡ, ಸಾವುಗಳಿಂದಾಗಿ ಜಾತ್ರೆಮಯ ಸಂಭ್ರಮದ ಬದಲು ಸೂತಕದ ಛಾಯೆ ಆವರಿಸಿದೆ.