ಚಲಿಸುವ ವ್ಯಾನ್ ನಲ್ಲಿ 28 ವರ್ಷದ ಮಹಿಳೆ ಮೇಲೆ 2 ಗಂಟೆಗಳ ನಿರಂತರ ಸಾಮೂಹಿಕ ಅತ್ಯಾಚಾರ ಎಸಗಿದ ದುಷ್ಕರ್ಮಿಗಳು ನಂತರ ರಸ್ತೆಯಲ್ಲಿ ಬಿಸಾಕಿ ಹೋದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಫರೀದಾಬಾದ್ ನಲ್ಲಿ ನಡೆದಿದೆ.
ಸೋಮವಾರ ಮತ್ತು ಮಂಗಳವಾರದ ನಡುವೆ ರಾತ್ರಿ ಈ ಘಟನೆ ನಡೆದಿದ್ದು, ಮನೆಗೆ ಹೋಗಲು ರಸ್ತೆ ಬದಿ ವಾಹನಕ್ಕಾಗಿ ಕಾಯುತ್ತಿದ್ದ ನಿಂತಿದ್ದ ಮಹಿಳೆ ಬಳಿ ನಿಂತ ವ್ಯಾನ್ ನಿಂದ ಇಳಿದ ಇಬ್ಬರು ಆಕೆಯನ್ನು ಬಲವಂತವಾಗಿ ಡ್ರಾಪ್ ಮಾಡುವುದಾಗಿ ವ್ಯಾನ್ ಗೆ ಹತ್ತಿಸಿ ಕರೆದುಕೊಂಡು ಹೋಗಿದ್ದಾರೆ.
ಮಹಿಳೆಯನ್ನು ವ್ಯಾನ್ ನಲ್ಲಿ ಹತ್ತಿಸಿಕೊಂಡ ನಂತರ ಗುರ್ ಗಾಂವ್ ಕಡೆ ತೆರಳಿದೆ. ಸುಮಾರು 2 ರಿಂದ ಎರಡೂವರೆ ಗಂಟೆಗಳ ಕಾಲ ದುಷ್ಕರ್ಮಿಗಳು ಆಕೆಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾರೆ.
ಮಹಿಳೆ ಗೋಗರೆದರೂ ಬಿಡದೇ ದುಷ್ಕರ್ಮಿಗಳು ಆಕೆಗೆ ಬೆದರಿಕೆ ಹಾಕಿ ಕ್ರೌರ್ಯ ಮೆರೆದಿದ್ದು, ಮುಂಜಾನೆ 3 ಗಂಟೆ ಸುಮಾರಿಗೆ ಎಸ್ ಜಿಎಂ ರಸ್ತೆ ಬಳಿಯ ರಾಜಾ ಚೌಕ್ ಬಳಿ ರಸ್ತೆಯ ಮೇಲೆ ಆಕೆಯನ್ನು ಎಸೆದು ಹೋಗಿದ್ದಾರೆ.
ಮಹಿಳೆ ಅತೀವ ರಕ್ತಸ್ರಾವದಿಂದ ಬಳಲುತ್ತಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾಳೆ. ಮಹಿಳೆ ಘಟನೆ ಬೆನ್ನಲ್ಲೇ ಸೋದರಿಗೆ ಪದೇಪದೆ ಫೋನ್ ಮಾಡಿ ಕಣ್ಣೀರಿಟ್ಟಿದ್ದಾಳೆ. ಕೂಡಲೇ ಕುಟುಂಬದ ಸದಸ್ಯರು ಸ್ಥಳಕ್ಕೆ ಆಗಮಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಮಹಿಳೆಯ ಮುಖದ ಮೇಲೆ 10ರಿಂದ 12 ಹೊಲಿಗೆ ಹಾಕಿದ್ದಾರೆ.
ಮಹಿಳೆಗೆ ಮದುವೆ ಆಗಿದ್ದು, ಎರಡು ಮಕ್ಕಳಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡನಿಂದ ಬೇರ್ಪಟ್ಟು ಹೆತ್ತವರ ಜೊತೆ ವಾಸವಾಗಿದ್ದಾಳೆ. ಘಟನೆ ನಡೆದ ದಿನ ಮಹಿಳೆ ತಾಯಿ ಜೊತೆ ಜಗಳವಾಡಿ ರಾತ್ಇರ 8.30ರ ಸುಮಾರಿಗೆ ಸ್ನೇಹಿತೆಯ ಮನೆಗೆ ಹೊರಟ್ಟಿದ್ದಳು. ಸುಮಾರು ಮೂರು ಗಂಟೆಗಳ ನಂತರ ಆಕೆ ಮನೆಗೆ ಬಂದಾಗ ಆಘಾತಕಾರಿ ಘಟನೆ ವಿವರಿಸಿದ್ದಾಳೆ ಎಂದು ಸೋದರಿ ಹೇಳಿದ್ದು, ಪೊಲೀಸರು ಇನ್ನಷ್ಟೇ ಸಂತ್ರಸ್ತೆಯಿಂದ ಹೇಳಿಕೆ ದಾಖಲಿಸಿಕೊಳ್ಳಬೇಕಾಗಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ಮೂಲಕ ವಾಹನದ ಚಲನವಲನಗಳನ್ನು ಪತ್ತೆ ಹಚ್ಚಿದ್ದು, ವಾಹನವನ್ನು ಗುರುತಿಸಿದ್ದಾರೆ. ಅಲ್ಲದೇ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.


