ಮಂಗಳೂರು: ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ಮಂಗಳೂರಿನ ಮಹಿಳೆಯೊಬ್ಬರಿಗೆ ಸೈಬರ್ ವಂಚಕರು ಸುಮಾರು 3 ಕೋಟಿ 15 ಲಕ್ಷ ರೂ. ವಂಚಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಜೂನ್ 6ರಂದು ಬೆಳಗ್ಗೆ 10:25ರ ಸುಮಾರಿಗೆ ಮಹಿಳೆಗೆ 8260865038 ಸಂಖ್ಯೆಯಿಂದ ಕರೆ ಮಾಡಿದ ದುಷ್ಕರ್ಮಿಗಳು ನ್ಯಾಷನಲ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ ನಿಂದ ಇನ್ಸ್‌ಪೆಕ್ಟರ್ ಅನು ಶರ್ಮಾ ಎಂದು ಪರಿಚಯಿಸಿಕೊಂಡಿದ್ದಾರೆ.
ಮಹಿಳೆಯ ಗಂಡನ ಹೆಸರಿನಲ್ಲಿ ಹೊಸ ಸಿಮ್ (9867485463) ಖರೀದಿಸಲಾಗಿದೆ. ಆ ಸಿಮ್‌ನಿಂದ ವಂಚನೆಯ ಕರೆಗಳು ಮತ್ತು ಲಿಂಕ್‌ಗಳನ್ನು ಸಾರ್ವಜನಿಕರಿಗೆ ಕಳುಹಿಸಲಾಗುತ್ತಿದೆ ಎಂದು ಹೇಳಿದ್ದಾರೆ. ನಂತರ ಕರೆಯನ್ನು ಸಹಾರ್ ಪೊಲೀಸ್ ಠಾಣೆಗೆ ವರ್ಗಾಯಿಸುವುದಾಗಿ ಆರೋಪಿ ಹೇಳಿದ್ದ.
ಅಲ್ಲಿನ ಸಬ್ ಇನ್ಸ್‌ಪೆಕ್ಟರ್ ತಾನು ಎಂದು ಮೋಹನ್ ಕುಮಾರ್ ಎಂದು ಮಾತನಾಡಿ, ಮಹಿಳೆಯ ವೈಯಕ್ತಿಕ ಮಾಹಿತಿ ಪಡೆದುಕೊಂಡಿದ್ದು, ನಂತರ ಕರೆಯನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ದೀಪಕ್ ವೆಂಕಟರಮಣ ಎಂಬಾತನಿಗೆ ವರ್ಗಾಯಿಸುವುದಾಗಿ ಹೇಳಿದ್ದಾನೆ. ಬಳಿಕ ದೀಪಕ್ ಎಂಬ ಹೆಸರಿನ ವ್ಯಕ್ತಿ ಮಹಿಳೆಯ ಮತ್ತು ಅವರ ಗಂಡನ ಬ್ಯಾಂಕ್ ಖಾತೆಯ ವಿವರಗಳನ್ನು ಸಂಗ್ರಹಿಸಿದ್ದಾನೆ.
ಬ್ಯಾಂಕ್ ಖಾತೆಗಳ ಪರಿಶೀಲನೆಗಾಗಿ ಹಣ ಪಾವತಿಸುವಂತೆ ದುಷ್ಕರ್ಮಿಗಳು ಸೂಚಿಸಿದ್ದಾರೆ. ಪಾವತಿಸಿದ ಎಲ್ಲಾ ಹಣವನ್ನು ವಾಪಸ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಮಹಿಳೆಯನ್ನು ಭೀತಿಗೊಳಿಸಿದ್ದರಿಂದ ಅವರು ಯಾರೊಂದಿಗೂ ಮಾಹಿತಿಯನ್ನು ಹಂಚಿಕೊಂಡಿರಲಿಲ್ಲ.
ಜೂನ್ 10ರಿಂದ ಜೂನ್ 27ರವರೆಗೆ, ಮಹಿಳೆ ಮತ್ತು ಅವರ ಗಂಡನ ಬ್ಯಾಂಕ್ ಖಾತೆಗಳಿಂದ ಹಂತಹಂತವಾಗಿ ಒಟ್ಟು 3,16,52,142 ರೂ.ವನ್ನು ವಂಚಕರು ನೀಡಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ RTGS ಮೂಲಕ ವರ್ಗಾಯಿಸಿದ್ದಾರೆ. ನಂತರ, ವಂಚಕರು ಯಾವುದೇ ಸಂಪರ್ಕಕ್ಕೆ ಸ್ಪಂದಿಸದೇ\ ಕರೆಗಳನ್ನು ಬ್ಲಾಕ್ ಮಾಡಿದ್ದಾರೆ.
ವಂಚನೆಗೆ ಒಳಗಾಗಿರುವುದು ಅರಿತ ಮಹಿಳೆ ಆನ್‌ಲೈನ್ ವಂಚನೆ ನಡೆಸಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಮಹಿಳೆ ದೂರು ಸಲ್ಲಿಸಿದ್ದಾರೆ. ಇದೀಗ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೈದರಾಬಾದ್ನ ಅಮೀರ್ಪೇಟೆಯ ವ್ಯಕ್ತಿಯೊಬ್ಬರಿಗೆ ಕಳೆದ ತಿಂಗಳು ವಂಚಕರು ಮೋಸ ಮಾಡಿದ್ದರು. ದೆಹಲಿ ಪೊಲೀಸ್ ಅಧಿಕಾರಿಗಳೆಂದು ಹೇಳಿ ಫೋನಾಯಿಸಿ ಹಿರಿಯ ನಾಗರಿಕರೊಬ್ಬರಿಗೆ ಮಕ್ಮಲ್ ಟೋಪಿ ಹಾಕಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಇಂಥ ಪ್ರಕರಣಗಳು ಆಗಾಗ್ಗೆ ನಡೆಯತ್ತಿದ್ದು, ಸಾರ್ವಜನಿಕರು ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಎಚ್ಚರಿಸುತ್ತಿದ್ದಾರೆ.