Menu

ಪಿಯು, ಡಿಗ್ರಿ ಮುಗಿಸಿದ ನಕಲಿ ವೈದ್ಯರಿಂದ ಸಿಸೇರಿಯನ್‌: ಮಹಿಳೆ ಸಾವು

ಉತ್ತರ ಪ್ರದೇಶದ ಲಕ್ನೋದ ಅಂಬೇಡ್ಕರ್ ನಗರದಲ್ಲಿ ಪಿಯುಸಿ ವಿದ್ಯಾರ್ಥಿ ಮತ್ತು ಬಿಎ ಪದವೀಧರ ಐದು ವರ್ಷಗಳಿಂದ ಅಕ್ರಮ  ಆಸ್ಪತ್ರೆಯೊಂದರಲ್ಲಿ  ವೈದ್ಯರಾಗಿದ್ದು, ಗರ್ಭಿಣಿಗೆ ಸಿಸೇರಿಯನ್‌ ಮಾಡಲು ಹೋಗಿ ಪ್ರಾಣ ಕಸಿದಿದ್ದಾರೆ.  ಪೊಲೀಸರು ಈ ಆರೋಪಿಗಳನ್ನು ಬಂಧಿಸಿದ್ದಾರೆ.

ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಸೆ-ಸೆಕ್ಷನ್ ಮೂಲಕ ಹೆರಿಗೆ ಮಾಡಿಸುವುದಕ್ಕೆ ಹೋಗಿ ಈ ನಕಲಿ ಡಾಕ್ಟರ್‌ಗಳು ಆಕೆಯ ಜೀವ ತೆಗೆದಿದ್ದಾರೆ. ಪ್ರಕರಣದ ತನಿಖೆ ವೇಳೆ ಈ ಆಸ್ಪತ್ರೆಯೇ ಅಕ್ರಮ, ವೈದ್ಯರು ನಕಲಿ ಎಂಬುದು ಬಯಲಾಗಿದೆ, ಕಳೆದ ಐದು ವರ್ಷಗಳಿಂದ ಈ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿತ್ತು ಎಂಬುದು ತಿಳಿದು ಬಂದಿದೆ.

ಮಾಲಿಪುರದ ಬಿಎ ಪದವೀಧರ 32 ವರ್ಷದ ಯೋಗೇಶ್ ವರ್ಮಾ ಮತ್ತು ಸುಲ್ತಾನ್‌ಪುರದ ಪಿಯುಸಿ ವಿದ್ಯಾರ್ಥಿ 19 ವರ್ಷದ ಶುಭಂ ವಿಶ್ವಕರ್ಮ ಆರೋಪಿಗಳಾಗಿದ್ದು, ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ನವಜೀವನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಅರ್ಹತೆ ಇಲ್ಲದೆ ಶಸ್ತ್ರಚಿಕಿತ್ಸೆ ನಡೆಸಲು ಮುಂದಾಗಿದ್ದರು.

ಮೃತ ಪ್ರಿಯಾಂಕಾ ಫೆಬ್ರವರಿ 5 ರಂದು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಪಿಗಳು ಪ್ರಿಯಾಂಕಾಗೆ ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಿದ ನಂತರ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಪ್ರಿಯಾಂಕಾಗೆ ಶಸ್ತ್ರಚಿಕಿತ್ಸೆ ವೇಳೆ ಅತಿ ರಕ್ತಸ್ರಾವವಾಗಿ ಪ್ರಜ್ಞೆ ಹೋಗಿತ್ತು. ಸ್ಥಿತಿ ಹದಗೆಟ್ಟಾಗ ಆಕೆಯನ್ನು ಲಕ್ನೋದ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಅವರು ಮೃತಪಟ್ಟಿದ್ದಾರೆ. ಪ್ರಿಯಾಂಕಾ ಕುಟುಂಬದವರು ಆಸ್ಪತ್ರೆ ಮುಂದೆ ತೀವ್ರ ಪ್ರತಿಭಟನೆ ನಡೆಸಿದ್ದು, ಆಸ್ಪತ್ರೆಯ ನಿರ್ವಾಹಕಿ ರೂಬಿ ಪರಾರಿಯಾಗಿದ್ದಾಳೆ.

ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು ರೂಬಿಯ ಪತ್ತೆಗೆ ಬಲೆ ಬೀಸಿದ್ದಾರೆ. ಬಾಷ್ಕರಿಯ ಎಸ್‌ಎಚ್‌ಒ ಸುನಿಲ್ ಕುಮಾರ್ ಪಾಂಡೆ ಮಾತನಾಡಿ, ಆರೋಪಿ ಯೋಗೇಶ್ ವರ್ಮಾ ಪದವೀಧರ, ಆತನ ತಂದೆ ಜಲಾಲ್‌ಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಾರ್ಡ್ ಬಾಯ್. ತಂದೆಗೆ ಸಹಾಯ ಮಾಡುತ್ತಾ ತ ಮೂಲಭೂತ ವೈದ್ಯಕೀಯ ವಿಧಾನಗಳನ್ನು ಕಲಿತಿದ್ದಾನೆ. ಹಲವು ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದಾನೆ ಎಂದು ತಿಳಿಸಿದ್ದಾರೆ. ಎಂದು ಹೇಳಿದರು.

ಆರೋಪಿ ಶುಭಂ ವಿಶ್ವಕರ್ಮ, ಸುಲ್ತಾನಪುರ ಜಿಲ್ಲೆಯ ಅಖಂಡನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ವಾಯ್‌ನಲ್ಲಿರುವ ಬಜರಂಗ್ ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡುತ್ತಿದ್ದ. ಕೆಲಸ ಮಾಡುತ್ತಾ ವೈದ್ಯರ ಕಾರ್ಯವಿಧಾನಗಳನ್ನು ಗಮನಿಸಿ 5 ವರ್ಷಗಳಿಂದ ನವಜೀವನ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತಿದ್ದ ಎನ್ನಲಾಗಿದೆ.

ಇಬ್ಬರೂ ಪ್ರತಿ ಸಿಸೇರಿಯನ್‌ಗೆ 3,000 ರಿಂದ 5,000 ರೂ. ಶುಲ್ಕ ವಿಧಿಸುತ್ತಿದ್ದರು. ಪ್ರಿಯಾಂಕಾ ಸಾವಿನ ನಂತರ ಇವೆಲ್ಲ ಬೆಳಕಿಗೆ ಬಂದಿದೆ. ತಪಾಸಣೆಯ ಸಮಯದಲ್ಲಿ ಆಸ್ಪತ್ರೆಯು ವಸತಿ ಕಟ್ಟಡದ ನಾಲ್ಕು ಕೊಠಡಿಗಳಲ್ಲಿ ನೋಂದಣಿ ಪ್ರಮಾಣ ಪತ್ರ, ಬಯೋಮೆಡಿಕಲ್ ತ್ಯಾಜ್ಯ ದ(ಬಿಎಂಡಬ್ಲ್ಯು) ಅನುಮತಿ, ಅಗ್ನಿಶಾಮಕ ಎನ್‌ಒಸಿ ಅಥವಾ ಮಾನದಂಡಗಳ ಪ್ರಕಾರ ಅಗತ್ಯವಿರುವ ವೈದ್ಯಕೀಯ ಸಿಬ್ಬಂದಿ ಇಲ್ಲದೆ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದು ತಿಳಿದು ಬಂದಿದೆ.

ಸಿಎಚ್‌ಸಿ ಸೂಪರಿಂಟೆಂಡೆಂಟ್ ನೀಡಿದ ದೂರಿನಂತೆ ಆಸ್ಪತ್ರೆಯ ಅಕ್ರಮ ಕಾರ್ಯಾಚರಣೆ ಮತ್ತು ವೈದ್ಯಕೀಯ ನಿರ್ಲಕ್ಷ್ಯಕ್ಕಾಗಿ ಎಫ್‌ಐಆರ್ ದಾಖಲಿಸಲಾಗಿದೆ. ಆಸ್ಪತ್ರೆಗೆ ಸಂಬಂಧಿಸಿದ ಎಲ್ಲಾ ವೈದ್ಯಕೀಯ ದಾಖಲೆಗಳ ಪರಿಶೀಲನೆಗೆ ಅಧಿಕಾರಿಗಳು ಆದೇಶಿಸಿದ್ದಾರೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ರಮ ಆರೋಗ್ಯ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

Related Posts

Leave a Reply

Your email address will not be published. Required fields are marked *