ದೆವ್ವ ಬಿಡಿಸುತ್ತೇನೆಂದು ಹೇಳಿ ಥಳಿಸಿದ್ದರಿಂದ ಅಸ್ವಸ್ಥಗೊಂಡ ಮಹಿಳೆ ಮೃತಪಟ್ಟ ಘಟನೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನ ಜಂಬರಗಟ್ಟೆಯಲ್ಲಿ ನಡೆದಿದೆ.
ಜಂಬರಗಟ್ಟೆ ನಿವಾಸಿ ಗೀತಮ್ಮ (50) ಮೃತಪಟ್ಟವರು. ತಾಯಿಗೆ ಹುಷಾರಿಲ್ಲದ ಕಾರಣ ಮಗ ಮಗ ದೆವ್ವ ಬಿಡಿಸಲು ಹೊಸ ಜಂಬರಘಟ್ಟಕ್ಕೆ ಕರೆದುಕೊಂಡು ಹೋಗಿದ್ದ. ದೆವ್ವ ಬಿಡಿಸುತ್ತೇನೆ ಎಂದು ಆಶಾ ಎಂಬಾಕೆ ಗೀತಮ್ಮನಿಗೆ ಹಿಂಸೆ ನೀಡಿದ್ದಾಳೆ. ಹಿಂಸೆ ತಾಳಲಾರದೆ ಗೀತಮ್ಮ ಅಸು ನೀಗಿದ್ದಾರೆ.
ಆಶಾ ಎಂಬ ಮಹಿಳೆ ತನ್ನ ಮೇಲೆ ಚೌಡಮ್ಮ ದೇವಿ ಬರುತ್ತಾಳೆ ಎಂದು ಊರಲ್ಲಿ ಪ್ರಚಾರ ಮಾಡಿಕೊಂಡಿದ್ದಳು. ಗೀತಮ್ಮ ಕುಟುಂಬ ಇದನ್ನು ನಂಬಿ ಆಶಾ ಬಳಿ ಕರೆದುಕೊಂಡು ಹೋಗಿದ್ದಾರೆ. ಆಶಾ ರಾತ್ರಿ 9 ಗಂಟೆಯಿಂದ ತಡರಾತ್ರಿ 3 ಗಂಟೆಯವರೆಗೂ ಗೀತಮ್ಮರನ್ನು ಥಳಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡ ಅವರನ್ನು ಹೊಳೆಹೊನ್ನುರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಹೊಳೆಹೊನ್ನುರು ಪೋಲಿಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆಶಾ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.