ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಾರೇಕುರ್ಚಿ ಗ್ರಾಮದಲ್ಲಿ ಸೊಸೆ ಕಾಟಕ್ಕೆ ಬೇಸತ್ತು ಅತ್ತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆಯೊಂದು ನಡೆದಿದೆ. ಅತ್ತೆಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೊಸೆಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಭ್ರಮರಾಂಭಿಕೆ (60) ಆತ್ಮಹತ್ಯೆ ಮಾಡಿಕೊಂಡವರು. ಅನುಮಾನಾಸ್ಪದ ಸ್ಥಿತಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ.
ಗ್ರಾಮದ ತೋಟದ ಮನೆಯಲ್ಲಿದ್ದ ಪಂಪ್ ಹೌಸ್‌ನಲ್ಲಿ ಭ್ರಮರಾಂಭಿಕೆ ಅವರ ಮೃತದೇಹ ಪತ್ತೆಯಾಗಿದೆ. ಪಂಪ್ ಹೌಸ್‌ಗೆ ತೆರಳಿದ ಮಗ ಮನುಕುಮಾರ್, ತಾಯಿಯ ಶವ ಕಂಡು ಕೆಳಗಿಳಿಸಿದ್ದಾರೆ. ಬಳಿಕ ಕುಟುಂಬಸ್ಥರು ಚೇಳೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮೃತದೇಹವನ್ನು ಪರಿಶೀಲಿಸಿದಾಗ ಒಂದು ಕಣ್ಣಿನ ಗುಡ್ಡೆ ನಾಪತ್ತೆಯಾಗಿತ್ತು. ಅದನ್ನು ಪೊಲೀಸರು ಪತ್ತೆ ಮಾಡಿ ಕೊಲೆ ನಡೆದಿರಬಹುದೆಂಬ ಅನುಮಾನ ವ್ಯಕ್ತಪಡಿಸಿದ್ದರು.
ಮೃತದೇಹವನ್ನು ನೇಣು ಬಿಗಿದ ಸ್ಥಿತಿಯಿಂದ ಕೆಳಗಿಳಿಸುವಾಗ ಕಣ್ಣಿಗೆ ಗಾಯವಾಗಿ ಹಾನಿಯಾಗಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಸ್ಪಷ್ಟವಾಗಿದೆ. ಮಧ್ಯರಾತ್ರಿ ಭ್ರಮರಾಂಭಿಕೆ ಸ್ವತಃ ಪಂಪ್ ಹೌಸ್‌ಗೆ ನಡೆದುಕೊಂಡು ಬಂದು ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದೆ.
ಭ್ರಮರಾಂಭಿಕೆ ಅವರ ಸಾವಿಗೆ ಸೊಸೆ ಕಾವ್ಯಶ್ರೀ ಕಾರಣ ಎಂಬ ಆರೋಪ ಕುಟುಂಬಸ್ಥರಿಂದ ಕೇಳಿಬಂದಿದೆ. ಸೊಸೆ ಕಾವ್ಯಶ್ರೀ ಪ್ರತ್ಯೇಕವಾಗಿ ವಾಸಿಸಲು ಬಯಸುತ್ತಿದ್ದಳು, ಅಡುಗೆ ಸೇರಿದಂತೆ ಎಲ್ಲಾ ಕೆಲಸವನ್ನು ಪ್ರತ್ಯೇಕವಾಗಿ ಮಾಡಿಕೊಳ್ಳುತ್ತಿದ್ದು, ಗಂಡನಿಗೆ ತನ್ನ ಕರೆದುಕೊಂಡು ಬೆಂಗಳೂರಿಗೆ ಹೋಗುವಂತೆ ಒತ್ತಡ ಹಾಕುತ್ತಿದ್ದಳೆಂಬ ಆರೋಪ ಕೂಡ ಕೇಳಿಬಂದಿದೆ. ಸೊಸೆಯ ವರ್ತನೆ ಹಾಗೂ ಮಾತುಗಳಿಂದ ಮನನೊಂದಿದ್ದ ಭ್ರಮರಾಂಭಿಕೆ ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.
ಮೃತರ ಮಗನ ನೀಡಿರುವ ದೂರಿನ ಅನ್ವಯ ಸೊಸೆ ಕಾವ್ಯಶ್ರೀ ವಿರುದ್ಧ ಆತ್ಮಹತ್ಯೆಗೆ ಪ್ರೇರಣೆ ಎಫ್‌ಐಆರ್ ದಾಖಲಾಗಿದೆ. ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


