Menu

ಮಹಿಳೆ ಆತ್ಮಹತ್ಯೆ: ವಿಷಯ ತಿಳಿದು ಆಸ್ಪತ್ರೆಗೆ ಬರುತ್ತಿದ್ದ ಪತಿ ಅಪಘಾತದಲ್ಲಿ ಸಾವು

ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದು ಆಸ್ಪತ್ರೆಗೆ ಆಗಮಿಸುತ್ತಿದ್ದ ಪತಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಬೆಳಗಾವಿಯ ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದಲ್ಲಿ ನಡೆದಿದೆ.

ಮಧುರಾ ಕರೆಪ್ಪ ಮಾದರ (30), ಕರೆಪ್ಪ ಗಂಗಪ್ಪ ಮಾದರ (36) ಮೃತ ದಂಪತಿ.‌ ಮಧುರಾ ಹೊಟ್ಟೆನೋವಿನಿಂದ ಬಳಲುತ್ತಿದ್ದು, ನೊಂದು ವಿಷ ಸೇವಿಸಿದ್ದರು. ಅವರನ್ನು ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ ಬಳಿಕ ಚಿಕಿತ್ಸೆ ಫಲಿಸದೆ ಮಧುರಾ ಮೃತಪಟ್ಟಿದ್ದಾರೆ.

ಪತ್ನಿ ಆಸ್ಪತ್ರೆ ಸೇರಿದ ಸುದ್ದಿ ತಿಳಿದು ಬೆಳಗಾವಿಗೆ ಬೈಕ್​ನಲ್ಲಿ ಬರುತ್ತಿದ್ದ ಪತಿ ಕರೆಪ್ಪ ಅರವಳ್ಳಿ ಕ್ರಾಸ್ ಬಳಿ ಧಾರವಾಡದಿಂದ ವೇಗವಾಗಿ ಬರುತ್ತಿದ್ದ ಕೆಎಸ್ಆರ್​ಟಿಸಿ ಬಸ್​ಗೆ ಡಿಕ್ಕಿ ಹೊಡೆದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಕರೆಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬೈಲಹೊಂಗಲ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ .ಮಧುರಾ ಮತ್ತು ಕರೆಪ್ಪ ದಂಪತಿ ಮದುವೆಯಾಗಿ 9 ವರ್ಷ ಆಗಿತ್ತು. ಇವರಿಗೆ ಒಂದು ಹೆಣ್ಣು, ಎರಡು ಗಂಡು ಮಕ್ಕಳಿದ್ದಾರೆ.

ಶಿಕ್ಷಕಿಯ ಕೊಲೆಗೈದು ಶವ ಸುಟ್ಟು ಹಾಕಿದ ಹಂತಕರು

ಸರ್ಕಾರಿ ಶಾಲಾ ಶಿಕ್ಷಕಿಯನ್ನು ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು ಶವವನ್ನು ಸುಟ್ಟುಹಾಕಿರುವ ಘಟನೆ ಕಲಬುರಗಿಯ ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದಲ್ಲಿ ನಡೆದಿದೆ.

ಜ್ಯೋತಿ ಕಪಾಳೆ ಹಿರೇಮಠ (57) ಕೊಲೆಯಾದ ಶಿಕ್ಷಕಿ. ಕಲಬುರಗಿ ನಗರದ ಆನಂದ್ ಕಾಲೋನಿ ನಿವಾಸಿ ಜ್ಯೋತಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಂದರಖೇಡ ಗ್ರಾಮದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಬೀದರ್‌ನಲ್ಲಿ ಮನೆ ಮಾಡಿ ಶಾಲೆಗೆ ಹೋಗಿಬರುತ್ತಿದ್ದ ಜ್ಯೋತಿ ವಾರಕ್ಕೊಂದು ಬಾರಿ ಕಲಬುರಗಿಗೆ ಬಂದು ಹೋಗುತ್ತಿದ್ದರು.

ಕಲಬುರಗಿಯಿಂದ ಬೀದರ್‌ಗೆ ಹೋಗುವಾಗ ಮಾರ್ಗ ಮಧ್ಯ ಕಮಲಾಪುರದ ಕಲ್ಮೂಡನಲ್ಲಿ ಜ್ಯೋತಿಯನ್ನು ಕೊಲೆಗೈದ ಹಂತಕರು ಐದು ಲೀಟರ್ ಪೆಟ್ರೋಲ್ ಹಾಕಿ ಶವವನ್ನು ಸುಟ್ಟಿದ್ದಾರೆ. ಪೊಲೀಸರು ಅಪರಿಚಿತ ಶವ ಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ವೇಳೆ ಕಲಬುರಗಿ ನಿವಾಸಿ ಕೊಲೆಯಾಗಿರುವುದು ಗೊತ್ತಾಗಿದೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Reply

Your email address will not be published. Required fields are marked *