ಕುಟುಂಬದ ಸಮಸ್ಯೆಗೆ ಪರಿಹಾರ ಕೇಳಿ ಬಂದ ಮಹಿಳೆ ಮೇಲೆ ಮೌಲ್ವಿಯೊಬ್ಬ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ನೆಲಮಂಗಲ ತಾಲೂಕಿನ ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕೂತಘಟ್ಟ ಗ್ರಾಮದಲ್ಲಿ ನಡೆದಿದೆ.
ತುಮಕೂರಿನ 24 ವರ್ಷದ ಮಹಿಳೆ ದೌರ್ಜನ್ಯಕ್ಕೆ ಒಳಗಾಗಿದ್ದು, ಕೂತಘಟ್ಟ ಗ್ರಾಮದ ಮಸೀದಿಯ ಮೌಲ್ವಿ ಭದ್ರೆ ಅಲಂ ಆರೋಪಿಯಾಗಿದ್ದಾನೆ. ಜೂನ್ 30ರಂದು ಸಂಜೆ ಮಹಿಳೆ ತನ್ನ ಪತಿಯೊಂದಿಗೆ ಭದ್ರೆ ಅಲಂ ಬಳಿಗೆ ಕುಟುಂಬದ ಸಮಸ್ಯೆಗೆ ಪರಿಹಾರ ಕೇಳಿಕೊಂಡು ಬಂದಿದ್ದರು. ಭದ್ರೆ ಅಲಂ ಯಂತ್ರಶಾಸ್ತ್ರ ಮಾಡುವವನೆಂದು ಖ್ಯಾತಿ ಹೊಂದಿದ್ದ.
ಮಹಿಳೆ ಆತನ ಜೊತೆ ತನ್ನ ಸಂಸಾರದ ತೊಂದರೆಗಳನ್ನು ಚರ್ಚಿಸಿ ಯಂತ್ರದಾರ ಮಾಡಿಕೊಡುವಂತೆ ಕೇಳಿದ್ದಾಳೆ. ಆರೋಪಿಯು ಮಹಿಳೆಯನ್ನು ಒಂಟಿಯಾಗಿ ಕೊಠಡಿಗೆ ಕರೆದೊಯ್ದು ಖಾಸಗಿ ಅಂಗಗಳನ್ನು ಮುಟ್ಟುವ ಮೂಲಕ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಮಹಿಳೆ ಪತಿಗೆ ಈ ವಿಷಯವನ್ನು ತಿಳಿಸಿದ ಬಳಿಕ ಗ್ರಾಮಸ್ಥರಿಗೆ ದೂರು ನೀಡಿದಾಗ ಆರೋಪಿಗೆ ಶಿಕ್ಷೆ ನೀಡುವುದಾಗಿ ಗ್ರಾಮಸ್ಥರು ಭರವಸೆ ನೀಡಿದ್ದರು. ಘಟನೆ ನಡೆದು ಹಲವು ದಿನಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಮಹಿಳೆ ದಾಬಸ್‌ಪೇಟೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ದೂರಿನ ಆಧಾರದಲ್ಲಿ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಭದ್ರೆ ಅಲಂ ಬಂಧನಕ್ಕೆ ಕಾರ್ಯಾಚರಣೆ ಕೈಗೊಂಡಿದ್ದಾರೆ.