ಮಗಳಿಗೆ ಕಂಪ್ಯೂಟರ್ ಖರೀದಿ, ಊರಿಗೆ ಹೋಳಿಗೆ ಊಟ, ವಾಷಿಂಗ್ ಮಷಿನ್ ಖರೀದಿ, ಮನೆಗೆ ಬಾಗಿಲು ಹಾಕಿಸಿದ್ದು.. ಹೀಗೆ ಗೃಹಲಕ್ಷ್ಮೀ ಹಣದಲ್ಲಿ ರಾಜ್ಯದಲ್ಲಿ ಹಲವಾರು ಕುಟುಂಬಗಳು ಸದುಪಯೋಗಪಡಿಸಿಕೊಂಡು ಜೀವನ ರೂಪಿಸಿಕೊಳ್ಳುತ್ತಿದ್ದಾರೆ.
ಇದೀಗ ಮಂಗಳೂರಿನ ಮಹಿಳೆಯೊಬ್ಬರು ಗೃಹಲಕ್ಷ್ಮೀ ಹಣದಲ್ಲಿ ಸ್ಕೂಟರ್ ಖರೀದಿಸಿದ್ದಾರೆ. ಅಲ್ಲದೇ ಉಪ್ಪಿನಕಾಯಿ ಮಾರಾಟಕ್ಕೆ ಈ ಸ್ಕೂಟರ್ ಬಳಸಿಕೊಂಡು ಜೀವನ ರೂಪಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಮಂಗಳೂರಿನ ಕಲ್ಲಾಪು ಪಟ್ಲದ ಝೀನತ್ ಎಂಬ ಮಹಿಳೆ ಉಪ್ಪಿನಕಾಯಿ ಮಾರಾಟದ ಮೂಲಕ ತನ್ನ ಜೀವನ ಸಾಗಿಸುತ್ತಿದ್ದರು. ಒಂದು ಕಡೆಯಿಂದ ಇನ್ನೊಂದು ಕಡೆ ಸಾಗಿಸಲು ಕಷ್ಟಪಡುತ್ತಿದ್ದ ಈಕೆ ಇದೀಗ ಗೃಹಲಕ್ಷ್ಮೀ ಹಣದಲ್ಲಿ ಸ್ಕೂಟರ್ ಖರೀದಿಸಿ ಅದರ ನೆರವಿನಿಂದ ತಮ್ಮ ಉದ್ದಿಮೆಯನ್ನು ಸರಾಗವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ.
ಸ್ಕೂಟರ್ ಮೇಲೆ ಸಿಎಂ, ಡಿಸಿಎಂ, ಹೆಬ್ಬಾಳ್ಕರ್, ಖಾದರ್ ಪೋಟೋ!
ಗೃಹಲಕ್ಷ್ಮಿ ಯೋಜನೆಯಲ್ಲಿ ಬಂದ ಹಣದಿಂದ ಸ್ಕೂಟರ್ ಖರೀದಿಸಿರುವುದರಿಂದ ಈ ಸ್ಕೂಟರ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸ್ಪೀಕರ್ ಯುಟಿ ಖಾದರ್ ಅವರ ಫೋಟೋ ಹಾಕಲಾಗಿದೆ. ಸರಕಾರದ ಯೋಜನೆಯಿಂದ ಈ ಸ್ಕೂಟರ್ ಖರೀದಿಸಿರುವುದರಿಂದ ಅವರಿಗೆ ಕೃತಜ್ಞತೆ ಸಲ್ಲಿಸಲು ಈ ಫೋಟೋ ಹಾಕಿರುವುದಾಗಿ ಝೀನತ್ ತಿಳಿಸಿದ್ದಾರೆ.
“ನನಗೆ ಸಹಾಯ ಮಾಡಿದ ಎಲ್ಲರಿಗೂ, ಸರ್ಕಾರದ ಯೋಜನೆಗೆ, ಸಹಕರಿಸಿದವರಿಗೆ ಧನ್ಯವಾದ. ಈ ಯೋಜನೆ ನಮ್ಮಂಥವರ ಬದುಕಿಗೆ ತುಂಬ ಉಪಕಾರಿಯಾಗಿದೆ. ಅದಕ್ಕಾಗಿ ಅವರು ಈ ಸ್ಕೂಟರ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸ್ಪೀಕರ್ ಯು.ಟಿ. ಖಾದರ್ ಅವರ ಫೋಟೋ ಹಾಕಿದ್ದೇನೆ” ಎಂದು ಝೀನತ್ ಹೇಳುತ್ತಾರೆ.


