Menu

ಮಾಜಿ ಪ್ರಿಯಕರನ ಪತ್ನಿಗೆ ಹೆಚ್‌ಐವಿ ಇಂಜೆಕ್ಷನ್‌ ಚುಚ್ಚಿ ಕೊಲೆಗೆ ಯತ್ನಿಸಿದ ಮಹಿಳೆ

ಆಂಧ್ರಪ್ರದೇಶದ ಕರ್ನೂಲ್ ಪಟ್ಟಣದಲ್ಲಿ ಮಹಿಳೆಯೊಬ್ಬಳು ತನ್ನ ಮಾಜಿ ಪ್ರಿಯಕರನ ಪತ್ನಿಗೆ ಹೆಚ್‌ಐವಿ ಇಂಜೆಕ್ಷನ್‌ ಚುಚ್ಚಿರುವ ಘಟನೆ ನಡೆದಿದೆ. ಆರೋಪಿ ವಸುಂಧರಾ ಮತ್ತು ಮೂವರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ವಸುಂಧರಾ ಮಾಜಿ ಪ್ರಿಯಕರನ ಪತ್ನಿಯ ಮೇಲೆ ಎಚ್‌ಐವಿ ಇಂಜೆಕ್ಷನ್‌ ನೀಡಿ ಕೊಲೆ ಮಾಡುವ ಸಂಚು ರೂಪಿಸಿದ್ದಳು. ಸಂತ್ರಸ್ತ ಮಹಿಳೆಯು ವೈದ್ಯೆ, ಆಕೆಯ ಪತಿ ಕೂಡ ವೈದ್ಯ. ವಸುಂಧರಾ ತನ್ನ ಮಾಜಿ ಪ್ರಿಯಕರ ಬೇರೆ ಮಹಿಳೆಯನ್ನು ಮದುವೆಯಾಗಿದ್ದನ್ನು ಸಹಿಸಲಾರದೆ, ಅವರ ಸಂಸಾರ ನಾಶ ಮಾಡುವುದಕ್ಕೆಂದು ಈ ಕೃತ್ಯ ಎಸಗಿದ್ದಳು.

ಸಂತ್ರಸ್ತೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಆರೋಪಿ ವಸುಂಧರಾ ಮತ್ತು ಆಕೆಯ ಸಹಚರರು ಉದ್ದೇಶಪೂರ್ವಕವಾಗಿ ಬೈಕ್‌ ಡಿಕ್ಕಿ ಹೊಡೆದಿದ್ದಾರೆ. ವೈದ್ಯೆ ಕೆಳಗೆ ಬಿದ್ದಾಗ ಸಹಾಯ ಮಾಡುವ ನೆಪದಲ್ಲಿ ಹತ್ತಿರ ಬಂದಿದ್ದಾರೆ. ವಸುಂಧರಾ ಮೊದಲೇ ಸಿದ್ಧಪಡಿಸಿಕೊಂಡಿದ್ದ ಎಚ್‌ಐವಿ ಸೋಂಕಿತ ಇಂಜೆಕ್ಷನ್ ವೈದ್ಯೆಗೆ ಚುಚ್ಚಿದ್ದಾಳೆ.

ಘಟನೆಯ ನಂತರ ಅನುಮಾನಗೊಂಡ ವೈದ್ಯೆ ಮತ್ತು ಪತಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸಂಚು ಬಯಲಾಗಿದೆ. ವಸುಂಧರಾ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ವಸುಂಧರಾ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಸಂಶೋಧನೆಯ ನೆಪದಲ್ಲಿ ಎಚ್‌ಐವಿ ಪೀಡಿತ ರೋಗಿಗಳ ರಕ್ತ ಸಂಗ್ರಹಿಸಿದ್ದಳು ಎಂಬ ವಿಚಾರ ತನಿಖೆಯಲ್ಲಿ ತಿಳಿದುಬಂದಿದೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಕರ್ನೂಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಸಂಚಿನಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂದು ತನಿಖೆ ಮುಂದುವರಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಿಂದ ಎಚ್‌ಐವಿ ಸೋಂಕಿತ ರಕ್ತವನ್ನು ಪಡೆಯಲು ಯಾರಾದರೂ ಆಸ್ಪತ್ರೆಯ ಸಿಬ್ಬಂದಿ ಸಹಾಯ ಮಾಡಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Related Posts

Leave a Reply

Your email address will not be published. Required fields are marked *