ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಗಂಡನ ಚಿಕಿತ್ಸೆ ವೆಚ್ಚಕ್ಕಾಗಿ ಮಹಿಳೆ ಬೆಂಗಳೂರಿನಲ್ಲಿ ತಾನು ಕೆಲಸ ಮಾಡುತ್ತಿದ್ದ ಮನೆಯಿಂದಲೇ 12.5 ಕೆಜಿ ಬೆಳ್ಳಿ ಕಳವು ಮಾಡಿದ್ದು, ಪೊಲೀಸರು ಬಂಧಿಸಿದ್ದಾರೆ. ಜೀವನ್ ಭೀಮಾ ನಗರ ಪೊಲೀಸರು ಆರೋಪಿ ಚೈತ್ರಾ ಎಂಬಾಕೆಯನ್ನು ಬಂಧಿಸಿ 35 ಲಕ್ಷ ರೂ. ಮೌಲ್ಯದ ಬೆಳ್ಳಿ ಹಾಗೂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಸರ್ಜನ್ ಆಗಿದ್ದವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಚೈತ್ರಾ, ಒಂದೊಂದೇ ಬೆಳ್ಳಿ ಪಾತ್ರೆಯಂತೆ ಒಟ್ಟು ಒಟ್ಟು 12.5 ಕೆಜಿ ಕದ್ದಿರುವುದು ಪತ್ತೆಯಾಗಿದೆ. ಗಂಡ ಕ್ಯಾನ್ಸರ್ ಪೀಡಿತನಾಗಿದ್ದು, ಹೆಚ್ಚಿನ ಹಣದ ಅವಶ್ಯಕತೆ ಇತ್ತು. ಹೀಗಾಗಿ ಒಂದೂವರೆ ವರ್ಷದಿಂದ ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲಿ ಕಳ್ಳತನ ಮಾಡಿರುವುದಾಗಿ ತಿಳಿದು ಬಂದಿದೆ.
ಮಹಡಿ ಮೇಲೆ ಕೆಲವು ಬೆಳ್ಳಿ ಸಾಮಗ್ರಿಗಳ ಕೂಡಿಟ್ಟಿದ್ದ ಮನೆಯವರು ಹಬ್ಬದ ಸಂದರ್ಭದಲ್ಲಿ ಮಾತ್ರ ಅವುಗಳನ್ನು ಉಪಯೋಗ ಮಾಡುತ್ತಿದ್ದರು. ಆರೋಪಿ ಚೈತ್ರಾ ಅವನ್ನು ಅಡವಿಟ್ಟು ಹಣ ಪಡೆದು ಖರ್ಚು ಮಾಡಿದ್ದು, ಅನುಮಾನ ಬಾರದಂತೆ ಬಂದು ಅದೇ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ದೀಪಾವಳಿ ಹಬ್ಬದ ನಂತರ ಆಕೆ ಕೆಲಸ ಬಿಟ್ಟಿದ್ದಳು.
ದಸರಾ ಹಬ್ಬಕ್ಕೆ ಬೇಕೆಂದು ಪಾತ್ರೆ ಚೀಲ ತೆಗೆದಾಗ ಮನೆಯವರಿಗೆ ಬೆಳ್ಳಿ ಪಾತ್ರೆಗಳು, ಪೂಜಾ ಸಾಮಗ್ರಿಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಅವರು ದೂರು ನೀಡಿದ ಬಳಿಕ ಪೊಲೀಸರು ತನಿಖೆ ನಡೆಸಿ ಮನೆ ಕೆಲಸದವರ ವಿಚಾರಣೆ ನಡೆಸಿದ್ದಾರೆ. ಚೈತ್ರಾಳ ವಿಚಾರಣೆಯಲ್ಲಿ ಬೆಳ್ಳಿ ಸಾಮಗ್ರಿ ಕಳ್ಳತನ ಮಾಡಿರುವ ವಿಚಾರ ಹೊರ ಬಂದಿದೆ.


