ಮದುವೆ ಸಮಾರಂಭಗಳಲ್ಲಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಮಹಿಳೆಯನ್ನು ಶಿವಮೊಗ್ಗ ತುಂಗಾನಗರದ ಪೊಲೀಸಸರು ಬಂಧಿಸಿದ್ದಾರೆ. ರುಕ್ಸಾರ್ ಫಿರ್ದೋಸ್ ಬಂಧಿತ ಆರೋಪಿ.
ಇಲಿಯಾಜ್ ನಗರದ ಶಾದಿ ಮಹಲ್ನಲ್ಲಿ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, 120 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಈ ಹಿಂದೆ ನಡೆಸಿದ್ದ ನಾಲ್ಕು ಕಲ್ಳತನ ಪ್ರಕರಣಗಳು ಕೂಡ ಬಯಲಾಗಿವೆ.
ಬುರ್ಖಾ ಧರಿಸಿ, ವ್ಯಾನಿಟಿ ಬ್ಯಾಗ್ ಹಿಡಿದು ಮದುವೆಗಳಿಗೆ ಬರುತ್ತಿದ್ದ ಸುಳೆಬೈಲು ನಿವಾಸಿ ರುಕ್ಸಾರ್ ಫಿರ್ದೋಸ್ ಮದುವೆಗೆ ಬಂದವರು ಆಭರಣಗಳನ್ನು ಬ್ಯಾಗ್ನಲ್ಲಿ ಇಡುವುದನ್ನೇ ಕಾಯುತ್ತಿದ್ದಳು, ತಕ್ಷಣ ಅವುಗಳನ್ನು ಎಗರಿಸಿ ಪರಾರಿಯಾಗುತ್ತಿದ್ದಳು. ಕೈಯಲ್ಲಿದ್ದ ವ್ಯಾನಿಟಿ ಬ್ಯಾಗ್ ಪತ್ತೆಹಚ್ಚಲು ಪ್ರಮುಖ ಸುಳಿವು ನೀಡಿದೆ.
ಈ ಹಿಂದೆ ಕೆಲವು ಮದುವೆ ಮನೆಗಳಲ್ಲಿ ಕಳ್ಳತನ ಮಾಡುವಾಗ ಈಕೆ ಸ್ಥಳೀಯರಿಗೆ ಸಿಕ್ಕಿಬಿದ್ದಿದ್ದಳು. ಆದರೆ ಮಹಿಳೆಯೆಂದು ಅನುಕಂಪ ತೋರಿಸಿ ಬಿಟ್ಟು ಕಳಿಸಿದ್ದರು. ಆದರೆ ತನ್ನ ಕಳ್ಳತನವನ್ನು ಮುಂದುವರಿಸಿ ಆಕೆ ಐಷಾರಾಮಿ ಜೀವನ ನಡೆಸುತ್ತಿದ್ದಳು. ಈ ಕಳ್ಳತನ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದಾಗ ಈ ಹಿಂದಿನ ನಾಲ್ಕು ಪ್ರಕರಣಗಳೂ ಹೊರ ಬಂದಿವೆ.


