ಬೆಂಗಳೂರಿನ ಕೋಣನಕುಂಟೆಯ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಅಲ್ಲಿಂದ ಒಂದೊಂದೇ ಚಿನ್ನಾಭರಣ ಎಗರಿಸಿ ಒಟ್ಟು ೨೨೦ ಗ್ರಾಂ ಚಿನ್ನವನ್ನು ಕದ್ದು ಈಗ ಪೊಲೀಸರ ಅತಿಥಿಯಾಗಿದ್ದಾಳೆ.
ಕೆಲಸ ಮಾಡುತ್ತಿದ್ದ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿ ಅದರಿಂದ ತಮಿಳುನಾಡಿನಲ್ಲಿ ಸೈಟ್ ಖರೀದಿಸಿದ್ದಾಳೆಂದು ಹೇಳಲಾಗಿದೆ. ಆಕೆಯನ್ನು ಬಂಧಿಸಿರುವ ಪೊಲೀಸರು 200 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ತಮಿಳುನಾಡಿನ ದೀಪ ಬಂಧಿತ ಆರೋಪಿ. ಕೋಣನಕುಂಟೆ ನಿವಾಸಿ ಜಗದೀಶ್ ಎಂಬುವವರ ಮನೆಯಲ್ಲಿ ಕಳೆದ ಒಂದು ವರ್ಷದಿಂದ ಮನೆಕೆಲಸ ಮಾಡುತ್ತಿದ್ದಳು. ಮನೆಯಲ್ಲಿದ್ದ ಚಿನ್ನಾಭರಣಗಳ ಮೇಲೆ ಕಣ್ಣಿಟ್ಟಿದ್ದ ಆಕೆ ಆಗಾಗ ಒಂದೊಂದೇ ಚಿನ್ನದ ಆಭರಣ ಕಳವು ಮಾಡಿದ್ದಳು. ಅನುಮಾನಗೊಂಡ ಮನೆ ಮಾಲೀಕ ಜಗದೀಶ್ ಪೊಲೀಸರಿಗೆ ದೂರು ನೀಡಿದ್ದರು.
ದೂರು ಆಧರಿಸಿ ತನಿಖೆ ಕೈಗೊಂಡ ಕೋಣನಕುಂಟೆ ಪೊಲೀಸರು, ಆರೋಪಿ ದೀಪಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾಳೆ. ಕದ್ದ ಹಣದಲ್ಲಿ ತಮಿಳುನಾಡಿನಲ್ಲಿ ಸೈಟ್ ಖರೀದಿಸಿದ್ದಾಗಿ ದೀಪ ತಪ್ಪೊಪ್ಪಿಕೊಂಡಿದ್ದಾಳೆ.


