Menu

ನೆಲಕ್ಕೆ ಬಡಿದು ನಾಯಿ ಕೊಂದ ನಾರಿ ಪೊಲೀಸ್ ವಶಕ್ಕೆ

dog

ಬೆಂಗಳೂರು:ಮನೆ ಮಾಲೀಕರು ಸಾಕಿದ್ದ ಶ್ವಾನವನ್ನು ಮನೆ ಕೆಲಸದ ಮಹಿಳೆ ಕೊಲೆಗೈದಿರುವ ಅಮಾನವೀಯ ಘಟನೆ ಬಾಗಲೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಅಕ್ಟೋಬರ್ 31ರಂದು ಗೂಫಿ ಎಂಬ ಶ್ವಾನವನ್ನು ಮನೆ ಕೆಲಸದಾಕೆ ಪುಷ್ಪಲತಾ ನೆಲಕ್ಕೆ ಬಡಿದು, ಕತ್ತು ಬಿಗಿದು ಹತ್ಯೆಗೈದಿರುವುದು ಲಿಫ್ಟ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೆಲಸದಾಕೆಯ ಕ್ರೂರ ಕೃತ್ಯವನ್ನು ಮನೆ ಮಾಲೀಕರಾದ ರಾಶಿ ಪೂಜಾರಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಶ್ವಾನ ಪ್ರಿಯರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಸಾಕು ನಾಯಿ ನೋಡಿಕೊಳ್ಳಲು ಪುಷ್ಪಾಲತಾಳನ್ನು ನೇಮಿಸಿಕೊಳ್ಳಲಾಗಿತ್ತು. ಅಕ್ಟೋಬರ್ 31ರಂದು ನಾಯಿಯನ್ನು ವಾಕಿಂಗ್‌ಗೆ ಕರೆದೊಯ್ದಿದ್ದ ಪುಷ್ಪಲತಾ ಲಿಫ್ಟ್‌ನೊಳಗೆ ಬರುತ್ತಿದ್ದಂತೆ ನೆಲಕ್ಕೆ ಬಡಿದು, ಬೆಲ್ಟ್‌ನಿಂದ ಕತ್ತು ಬಿಗಿದು ಸಾಯಿಸಿದ್ದಾಳೆ.

ಬಳಿಕ ನಾಯಿಯ ಕಳೇಬರವನ್ನು ಅಮಾನವೀಯವಾಗಿ ಎಳೆದು ತಂದು ಇದ್ದಕ್ಕಿದ್ದಂತೆ ಸಾವನ್ನಪ್ಪಿತು ಎಂದು ಆರೋಪಿ ಸುಳ್ಳು ಹೇಳಿದ್ದಾಗಿ ಶ್ವಾನದ ಮಾಲೀಕರು ಹೇಳಿದ್ದಾರೆ. ಬಳಿಕ ಅನುಮಾನಗೊಂಡು ಮಾರನೇ ದಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿದಾಗ ಕೆಲಸದಾಕೆಯ ಕೃತ್ಯ ಬೆಳಕಿಗೆ ಬಂದಿದೆ.

ರಾಶಿ ಪೂಜಾರಿ ಅವರು ನೀಡಿದ ದೂರಿನ ಮೇರೆಗೆ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪುಷ್ಪಲತಾ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ಪುಷ್ಪಲತಾಳನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *