ಅಮ್ಮನ ತೊಡೆ ಮೇಲೆ ಮಲಗಿದ್ದ 3 ವರ್ಷದ ಮಗುವನ್ನು ನರಭಕ್ಷಕ ತೋಳ ಕಿತ್ತುಕೊಂಡು ಹೋಗಿ ತಿಂದ ಭೀಕರ ಘಟನೆ ಉತ್ತರಪ್ರದೇಶದ ಬಹರಿಚ್ ಜಿಲ್ಲೆಯಲ್ಲಿ ನಡೆದಿದೆ.
ಮಂಜಾರ ತಾಲೂಕಿನ ರಸಲ್ಪುರ ಡಾರೆತಾ ಗ್ರಾಮದಲ್ಲಿ ತೊಡೆ ಮೇಲೆ ಮಲಗಿಸಿಕೊಂಡು ಹಾಲುಣಿಸಿದ್ದಾಗ ಮನೆಗೆ ನುಗ್ಗಿದ ತೋಳ ತಾಯಿ ಮಡಿಲಿನಿಂದ ಮಗು ಕಸಿದುಕೊಂಡು ಪರಾರಿಯಾಗಿದೆ.
ಮಗುವಿನ ರಕ್ಷಣೆಗೆ ತಾಯಿ ತೋಳದ ಹಿಂದೆ ಸಾಕಷ್ಟು ದೂರ ಓಡಿದರೂ ಮಗುವನ್ನು ರಕ್ಷಿಸಿಕೊಳ್ಳಲು ಆಗಲಿಲ್ಲ. ಹಸುಗೂಸಿನ ಶವ ಮಾರನೇ ದಿನ ಹಲವು ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿದೆ. ತೋಳ ಮಗುವನ್ನು ಹರಿದು ತಿಂದಿದ್ದು, ದೇಹದ ಅಳಿದುಳಿದ ಭಾಗಗಳು ಮಾತ್ರ ಪತ್ತೆಯಾಗಿವೆ.
ರಾಮ್ ಮನೋಹರ್ ಅವರ ಪತ್ನಿ ನಾನಾಕಿ ತೋಳ ದಾಳಿಯಿಂದ ಗಾಬರಿಗೊಂಡಾಗ ಮಗು ಅಂಶು ಕೈಯಿಂದ ಜಾರಿದೆ. ಕೂಡಲೇ ತೋಳ ಮಗುವನ್ನು ಹೊತ್ತೊಯ್ದಿದೆ. ಪತಿ ಪಂಜಾಬ್ ನಲ್ಲಿ ಕೆಲಸಕ್ಕೆ ತೆರಳಿದ್ದರಿಂದ ಪತ್ನಿ ಒಬ್ಬಳೇ ಮನೆಯಲ್ಲಿದ್ದಾಗ ಈ ಘಟನೆ ನಡೆದಿದೆ.
ವಿಷಯ ತಿಳಿದ ಕೂಡಲೇ ನೆರೆಹೊರೆಯವರು ಹಾಗೂ ಅರಣ್ಯ ಸಿಬ್ಬಂದಿ ಸಾಕಷ್ಟು ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ತೋಳದ ದಾಳಿಗೆ ಬಲಿಯಾದ ಪ್ರಕರಣ ಇದೇ ಮೊದಲಲ್ಲ. ಕಳೆದ ಸೆಪ್ಟೆಂಬರ್ ನಿಂದ ಇಲ್ಲಿಯವರೆಗೆ 21 ಮಂದಿ ಮೃತಪಟ್ಟಿದ್ದು, ಇದರಲ್ಲಿ 10 ಮಕ್ಕಳು ಆಗಿವೆ. 32 ಮಂದಿ ಗಾಯಗೊಂಡು ಪಾರಾಗಿದ್ದಾರೆ.


