Saturday, November 15, 2025
Menu

ಸೈಟ್ ತೋರಿಸುವುದಾಗಿ ನಂಬಿಸಿ ಮಾಲೀಕನಿಗೆ ಚಾಕು ಇರಿದು ಚಿನ್ನ ದೋಚಿದ ನೌಕರ!

chain snach

ಬೆಂಗಳೂರು: ಚಿನ್ನದಾಸೆಗೆ ಮಾಲೀಕನಿಗೆ ನಡುರಸ್ತೆಯಲ್ಲಿ ಚಾಕುವಿನಿಂದ ಇರಿದ ಕೆಲಸಗಾರ ಚಿನ್ನದ ಸರ​ ದೋಚಿಕೊಂಡು ಪರಾರಿಯಾಗಿರುವ ಘಟನೆ ಬೆಂಗಳೂರು ಹೊರವಲಯದ ಕುಂಬಳಗೋಡು ಪೊಲೀಸ್​ ಠಾಣೆ ವ್ಯಾಪ್ತಿಯ ಸೂಲಿಕೆರೆ ಬಳಿ ನಡೆದಿದೆ.

ಕಡಿಮೆ ಬೆಲೆಗೆ ನಿವೇಶನಗಳು ಮಾರಾಟಕ್ಕಿದ್ದು, ಅವುಗಳನ್ನು ತೋರಿಸುವುದಾಗಿ ಕಾರ್ಖಾನೆ ಮಾಲೀಕನನ್ನು ನಂಬಿಸಿ ಕರೆದುಕೊಂಡು ಹೋಗಿದ್ದ ಆರೋಪಿ ಈ ಕೃತ್ಯ ಎಸೆಗಿದ್ದಾನೆ.

ಗಣೇಶ ಮೂರ್ತಿ ತಯಾರಿಸುವ ಕಾರ್ಖಾನೆ ಮಾಲೀಕ ಅಮರ್ ನಾರಾಯಣಸ್ವಾಮಿ ಗಾಯಗೊಂಡವರು. ಜಯಂತ್ (23) ಹಲ್ಲೆ ನಡೆಸಿ ಪರಾರಿಯಾದ ಆರೋಪಿ. ಅಮರ್ ಅವರಿಗೆ ಆರೋಪಿಯು ಚಾಕುವಿನಿಂದ ಕುತ್ತಿಗೆ, ಭುಜ, ಹಣೆಗೆ ಇರಿದು ಗಾಯಗೊಳಿಸಿ ಅವರ ಕೊರಳಿನಲ್ಲಿದ್ದ 100 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳು ದೂರು ನೀಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳು ಕಾರ್ಖಾನೆಯಲ್ಲೇ ಕೆಲಸ ಮಾಡಿದ್ದ ಆರೋಪಿ: ಅಮರ್‌ ಅವರ ಕಾರ್ಖಾನೆಯಲ್ಲಿ ಕೇವಲ ಮೂರು ದಿನ ಕೆಲಸ ಮಾಡಿ ಬಿಟ್ಟು ಹೋಗಿದ್ದ ಆರೋಪಿಯು ನ.13 ರಂದು ಮಧ್ಯಾಹ್ನ ಕಾರ್ಖಾನೆಗೆ ಆಗಮಿಸಿ, ಎರಡು ಬಿಡಿಎ ಸೈಟ್‌ಗಳು ಕಡಿಮೆ ಬೆಲೆಗೆ ಮಾರಾಟಕ್ಕಿವೆ, ಅದನ್ನು ನೋಡಿಕೊಂಡು ಬರೋಣ ಎಂದು ಅಮರ್‌ಗೆ ಹೇಳಿದ್ದ.

ತಮ್ಮ ಕಾರಿನಲ್ಲಿ ಆರೋಪಿಯನ್ನು ಕರೆದುಕೊಂಡು ಅಮರ್ ಹೋಗಿದ್ದರು. ನಿವೇಶನ ನೋಡಿಕೊಂಡು ವಾಪಸ್ ಬರುವಾಗ ಕಾರಿನ ಹಿಂಭಾಗದ ಸೀಟ್‌ನಲ್ಲಿ ಕುಳಿತ್ತಿದ್ದ ಆರೋಪಿಯು ಅಮರ್‌ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಚೈನ್ ಕಿತ್ತುಕೊಳ್ಳಲು ಪ್ರಯತ್ನಿಸಿದ್ದ. ಇದಕ್ಕೆ ಅಮರ್​ ಪ್ರತಿರೋಧ ತೋರಿದಾಗ ಚಾಕುವಿನಿಂದ ಬೆನ್ನು, ಕುತ್ತಿಗೆಗೆ ಇರಿದು ಗಾಯಗೊಳಿಸಿದ್ದಾನೆ. ಬಳಿಕ ಕಾರಿನಿಂದ ಇಳಿದ ಅಮರ್ ತಪ್ಪಿಸಿಕೊಂಡು ಓಡಿಹೋಗಿ ರಸ್ತೆಯಲ್ಲಿ ಬರುತ್ತಿದ್ದ ಟಾಟಾ ಏಸ್ ವಾಹನದ ಹಿಂಭಾಗ ಹತ್ತಿಕೊಂಡು ಹೋಗಲು ಯತ್ನಿಸಿದ್ದರು. ಈ ವೇಳೆ ಅವರನ್ನು ಹಿಂಬಾಲಿಸಿ ಚೈನ್ ಕಿತ್ತುಕೊಂಡು ಪರಾರಿಯಾಗಿದ್ದಾನೆ.

ಈ ಸಂಬಂಧ ದೂರು ನೀಡಿರುವ ಅಮರ್‌, ಆರೋಪಿಯು ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ನೈರುತ್ಯ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣವರ್ ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *