Menu

ವಿಂಜೋ ಆನ್‌ಲೈನ್‌ ಗೇಮಿಂಗ್‌ ವಂಚನೆ: 3522 ಕೋಟಿ ರೂ. ಅಕ್ರಮ ಆದಾಯ ಗಳಿಕೆ

ವಿಂಜೋ ಆನ್‌ಲೈನ್‌ ಗೇಮಿಂಗ್‌ ಹೆಸರಿನಲ್ಲಿ ಆರೋಪಿಗಳು 3522 ಕೋಟಿ ರೂ. ಅಕ್ರಮ ಆದಾಯ ಗಳಿಸಿರುವುದನ್ನು ಇಡಿ ಬಹಿರಂಗಪಡಿಸಿದೆ. ಸಾವಿರಾರು ಕೋಟಿ ರೂ. ಅಕ್ರಮ ವರ್ಗಾವಣೆ ಆರೋಪದಡಿ ಪ್ರಕರಣದ ತನಿಖೆ ನಡೆಸಿದ್ದ ಇಡಿ ಆರೋಪಿಗಳ ವಿರುದ್ಧ ಬೆಂಗಳೂರು ನಗರದ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದೆ.

ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣದ ಪ್ರಮುಖ ಆರೋಪಿಗಳಾದ ವಿಂಜೋ ಕಂಪನಿ ಹಾಗೂ ನಿರ್ದೇರ್ಶಕರಾದ ಪವನ್ ನಂದಾ, ಸೌಮ್ಯ ಸಿಂಗ್‌ ರಾಥೋಡ್‌ ಮತ್ತು ವಿಂಜೋ  ಕಂಪನಿಯ ಭಾರತ ಮತ್ತು ವಿದೇಶಿ ಅಂಗಸಂಸ್ಥೆಗಳಾದ ವಿಂಜೋ ಯುಎಸ್‌, ವಿಂಜೋ ಎಸ್‌ಜಿ , ಜೋ ಕಂಪನಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ವಿಂಜೋ ಆನ್‌ಲೈನ್‌ ಗೇಮಿಂಗ್‌ ವಂಚನೆ ಆರೋಪ ಸಂಬಂಧ ಬೆಂಗಳೂರಿನ ಸೈಬರ್‌ ಕ್ರೈಂ ಪೊಲೀಸ್‌ ಠಾಣೆ, ರಾಜಸ್ಥಾನ, ನವದೆಹಲಿ ಮತ್ತು ಗುರುಗ್ರಾಮ್‌ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಎಫ್‌ಐಆರ್‌ ಆಧಾರದಡಿ ಇಡಿ ತನಿಖೆ ಕೈಗೊಂಡಿತ್ತು.

ವಿಂಜೊ ಕಂಪನಿಯು ಮೊಬೈಲ್ ಅಪ್ಲಿಕೇಶನ್ ಮೂಲಕ ರಿಯಲ್ ಮನಿ ಗೇಮ್ಸ್ ವ್ಯವಹಾರ ನಡೆಸುತ್ತಿತ್ತು. 25 ಕೋಟಿ ಬಳಕೆದಾರರನ್ನು ಹೊಂದಿದ್ದ ಕಂಪನಿಯು 100ಕ್ಕೂ ಹೆಚ್ಚು ಗೇಮ್ಸ್‌ ನೀಡುತ್ತಿತ್ತು. ಈ ಆರ್‌ಎಂಜಿ ಸೇವೆಗಳನ್ನು ನೀಡಲು ಕಂಪನಿಯು ಬಳಕೆದಾರರ ಬೆಟ್ಟಿಂಗ್ ಮೊತ್ತದ ನಿರ್ದಿಷ್ಟ ಶೇಕಡಾವಾರು ಮೊತ್ತವನ್ನು ಕಮಿಷನ್ ಪಡೆಯುತ್ತಿತ್ತು. ಈ ಆನ್‌ಲೈನ್‌ ಗೇಮ್ಸ್‌ ಸುರಕ್ಷಿತ ಹಾಗೂ ಪಾರದರ್ಶಕ ಎಂದು ಬಳಕೆದಾರರನ್ನು ನಂಬಿಸಿತ್ತು.

ಮೊದಲು ಬಳಕೆದಾರರಿಗೆ ಸಣ್ಣ ಬೋನಸ್‌ಗಳ ಆಮಿಷವೊಡ್ಡಿ ಸುಲಭವಾಗಿ ಗೆಲ್ಲುವಂತೆ ಮಾಡಲಾಗುತ್ತಿತ್ತು. ಗೆದ್ದಾಗ ಬಂದ ಹಣವನ್ನು ವಾಪಸ್‌ ಪಡೆಯಲು ಅವಕಾಶ ನೀಡಿತ್ತು. ಬಳಕೆದಾರರು ಹೆಚ್ಚಿನ ಮೊತ್ತದೊಂದಿಗೆ ಗೇಮ್‌ಗಳನ್ನು ಆಡಲು ಪ್ರಾರಂಭಿಸಿದಾಗ ಸೋಲಿಸಲಾಗುತ್ತಿತ್ತು. ಬಳಕೆದಾರರನ್ನು ಸೋಲಿಸಿ 734 ಕೋಟಿ ರೂ. ನಷ್ಟ ಮಾಡಿರುವುದುಇಡಿ ತನಿಖೆಯಲ್ಲಿ ಪತ್ತೆಯಾಗಿದೆ. ಬಳಕೆದಾರರು ಗೆದ್ದಿರುವ ಹಣ ಹಿಂಪಡೆಯಲು ನಿರ್ಬಂಧಿಸಿ ಆಟ ಮುಂದುವರಿಸಲು ಒತ್ತಾಯಿಸಲಾಗುತ್ತಿತ್ತು ಎಂದು ಇಡಿ ತಿಳಿಸಿದೆ.

ಕೇಂದ್ರ ಸರ್ಕಾರವು ರಿಯಲ್‌ ಮನಿ ಗೇಮಿಂಗ್ಸ್‌ ನಿಷೇಧಿಸಿದ ನಂತರವೂ ವಿಂಜೋ ಕಂಪನಿ ಬಳಕೆದಾರರ 47.66 ಕೋಟಿ ರೂ.. ಠೇವಣಿ ವಾಪಸ್‌ ಮಾಡಿಲ್ಲ. 2021-22ನೇ ಆರ್ಥಿಕ ವರ್ಷದಲ್ಲಿ 3,522.05 ಕೋಟಿ ರೂ. ವಂಚನೆಯಿಂದ ಗಳಿಸಿದೆ. ಗಳಿಸಿದ ಆದಾಯವನ್ನು ಯುಎಸ್‌ಎ ಮತ್ತು ಸಿಂಗಾಪುರದ ಶೆಲ್‌ ಕಂಪನಿಗಳ ಮೂಲಕ ಅಕ್ರಮವಾಗಿ ವರ್ಗಾಯಿಸಿದೆ. ಈ ಶೆಲ್‌ ಕಂಪನಿಗಳ ಹೆಸರಿನಲ್ಲಿ ಹೊಂದಿರುವ ವಿದೇಶಿ ಬ್ಯಾಂಕ್‌ ಖಾತೆಗಳಿಗೆ 55 ಮಿಲಿಯನ್‌ ಯುಎಸ್‌ ಡಾಲರ್‌ ಹಣವನ್ನು ವಿದೇಶಿ ನೇರ ಹೂಡಿಕೆ ಸೋಗಿನಲ್ಲಿ ವರ್ಗಾಯಿಸಿದೆ.

ವಿಂಜೋ ಕಂಪನಿಯು ಸಾಲ ವಾಪಸ್‌ ಎಂದು ಅಂಗಸಂಸ್ಥೆ ಕಂಪನಿಗೆ 230 ಕೋಟಿ ರೂ, ನೀಡಿದೆ. ಅಕ್ರಮ ಆದಾಯದ ಹೆಚ್ಚುವರಿ 150 ಕೋಟಿ ರೂ. ಅಂಗಸಂಸ್ಥೆ ಕಂಪನಿಗೆ ವರ್ಗಾಯಿಸಲು ಪ್ರಯತ್ನಿಸಿದೆ. ಅಕ್ರಮ ಆದಾಯವನ್ನು ಸಕ್ರಮ ಆಸ್ತಿ ಎಂದು ಬಿಂಬಿಸಲು ಆರೋಪಿಗಳು ಪ್ರಯತ್ನಿಸಿದ್ದಾರೆ ಎಂದು ಇಡಿ ದೋಷಾರೋಪಟ್ಟಿಯಲ್ಲಿ ಉಲ್ಲೇಖಿಸಿದೆ.

Related Posts

Leave a Reply

Your email address will not be published. Required fields are marked *