Saturday, November 08, 2025
Menu

ಡಿಸೆಂಬರ್ 1ರಿಂದ 19 ದಿನ ಸಂಸತ್ ಚಳಿಗಾಲದ ಅಧಿವೇಶನ

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನವು ಡಿಸೆಂಬರ್ 1ರಿಂದ 19ರವರೆಗೆ ನಡೆಯಲಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಿಸೆಂಬರ್ 1, 2025ರಿಂದ ಡಿಸೆಂಬರ್ 19, 2025 ರವರೆಗೆ (ಸಂಸದೀಯ ವ್ಯವಹಾರಗಳ ಅಗತ್ಯಗಳಿಗೆ ಒಳಪಟ್ಟು) ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಕರೆಯುವ ಸರ್ಕಾರದ ಪ್ರಸ್ತಾಪವನ್ನು ಅನುಮೋದಿಸಿದ್ದಾರೆ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ರಿಜಿಜು,ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುವ ಮತ್ತು ಜನರ ಆಕಾಂಕ್ಷೆಗಳನ್ನು ಪೂರೈಸುವ ರಚನಾತ್ಮಕ ಮತ್ತು ಅರ್ಥಪೂರ್ಣ ಅಧಿವೇಶನ ಎದುರು ನೋಡುತ್ತಿದ್ದೇನೆ’ ಎಂದು ಅವರು ಪೋಸ್ಟ್​​ನಲ್ಲಿ ಬರೆದುಕೊಂಡಿದ್ದಾರೆ.

ಸಂಸತ್ತಿನ ಮಳೆಗಾಲದ ಅಧಿವೇಶನವು ಜುಲೈ 21ರಿಂದ ಆಗಸ್ಟ್ 21ರವರೆಗೆ ನಡೆದಿತ್ತು. ರಾಜ್ಯಸಭೆ ಮತ್ತು ಲೋಕಸಭೆ ಎರಡರಲ್ಲೂ ಪುನರಾವರ್ತಿತ ಅಡಚಣೆಗಳಿಂದಾಗಿ ನಿರ್ದಿಷ್ಟಪಡಿಸಿದ ಅವಧಿಯವರೆಗೆ ಚರ್ಚೆಗಳು ನಡೆದಿರಲಿಲ್ಲ. ಆಪರೇಷನ್​ ಸಿಂಧೂರ್​ ಹಾಗೂ ಬಿಹಾರದಲ್ಲಿ ನಡೆದ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ ಸೇರಿದಂತೆ ಹಲವಾರು ವಿಷಯಗಳ ಕುರಿತು ವಿಪಕ್ಷಗಳು ಚರ್ಚೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದವು. ಈ ಹಿನ್ನೆಲೆಯಲ್ಲಿ, ಸಂಸತ್ತಿನ ಉಭಯ ಸದನಗಳಲ್ಲಿ ಭಾರಿ ಗದ್ದಲ, ಜಟಾಪಟಿ ನಡೆದಿತ್ತು. ಸಂಸತ್ ಭವನದ ಸಂಕೀರ್ಣದಲ್ಲಿಯೂ ಸಹ ಪ್ರತಿಪಕ್ಷಗಳ ನಾಯಕರು ಪೋಸ್ಟರ್‌ಗಳನ್ನು ಹರಿದು ಹಾಕುವ ಮೂಲಕ ಪ್ರತಿಭಟನೆ ನಡೆಸಿದ್ದರು.

ಲೋಕಸಭೆಯು ನಿಗದಿತ 120 ಗಂಟೆಗಳಲ್ಲಿ ಕೇವಲ 37 ಗಂಟೆಗಳ ಕಾಲ ಕಾರ್ಯನಿರ್ವಹಿಸಿದರೆ, ರಾಜ್ಯಸಭೆಯು ಕ್ರಮವಾಗಿ 41 ಗಂಟೆ 15 ನಿಮಿಷಗಳ ಕಾಲ ನಡೆದಿತ್ತು. ಕೇವಲ ಶೇ.31 ಮತ್ತು ಶೇ.38.8ರಷ್ಟು ಚರ್ಚೆಯಾಗಿತ್ತು. ಚಳಿಗಾಲದ ಅಧಿವೇಶನದ ಮೂಲಕ ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರು ರಾಜ್ಯಸಭಾ ಸಭಾಪತಿಯಾಗಿ ಪದಾರ್ಪಣೆ ಮಾಡಲಿದ್ದಾರೆ. ಸೆಪ್ಟೆಂಬರ್ 12ರಂದು ಅವರು 15ನೇ ಉಪ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಅಕ್ಟೋಬರ್ 21ರಂದು, ರಾಧಾಕೃಷ್ಣನ್ ಅವರು ಸಂಸತ್ ಭವನದಲ್ಲಿ ರಾಜ್ಯಸಭೆಯ ಸಚಿವಾಲಯದ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದ್ದರು. ಕಚೇರಿ, ಶಾಸಕಾಂಗ ವಿಭಾಗ, ಪ್ರಶ್ನೋತ್ತರ ಶಾಖೆ, ಸದಸ್ಯರ ವೇತನ ಮತ್ತು ಭತ್ಯೆ ಶಾಖೆ, ಸದಸ್ಯರ ಸೌಲಭ್ಯ ವಿಭಾಗ, ಬಿಲ್ ಕಚೇರಿ, ಸೂಚನೆ ಕಚೇರಿ, ಲಾಬಿ ಕಚೇರಿ ಮತ್ತು ವರದಿಗಾರರ ಶಾಖೆ ಸೇರಿದಂತೆ ಪ್ರಮುಖ ವಿಭಾಗಗಳಿಗೆ ಭೇಟಿ ಕೊಟ್ಟಿದ್ದರು. ಅಲ್ಲಿನ ಸಿಬ್ಬಂದಿಯೊಂದಿಗಿನ ಸಭೆಯಲ್ಲಿ, ರಾಜ್ಯಸಭೆಯ ಸುಗಮ ಮತ್ತು ಪರಿಣಾಮಕಾರಿ ಕಾರ್ಯನಿರ್ವಹಣೆಯಲ್ಲಿ ಅವರ ಪಾತ್ರವನ್ನು ಉಪ ರಾಷ್ಟ್ರಪತಿಗಳು ಶ್ಲಾಘಿಸಿದ್ದರು.

Related Posts

Leave a Reply

Your email address will not be published. Required fields are marked *