Menu

ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ, ಪ್ರತಿಪಕ್ಷದಿಂದ ಅವಿಶ್ವಾಸ ನಿರ್ಣಯ ಮಂಡನೆ ಸಿದ್ಧತೆ, ಸರ್ಕಾರದಿಂದ 33 ಮಸೂದೆ ಮಂಡನೆ

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಇಂದಿನಿಂದ ವಿಧಾನ ಮಂಡಲ ಉಭಯ ಸದನಗಳ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಆಡಳಿತಾರೂಢ ಹಾಗೂ ಪ್ರತಿಪಕ್ಷ ಸದಸ್ಯರ ಮಧ್ಯೆ ಕಾವೇರಿದ ಚರ್ಚೆ, ಜಟಾಪಟಿ ನಡೆಯುವ ಸಾಧ್ಯತೆಗಳು ದಟ್ಟವಾಗಿವೆ.  ಸರ್ಕಾರದಿಂದ 30ಕ್ಕೂ ಹೆಚ್ಚು ಮಸೂದೆಗಳು ಮಂಡನೆಯಾಗಲಿದ್ದು, ಒಂದಷ್ಟು ಮಸೂದೆಗಳು ಅಧಿವೇಶನದಲ್ಲಿ ಮಂಡಿಸಲು ಸಂಪುಟದಲ್ಲಿ ಅನುಮೋದನೆ ಸಿಕ್ಕಿದ್ದು, ಇನ್ನೊಂದಷ್ಟು ಬಿಲ್​ಗಳು ಸಂಪುಟ ಸಭೆಯ ಮುಂದೆ ಬರಬೇಕಾಗಿದೆ.‌

ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ, ಸಂಪುಟ ಪುನರ್‌ರಚನೆ ಚರ್ಚೆ ಶಮನಗೊಂಡಿಂತ ಇದ್ದರೂ ಬೂದು ಮುಚ್ಚಿದ ಕೆಂಡದಂತಿರುವುದ ಸುಳ್ಳಲ್ಲ. ಪ್ರತಿಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ನಿರ್ಧರಿಸಿದ್ದು, ಪ್ರತಿಪಕ್ಷಗಳನ್ನು ಎದುರಿಸಲು ಸರ್ಕಾರ ಸರ್ವ ಸನ್ನದ್ಧವಾಗಿದೆ.

ಕಬ್ಬು, ಮೆಕ್ಕೆಜೋಳ, ಹಸಿರು, ಉದ್ದು ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ರೈತರು ಹೋರಾಟ ನಡೆಸಲು ಮುಂದಾಗಿದ್ದಾರೆ. ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ನೇತೃತ್ವದಲ್ಲಿ ರೈತರು ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಆಶಾ ಕಾರ್ಯಕರ್ತೆಯರು, ರೈತ ಪರ ಸಂಘಟನೆಗಳು ಸೇರಿ ಹಲವು ಸಂಘಟನೆಗಳು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಸಲಿವೆ.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ನೀಡಿದ ಮಾಹಿತಿ ಪ್ರಕಾರ 33 ಮಸೂದೆಗಳನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ. 33 ಕರಡು ಮಸೂದೆಗಳು ಮಂಡನೆಗೆ ಸಿದ್ಧವಾಗಿವೆ. 16 ಮಸೂದೆಗಳು ಅಧಿವೇಶನದಲ್ಲಿ ಮಂಡಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. 12 ಮಸೂದೆಗಳ ಕರಡು ಸಿದ್ಧವಾಗಿದ್ದು, ಸಂಪುಟ ಸಭೆಯ ಮುಂದಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2 ಮಸೂದೆಗಳು ಜಂಟಿ ಸದನ ಸಮಿತಿ ಪರಿಶೀಲನೆಗೆ ಕಳುಹಿಸಲಾಗಿದ್ದು, ಅವುಗಳು ಬೆಳಗಾವಿ ಅಧಿವೇಶನದಲ್ಲಿ ಮಂಡನೆಯಾಗಲಿದೆ.

ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ (ತಿದ್ದುಪಡಿ) ಬಿಲ್ 2025

ಈವರೆಗೆ ಕನಿಷ್ಠ 50 ಕಾರ್ಮಿಕರಿರುವ ಅಂಗಡಿ, ಸಂಸ್ಥೆಗಳಿಂದ ಕಾರ್ಮಿಕ ನಿಧಿ ವಂತಿಕೆ ಸಂಗ್ರಹಿಸಲಾಗುತ್ತಿದೆ. ಇನ್ನು ಮುಂದೆ ಕನಿಷ್ಠ 10 ಕಾರ್ಮಿಕರಿರುವ ಅಂಗಡಿ, ಸಂಸ್ಥೆಗಳಿಂದ ಕಾರ್ಮಿಕ ನಿಧಿ ವಂತಿಕೆ ಸಂಗ್ರಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಿಯಮ ತಿದ್ದುಪಡಿ ಮಸೂದೆ ಇದಾಗಿದೆ. ಸಂಪುಟ ಒಪ್ಪಿಗೆ ದೊರಕಿದೆ.

ಕರ್ನಾಟಕ ಬಾಡಿಗೆ (ತಿದ್ದುಪಡಿ) ಬಿಲ್ 2025

ಬಾಡಿಗೆದಾರರು ಮತ್ತು ಮನೆ ಮಾಲೀಕರ ನಡುವಿನ ವಿವಾದಗಳನ್ನು ಬಗೆಹರಿಸಲು, ಪಾರದರ್ಶಕತೆ ತರಲು ಪ್ರಮುಖ ತಿದ್ದುಪಡಿಗಳನ್ನು ಪ್ರಸ್ತಾಪಿಸಲಾಗಿದೆ. ಬಾಡಿಗೆದಾರ ಅನಧಿಕೃತ ಸಬ್‌ಲೆಟಿಂಗ್‌ಗೆ ರೂ. 50,000 ದಂಡ ಹೆಚ್ಚಳ, ನೋಂದಣಿ ಕಡ್ಡಾಯ, ಡೆಪಾಸಿಟ್ ಮಿತಿ, ಮತ್ತು ಮಧ್ಯವರ್ತಿಗಳಿಗೂ ದಂಡ ಹೆಚ್ಚಿಸಲಾಗಿದೆ. ಸಣ್ಣ ಪ್ರಮಾಣದ ಅಪರಾಧಗಳನ್ನು ಡಿಕ್ರಿಮಿನಲೈಸ್ ಮಾಡಲಾಗುವುದು. ಸಂಪುಟ ಒಪ್ಪಿಗೆ ದೊರಕಿದೆ.

ಗ್ರೇಟರ್ ಬೆಂಗಳೂರು (2ನೇ ತಿದ್ದುಪಡಿ) ಮಸೂದೆ

ಲೋಕಸಭೆ, ರಾಜ್ಯಸಭೆ ಸದಸ್ಯರು, ವಿಧಾನಸಭೆ, ಪರಿಷತ್ ಸದಸ್ಯರುಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸದಸ್ಯರಾಗಿ ಸೇರ್ಪಡೆಗೊಳಿಸುವ ಹಾಗೂ ಕೆಲ ನಿಯಮಗಳಿಗೆ ತಿದ್ದುಪಡಿ ತರುವ ಉದ್ದೇಶದಿಂದ ಮಸೂದೆ ರೂಪಿಸಲಾಗಿದೆ. ಸಂಪುಟ ಒಪ್ಪಿಗೆ ದೊರಕಿದೆ.

ಔಷಧಗಳು ಮತ್ತು ಸೌಂದರ್ಯವರ್ದಕಗಳು ಬಿಲ್

ಕೇಂದ್ರದ ಔಷಧ ಪ್ರಯೋಗಾಲಯಗಳ ಮತ್ತು ನಿರ್ದೇಶಕರು ಔಷಧ ಮತ್ತು ಸೌಂದರ್ಯವರ್ಧಕಗಳು ಇವರ ಕೆಲಸ ಕಾರ್ಯಗಳನ್ನು ರಾಜ್ಯ ಸರ್ಕಾರ ಗೊತ್ತುಪಡಿಸಿದ ಪ್ರಾಧಿಕಾರ ಅಥವಾ ಅಂಥ ಅಧಿಕಾರಿಯಿಂದ ಕಾರ್ಯನಿರ್ವಹಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡುವುದಾಗಿದೆ. ಯಾವ ವ್ಯಕ್ತಿಯಿಂದ ಔಷಧ ಮತ್ತು ಸೌಂದರ್ಯ ವರ್ಧಕಗಳನ್ನು ವಶಪಡಿಸಿಕೊಳ್ಳಲಾಗುವುದೋ ಆ ವ್ಯಕ್ತಿಯು ತಾನು ತಪ್ಪು ವ್ಯಾಪಾರದ ಮುದ್ರೆ ಅಥವಾ ಕಲಬೆರಕೆಯ ಔಷಧ ಅಥವಾ ಸೌಂದರ್ಯವರ್ಧಕ ಹೊಂದಿಲ್ಲವೆಂದು ಸಾಬೀತುಪಡಿಸುವ ಜವಾಬ್ದಾರಿಯನ್ನು ಅವನ ಮೇಲೆಯೇ ಹೊರಿಸಲಾಗುವುದು. ಸಂಪುಟ ಒಪ್ಪಿಗೆ ದೊರಕಿದೆ.

ಕ್ಷೇಮಾಭಿವೃದ್ಧಿ (ತಿದ್ದುಪಡಿ) ವಿಧೇಯಕ

ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು ರಾಜ್ಯದಲ್ಲಿನ ಸಿನಿ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಕಾರ್ಯಗಳಿಗಾಗಿ ಅಗತ್ಯವಿರುವ ನಿಧಿ ಸಂಗ್ರಹಣೆಗಾಗಿ Multiplex ಥಿಯೇಟರ್‌ಗಳ ಸಿನಿಮಾ ಟಿಕೆಟ್‌ಗಳ ಮೇಲೆ ಶೇ.2 ರಷ್ಟು Cess ಸಂಗ್ರಹಿಸಲು ಉದ್ದೇಶಿಸಿ, ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಅಧಿನಿಯಮ 2024 ಅಧಿಸೂಚನೆ ಹೊರಡಿಸಲಾಗಿದೆ. ಇದಕ್ಕೆ ಸಣ್ಣ ತಿದ್ದುಪಡಿ ತರಲು ಮಸೂದೆ. ಸಂಪುಟ ಒಪ್ಪಿಗೆ ದೊರಕಿದೆ.

ನಗರಾಭಿವೃದ್ಧಿ ಪ್ರಾಧಿಕಾರಗಳ (ತಿದ್ದುಪಡಿ) ಬಿಲ್

ನಗರಾಭಿವೃದ್ಧಿ ಪ್ರಾಧಿಕಾರಗಳ ಆಯುಕ್ತರಾಗಿ ಗ್ರೂಪ್ ಎ ದರ್ಜೆ ಅಧಿಕಾರಿ, ಕೆಎಎಸ್ ಅಧಿಕಾರಿಯನ್ನು ನೇಮಿಸಲು ತಿದ್ದುಪಡಿ.

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಬಿಲ್

ಖಾಸಗಿ ಆಂಬ್ಯುಲೆನ್ಸ್​ಗಳನ್ನು ನಿಯಂತ್ರಿಸಲು ಹಾಗೂ ಸಂಚಾರಿ ವೈದ್ಯಕೀಯ ಘಟಕಗಳನ್ನು ಖಾಸಗಿ ವೈದ್ಯಕೀಯ ಸಂಸ್ಥೆ ಎಂದು ನೋಂದಾಯಿಸಲು ತಿದ್ದುಪಡಿ. ಸಂಪುಟ ಒಪ್ಪಿಗೆ ಬಾಕಿ ಇದೆ.

Related Posts

Leave a Reply

Your email address will not be published. Required fields are marked *