ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿಯು ಇಲ್ಲಿ ನಡೆದ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದೆ. ಇಪ್ಪತ್ತು ವರ್ಷಗಳ ಅಜ್ಞಾತವಾಸದ ಬಳಿಕ ತಾರಿಖ್ ರೆಹಮಾನ್ ಜನಾದೇಶ ಪಡೆದು ದೇಶದ ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ಮುಂದೆ ಸಾಗಿದ್ದಾರೆ. ಭಾರತ ದೊಂದಿಗಿನ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಸಂಬಂಧಗಳನ್ನು ನೂತನ ಸರ್ಕಾರ ಯಾವ ರೀತಿಯಲ್ಲಿ ನಿರ್ವಹಿಸಲಿದೆ ಎಂಬುದನ್ನು ಕಾದುನೋಡಬೇಕಷ್ಟೆ. ಖಲೀದಾ ಜಿಯಾ ಮತ್ತು ಜಿಯಾವುರ್ ರೆಹಮಾನ್ ನೇತೃತ್ವದ ಪಾರ್ಟಿಯೀಗ ಚುನಾವಣೆಯಲ್ಲಿ ಬಹುಮತ ಸಾಧಿಸಿರುವುದು ಗಮನಾರ್ಹ.
ಎರಡು ವರ್ಷಗಳ ಹಿಂದೆ ದೇಶದಲ್ಲಿ ಉಂಟಾದ ಆಂತರಿಕ ಗಲಭೆ ಮತ್ತು ರಾಜಕೀಯ ಸಂಕ್ಷೆಭೆಯ ಕಾರಣದಿಂದ ದೇಶದ ಪ್ರಧಾನಿಯಾಗಿದ್ದ ಶೇಕ್ ಹಸೀನಾ ಪದಚ್ಯುತಗೊಂಡು ಭಾರತದ ಆಸರೆ ಯಲ್ಲಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ, ಚುನಾಯಿತ ಸರ್ಕಾರಕ್ಕೆ ಎಲ್ಲ ಬಗೆಯ ಸಹಕಾರ ಮತ್ತು ನೆರವು ನೀಡಲು ಸಿದ್ಧವಿರುವುದಾಗಿ ಘೋಷಿಸಿದ್ದಾರೆ. ಇದೇ ವೇಳೆ ಗುರುತರ ಕ್ರಿಮಿನಲ್ ಆರೋಪಗಳ ಹಿನ್ನೆಲೆಯಲ್ಲಿ ಪದಚ್ಯುತ ಪ್ರಧಾನಿ ಹಸಿನಾ ಅವರನ್ನು ತಮಗೊಪ್ಪಿಸಲು ಬಿಎನ್‌ಪಿ ನಾಯಕ ಈಗ ಭಾರತವನ್ನು ಕೋರಿದ್ದಾರೆ.
ನೆರೆಯ ದೇಶಕ್ಕೆ ಸಹಕಾರ ನೀಡುವುದಾಗಿ ಘೋಷಿಸಿರುವ ಭಾರತದ ಪ್ರಧಾನಿ ಮೋದಿ, ಹಸೀನಾ ಹಸ್ತಾಂತರದ ವಿಚಾರದಲ್ಲಿ ಯಾವ ಬಗೆಯ ತೀರ್ಮಾನ ಕೈಗೊಳ್ಳುವರು ಎಂಬುದನ್ನು ಈಗ ಕಾದು ನೋಡುವಂತಾಗಿದೆ. ಈ ಹಿಂದೆ ಹಸೀನಾ ಆಡಳಿತವು ತಾರಿಖ್ ವಿರುದ್ದ ಕ್ರಿಮಿನಲ್ ಆರೋಪಗಳನ್ನು ಹೊರಿಸಿ ಅವರಿಗೆ ಶಿಕ್ಷೆಯನ್ನೂ ಘೋಷಿಸಿತ್ತು ಆದರೆ ಈಗ ಈ ದೇಶದಲ್ಲಿ ರಾಜಕೀಯ ಸನ್ನಿವೇಶ ಬದಲಾಗಿದೆ. ಅಲ್ಲದೆ ಯೂನಸ್ ಸರ್ಕಾರವು ಹಸೀನಾಗೆ ಗಲ್ಲು ಶಿಕ್ಷೆ ವಿಧಿಸಿದ್ದು ಹಸೀನಾ ಹಸ್ತಾಂತರದ ವಿಚಾರದಲ್ಲಿ ತಾರಿಖ್ ಸರ್ಕಾರ ಕಠಿಣ ನಿಲುವು ಅನುಸರಿಸಿದರೆ ಇದಕ್ಕೆ ಭಾರತದ ವಿದೇಶಾಂಗ ನೀತಿ ಮತ್ತು ಉತ್ತರ ಏನೆಂಬುದೂ ಗಂಭೀರ ಪ್ರಶ್ನೆಯಾಗಿದೆ.
ಬಾಂಗ್ಲಾದಲ್ಲಿ ಈಗಾಗಲೇ ಹಿಂದುಗಳು ಮತ್ತು ಹಿಂದು ದೇವಾಲಯಗಳ ಮೇಲೆ ಆಕ್ರಮಣ ಮತ್ತು ವ್ಯಾಪಕ ಹಿಂಸಾಚಾರ ಜರುಗಿದೆ , ಇದು ಭಾರತದಿಂದ ವ್ಯಾಪಕ ಖಂಡನೆ ಮತ್ತು ಪ್ರತಿಭಟನೆ ವ್ಯಕ್ತ ವಾಗಿದೆ. ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರಾದ ಹಿಂದು ಸಮುದಾಯ ಮತ್ತು ಅವರ ಆಸ್ತಿ- ಪಾಸ್ತಿಯನ್ನು ಸಂರಕ್ಷಿಸುವ ಕೆಲಸವನ್ನು ಈಗ ತಾರಿಖ್ ಸರ್ಕಾರ ನಿರ್ವಹಿಸುವುದು ಅನಿವಾರ್ಯ. ಈ ದೇಶದಲ್ಲಿರುವ ಹಿಂದುಗಳ ಸಂಖ್ಯೆಯೇನೂ ಕಡಿಮೆಯಿಲ್ಲ. ಮಿಗಿಲಾಗಿ ಢಾಕ್ಕಾದಲ್ಲಿ ಹಿಂದುಗಳ ಬಹು ಮತಗಳಿಂದಲೇ ಇಲ್ಲಿ ಅಭ್ಯರ್ಥಿ ಗೆದ್ದಿರುವುದು ಮಹತ್ವಪೂರ್ಣ ಸಂಗತಿ.
ಬಾಂಗ್ಲಾ ವಿಚಾರದಲ್ಲಿ ಭಾರತವು ಕಳೆದ ಐವತ್ತು ವರ್ಷಗಳಿಂದಲೂ ಒಂದೇ ಬಗೆಯ ವಿದೇಶಾಂಗ ನೀತಿಯನ್ನು ಹೊಂದಿದ್ದು ಇದರಲ್ಲಿ ಯಾವ ಬದಲಾವಣೆಯೂ ಇಲ್ಲ. ಗಂಗಾ ಮತ್ತು ಬ್ರಹ್ಮಪುತ್ರ ನದಿ ನೀರು ಹಂಚಿಕೆ ಮತ್ತು ವಾಣಿಜ್ಯ ವಿನಿಮಯದ ವಿಚಾರದಲ್ಲಿ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆ ನಡೆದಿದ್ದು, ಈಗ ಚುನಾಯಿತ ಸರ್ಕಾರ ಬಂದಿರುವ ಕಾರಣ ನನೆಗುದಿಗೆ ಬಿದ್ದ ಪ್ರಮುಖ ಒಪ್ಪಂದಗಳಿಗೆ ಈಗ ಮರು ಚಾಲನೆ ದೊರೆಯಬೇಕಿದೆ. ಆದರೆ ಬಾಂಗ್ಲಾದೇಶದ ಆಂತರಿಕ ಆಡಳಿತ ನಿರ್ವಹಣೆಯ ಮೇಲೆ ಪಾಕಿಸ್ಥಾನವು ಪರೋಕ್ಷವಾಗಿ ತನ್ನ ಕಾರುಬಾರು ತೋರು ವುದೇ ಎಂಬುದು ಪ್ರಶ್ನಾರ್ಹ.
ಬಾಂಗ್ಲಾದೇಶದಲ್ಲಿರುವ ಮುಸ್ಲಿಂ ಸಮುದಾಯವನ್ನು ಮುಂದಿಟ್ಟುಕೊಂಡು, ಪಾಕಿಸ್ಥಾನವು ಭಾರತದ ವಿರುದ್ದ ಹುಳಿ ಹಿಂಡುವ ಕೆಲಸವನ್ನು ಮಾಡುವುದರಲ್ಲಿ ಅನುಮಾನವಿಲ್ಲ. ಈ ದಿಶೆಯಲ್ಲಿ ನೂತನ ಸರ್ಕಾರ ಭಾರತದ ಜೊತೆ ಎಲ್ಲ ರೀತಿಯಲ್ಲಿ ಸೌಹಾರ್ದಯುತ ಸಂಬಂಧಗಳನ್ನು ಕಾಯ್ದುಕೊಳ್ಳಲು ಪಾಕ್ ಜೊತೆ ಅಂತರವನ್ನೂ ಕಾಯ್ದುಕೊಳ್ಳಬೇಕಾಗುತ್ತದೆ. ಒಟ್ಟಿನಲ್ಲಿ ಭಾರತ ದೊಂದಿಗಿನ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಸಂಬಂಧಗಳನ್ನು ನೂತನ ಸರ್ಕಾರ ಯಾವ ರೀತಿಯಲ್ಲಿ ನಿರ್ವಹಿಸಲಿದೆ ಎಂಬುದನ್ನು ಕಾದುನೋಡಬೇಕಷ್ಟೆ.


