ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಡಾ.ಸಿಜೆ ರಾಯ್ ಅವರಿಚ್ಛೆಯಂತೆ ಬನ್ನೇರುಘಟ್ಟದ ಕಾಸಾಗ್ರ‍್ಯಾಂಡ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಲಾಗಿದೆ.
ಆಪ್ತರ ಬಳಿ ಈ ಹಿಂದೆ ಬನ್ನೇರುಘಟ್ಟದ ಕಾಸಾಗ್ರ‍್ಯಾಂಡ್‌ನಲ್ಲಿ ಮಣ್ಣಾಗುವ ಬಗ್ಗೆ ಡಾ.ಸಿ.ಜೆ. ರಾಯ್ ಹೇಳಿಕೊಂಡಿದ್ದರು. ಅವರ ಇಚ್ಚೆಯಂತೆ ಬೆಂಗಳೂರಿನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ವೈಟ್ ಗೋಲ್ಡ್ ಸಂಸ್ಥೆಯ ಮಾಲೀಕ, ಸಹೋದರ ಬಾಬು ಜೋಸೆಫ್ ಒಡೆತನದ ಕೋರಮಂಗಲದ ವೈಟ್ ಹೌಸ್‌ನಲ್ಲಿ ಮೃತ ರಾಯ್ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಇಡಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸಿ.ಜೆ. ರಾಯ್ ಅವರ ಅಂತ್ಯಕ್ರಿಯೆಯು ಇಂದು (ಜ.31) ಸಂಜೆ ಬನ್ನೇರುಘಟ್ಟದ ಕಾಸಾಗ್ರ‍್ಯಾಂಡ್‌ನಲ್ಲಿ ನೆರವೇರುವ ಸಾಧ್ಯತೆಯಿದ್ದು, ನಾಡಿನ ಪ್ರಮುಖ ಉದ್ಯಮಿಗಳು, ಸಿನಿಮಾ ತಾರೆಯರು ಮತ್ತು ರಾಜಕಾರಣಿಗಳು ಭಾಗವಹಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಕಾನ್ಫಿಡೆಂಟ್ ಗ್ರೂಪ್ (Confident Group) ಮುಖ್ಯಸ್ಥ ಸಿಜೆ ರಾಯ್ (CJ Roy) ಆತ್ಮಹತ್ಯೆಗೆ ಸಂಬಂಧಿಸಿದಂತೆ ಅಶೋಕ್ ನಗರ ಪೊಲೀಸ್ (Ashok Nagar Police) ಠಾಣೆಯಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಾಗಿದೆ.
ಯುಡಿಆರ್ ಪ್ರಕರಣ ದಾಖಲು
ಉದ್ಯಮಿ ಸಾವಿಗೆ ನಿಖರ ಕಾರಣ ತಿಳಿದುಬರದ ಹಿನ್ನೆಲೆ ಅಶೋಕ ನಗರ ಪೊಲೀಸರು BNS 174ಸಿ ಅಡಿಯಲ್ಲಿ UDR (ಅನುಮಾನಾಸ್ಪದ ಸಾವು) ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಸಿಜೆ ರಾಯ್ ಆತ್ಮಹತ್ಯೆಗೆ ಸಂಬಂಧ ತನಿಖೆ ನಡೆಸುವಂತೆ ಕಾನ್ಫಿಡೆಂಟ್ ಗ್ರೂಪ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಟಿ.ಎ ಜೋಸೆಫ್ ಅವರು ದೂರು ನೀಡಿದ್ದಾರೆ. ದೂರಿನಲ್ಲಿ ಐಟಿ ಅಧಿಕಾರಿಗಳ ವಿರುದ್ಧ ಜೋಸೆಫ್ ಅವರು ಯಾವುದೇ ಆರೋಪ ಮಾಡಿಲ್ಲ ಎನ್ನಲಾಗಿದೆ. ಹೀಗಾಗಿ ಅಶೋಕ್ ನಗರ ಪೊಲೀಸರು ಅಸಹಜ ಸಾವು ಎಂದು ತನಿಖೆ ನಡೆಸುತ್ತಿದ್ದಾರೆ.
ದೂರಿನಲ್ಲಿ ಏನಿದೆ?
ಶುಕ್ರವಾರ (ಜ.31) ಸುಮಾರು 3 ಗಂಟೆಗೆ ಸಿಜೆ ರಾಯ್ ಅವರು ನನ್ನೊಂದಿಗೆ ಬೆಂಗಳೂರಿನ ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿರುವ ತಮ್ಮ ಕಾನ್ಫಿಡೆಂಡ್ ಕಚೇರಿಗೆ ಐಟಿ ಅಧಿಕಾರಿಗಳಿಗೆ ಹೇಳಿಕೆ ನೀಡಲು ಬಂದಿದ್ದರು. ನಂತರ ತಮ್ಮ ಕ್ಯಾಬಿನ್‌ಗೆ ತೆರಳಿದರು. ಸ್ವಲ್ಪ ಸಮಯದ ನಂತರ, ತಮ್ಮ ತಾಯಿಯೊಂದಿಗೆ ಮಾತನಾಡಬೇಕೆಂದು ನನಗೆ ತಿಳಿಸಿದ್ರು. ಹಾಗಾಗಿ ನಾನು ಹೊರಗೆ ಬಂದೆ. ಸುಮಾರು ಹತ್ತು ನಿಮಿಷಗಳ ನಂತರ ನಾನು ವಾಪಸ್ ಹೋದಾಗ ಸಿಜೆ ರಾಯ್ ಅವರು ಯಾರನ್ನೂ ಕ್ಯಾಬಿನ್ ಒಳಗೆ ಬಿಡದಂತೆ ಸೂಚಿಸಿದ್ದಾರೆ ಎಂದು ಭದ್ರತಾ ಸಿಬ್ಬಂದಿ ತಿಳಿಸಿದರು.
ಮತ್ತೆ ಹತ್ತು ನಿಮಿಷಗಳ ನಂತರ ನಾನು ಕ್ಯಾಬಿನ್ ಬಳಿ ಹೋಗಿ ಬಾಗಿಲು ತಟ್ಟಿದೆ, ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಬಾಗಿಲು ಒಳಗಿನಿಂದ ಲಾಕ್ ಆಗಿರುವುದು ಗೊತ್ತಾಯಿತು. ನಂತರ ಬಾಗಿಲು ಮುರಿದು ಒಳಗೆ ಹೋದೆವು. ಒಳಗೆ ಹೋದಾಗ, ಡಾ.ರಾಯ್ ತಮ್ಮ ಕುರ್ಚಿಯ ಮೇಲೆ ಕುಳಿತಿದ್ದರು. ಶರ್ಟ್ ಮೇಲೆ ರಕ್ತವಿತ್ತು. ದೇಹ ತಣ್ಣಗಾಗಿತ್ತು. ತಕ್ಷಣ ಅಂಬ್ಯುಲೆನ್ಸ್‌ಗೆ ಕಾಲ್ ಮಾಡಿದೆವು. ಅಂಬ್ಯುಲೆನ್ಸ್ ಜೊತೆಗೆ ಬಂದ ವೈದ್ಯಕೀಯ ಸಿಬ್ಬಂದಿ ಅವರ ನಾಡಿಮಿಡಿತವನ್ನು ಪರೀಕ್ಷಿಸಿದಾಗ, ನಾಡಿಮಿಡಿತ ಇರಲಿಲ್ಲ. ಅವರನ್ನು ತಕ್ಷಣ ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿರುವ ನಾರಾಯಣ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಆಸ್ಪತ್ರೆಯಲ್ಲಿ ಅವರನ್ನು ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಲಾಯಿತು. ಯಾವ ಒತ್ತಡ ಅವರನ್ನು ಆತ್ಮಹತ್ಯೆ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿರಬಹುದು ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಿ ಎಂದು ಮನವಿ ಮಾಡಿಕೊಂಡಿದ್ದಾರೆ.


