ಹಣದುಬ್ಬರದಂತಹ ಭೀಕರ ಸಮಸ್ಯೆಗಳಿಂದ ಪಾಕಿಸ್ತಾನವಿಂದು ಜಾಗತಿಕ ಮಟ್ಟದಲ್ಲಿ ತಲೆ ತಗ್ಗಿಸುವಂತಾಗಿದೆ. ಮೊದಲು ಇವುಗಳಿಗೆ ತುಸುಮಟ್ಟಿಗಾದದರೂ ಪಾಕ್ ಪರಿಹಾರ ಕಂಡುಕೊಳ್ಳಲಿ. ಯುದ್ಧದಿಂದ ಮಜಾ ಬರುತ್ತೆ ಎಂಬ ಹಾಸ್ಯಾಸ್ಪದ ಹೇಳಿಕೆಗಳಿಂದ ಪಾಕ್ ಮಿಲಿಟರಿ ಅಧಿಕಾರಿಗಳು ಇನ್ನಾದರೂ ದೂರ ಸರಿಯಲಿ.
ಮೊನ್ನೆಯಷ್ಟೆ ಭಾರತದ ಮಿಲಿಟರಿ ಪಡೆಯಿಂದ ಮಣ್ಣು ಮುಕ್ಕಿಸಿಕೊಂಡಿರುವ ಪಾಕಿಸ್ತಾನ ಮತ್ತೆ ತನ್ನ ನಾಲಿಗೆಯನ್ನು ಉದ್ಧ ಚಾಚಿದೆ! ಇಡೀ ಪ್ರಪಂಚವಿಂದು ವಿನಾಶಕಾರಿ ಯುದ್ಧಗಳ ವಿರುದ್ಧ ಧ್ವನಿ ಎತ್ತಿದ್ದರೆ, ಈ ದೇಶದ ಮಿಲಿಟರಿ ಮುಖ್ಯಸ್ಥ ಅನವಶ್ಯಕ ವಾಗಿ ಭಾರತದ ವಿರುದ್ಧ ಬಾಯಿ ಅಗಲ ಮಾಡಿರುವುದು ದುರ್ದೈವ. ಪಾಕ್ ಮಿಲಿಟರಿ ಅಧಿಕಾರಿಗೆ ಯುದ್ಧ ಎಂದರೆ ಮಕ್ಕಳ ಆಟ ಎಂದೆನಿಸಿದೆಯೇ? ಇವರ ಬಾಯಿಂದ ಬರುವಂತಹ ಮಾತುಗಳನ್ನು ಕೇಳಿ ನಗಬೇಕೋ ಅಥವಾ ಇದೊಂದು ಕೋಡಂಗಿಯ ಮಾತೆಂದು ಅಲಕ್ಷಿಸಿ ಸುಮ್ಮನಾಗಬೇಕೋ ತಿಳಿಯದು. ಭಾರತ ಮತ್ತು ಅಫ್ಗಾನಿಸ್ತಾನ ದೇಶಗಳು ಜಂಟಿಯಾಗಿ ಮಿಲಿಟರಿ ದಾಳಿ ನಡೆಸಿದರೆ ನೋಡುವವರಿಗೆ ಮಹಳ ಮಜಾ ಬರುತ್ತದೆ ಅಂತೆ.
ದೇಶದ ಓರ್ವ ಜವಾಬ್ದಾರಿಯುತ ಮಿಲಿಟರಿ ಅಧಿಕಾರಿ ಈ ರೀತಿಯಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದೇ ಖಂಡನೀಯ ಮತ್ತು ಇದೊಂದು ಬಾಲಿಶ ಹೇಳಿಕೆ. ಯಾವುದೇ ದೇಶದ ಮೇಲೆ ಯುದ್ಧ ನಡೆಯಲಿ. ಇದು ನೋಡುವವರಿಗೆ ಮಜಾ ಅಥವಾ ಥ್ರಿಲ್ ನೀಡುವಂತಹ ಕ್ರಿಕೆಟ್ ಅಥವಾ ಹಾಕಿ ಪಂದ್ಯವಲ್ಲ. ಯುದ್ಧ ಎಂದರೆ ಎರಡು ದೇಶಗಳ ನಡುವಣ ಸೈನಿಕರ ಸಾವು, ನೋವು ಮತ್ತು ಅಪಾರ ಆಸ್ತಿ ಪಾಸ್ತಿ ನಷ್ಟ ಹಾಗೂ ವಿಪತ್ಕಾರಿ ಪರಿಣಾಮಗಳ ಗಂಭೀರ ಪ್ರಶ್ನೆ. ಇದರ ಬಗ್ಗೆ ಏನನ್ನೂ ಆಲೋಚಿಸದೆ ಆರೀಫ್ ಉಡಾಳವಾಗಿ ಮಾತನಾಡಿರುವುದು ಗಂಭೀರ. ಇಂತಹ ಕುಚೋದ್ಯ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಕೆಟ್ಟ ಚಾಳಿಯಿಂದ ಪಾಕಿಸ್ತಾನದ ಮಿಲಿಟರಿ ಆಧಿಕಾರಿಗಳು ಮೊದಲು ಹೊರಬರಲಿ.
ಭಾರತ ಎಂದೂ ಉಭಯ ದೇಶಗಳ ನಡುವಣ ಸಮರ ಮತ್ತು ಗಡಿ ವಿವಾದಗಳ ಬಗ್ಗೆ ಇಂತಹ ಬಾಲಿಶ ಅಥವಾ ಲಘು ಹೇಳಿಕೆಗಳನ್ನು ನೀಡಿಲ್ಲ. ನೀಡಲು ಸಾಧ್ಯವೂ ಇಲ್ಲ. ತಾನಾಗಿಯೇ ಭಾರತ ಎಂದೂ ಪಾಕ್ ಸೇರಿದಂತೆ ತನ್ನ ನೆರೆ ದೇಶಗಳ ಮೇಲೆ ಯಾವೊಂದು ಮಿಲಿಟರಿ ಕಾರ್ಯಾಚರಣೆಯನ್ನು ಇದುವರೆಗೆ ನಡೆಸಿಲ್ಲ. ಆರು ತಿಂಗಳ ಹಿಂದೆ ನಡೆದ ಆಪರೇಷನ್ ಸಿಂಧೂರ್ ಭಾರತದ ಸುಮೋಟೋ ಕಾರ್ಯಾಚರಣೆ ಅಲ್ಲ. ಪಹಲ್ಗಾಮ್‌ನಲ್ಲಿ ಪಾಕ್‌ಪ್ರೇರಿತ ಉಗ್ರರು ಭಾರತದ ಅಮಾಯಕ ಪ್ರವಾಸಿಗ ರನ್ನು ಆಹುತಿ ತೆಗೆದುಕೊಂಡ ಕಾರಣದಿಂದಲೇ ಭಾರತವು ಈ ದುಷ್ಕೃತ್ಯಕ್ಕೆ ತಕ್ಕ ಉತ್ತರವನ್ನು ನೀಡುವ ಅಗತ್ಯವಿತ್ತು. ಆದರೆ ಇದನ್ನು ಪಾಕಿಸ್ತಾನವು ಭಾರತದ ಮೇಲೆ ಗೂಬೆ ಕೂರಿಸುವ ರೀತಿ ವಿದೇಶಗಳಲ್ಲಿ ದುಷ್ಪ್ರಚಾರ ನಡೆಸಿರುವುದು ಖಂಡನೀಯ.
ಪ್ರತಿ ಕ್ಷಣವೂ ಪಾಕಿಸ್ತಾನವು ಭಾರತದ ವಿರುದ್ಧ ಅಲ್ಲಿನ ಮನಸುಗಳಲ್ಲಿ ಯುದ್ಧ ಮತ್ತು ದ್ವೇಷವನ್ನು ಬಿತ್ತಿ ಅದನ್ನು ವಟವೃಕ್ಷವಾಗಿ ಪೋಷಿಸುತ್ತಿರುವ ಪಾಕಿಸ್ತಾನದ ಮಿಲಿಟರಿ ಪಡೆಯ ಉನ್ನತ ಅಧಿಕಾರಿಗಳು ತಿಳಿಗೇಡಿಗಳಾಗಿ ವರ್ತಿಸುತ್ತಿದ್ದಾರೆ. ಹಸಿವು, ಮಾದಕವಸ್ತುಗಳ ಮುಕ್ತ ಮಾರಾಟ, ಕಿತ್ತು ತಿನ್ನುವ ಬಡತನ ಮತ್ತು ಪಾತಾಳದಂಚು ಸೇರಿದ ದೇಶದ ಆರ್ಥಿಕತೆ ಮತ್ತು ಹಣದುಬ್ಬರದಂತಹ ಭೀಕರ ಸಮಸ್ಯೆಗಳಿಂದ ಪಾಕಿಸ್ತಾನವಿಂದು ಜಾಗತಿಕ ಮಟ್ಟದಲ್ಲಿ ತಲೆ ತಗ್ಗಿಸುವಂತಾಗಿದೆ. ಮೊದಲು ಇವು ಗಳಿಗೆ ತುಸುಮಟ್ಟಿಗಾದದರೂ ಪಾಕ್ ಪರಿಹಾರ ಕಂಡುಕೊಳ್ಳಲಿ. ಯುದ್ಧದಿಂದ ಮಜಾ ಬರುತ್ತೆ ಎಂಬ ಹಾಸ್ಯಾಸ್ಪದ ಹೇಳಿಕೆಗಳಿಂದ ಪಾಕ್ ಮಿಲಿಟರಿ ಅಧಿಕಾರಿಗಳು ಇನ್ನಾದರೂ ದೂರ ಸರಿಯಲಿ.


