-ರಮಾನಂದ ಶರ್ಮಾ
ಲೇಖಕರು
ಫೈರ್ ಬ್ರ್ಯಾಂಡ್ ಹಿಂದುತ್ವವಾದಿ ಭಿನ್ನಮತೀಯ ನಾಯಕ ಬಸವರಾಜ ಪಾಟೀಲ್ ಯತ್ನಾಳ್‌ರನ್ನು ಭಾರತೀಯ ಜನತಾ ಪಕ್ಷದಿಂದ ೬ ವರ್ಷ ಕಾಲ ಹೊರಹಾಕಿ ರುವ ಬೆಳವಣಿಗೆಯು ವರ್ಷಗಳಿಂದ ಪಕ್ಷದಲ್ಲಿ ನಡೆಯುತ್ತಿರುವ ಭಿನ್ನಮತ ಮತ್ತು ಬಣ ಬಡಿದಾಟಕ್ಕೆ ಪೂರ್ಣವಿರಾಮ ಹಾಕಬಹುದೇ? ಪಕ್ಷ ಇನ್ನೊಮ್ಮೆ ಶಿಸ್ತಿನ ಪಕ್ಷ ವಾಗಿ ಹೊರಹೊಮ್ಮಬಹುದೇ ಎನ್ನುವ ಪ್ರಶ್ನೆಗೆ ಉತ್ತರವು ನಿರೀಕ್ಷಿಸಿದಷ್ಟು ಸುಲಭ ಇರುವಂತೆ ಕಾಣುವುದಿಲ್ಲ.
ಅಳೆದು ತೂಗಿ ಸುದೀರ್ಘ ಚಿಂತನೆಯ ನಂತರ ನೀಡಲಾದ ಈ ಔಷಧಿಯು ರೋಗವನ್ನು ಗುಣಪಡಿಸುವುದಕ್ಕಿಂತ ಅದನ್ನು ಉಲ್ಭಣಗೊಳಿಸುವ ಸಾಧತೆಯೇ ಹೆಚ್ಚು ಎಂದು ರಾಜಕೀಯ ಪಡಸಾಲೆಯಲ್ಲಿ ರಾಜಕೀಯ ವಿಶ್ಲೇಷಕರು ಭಾವಿಸುತ್ತಿದ್ದಾರೆ. ರಾಜಕೀಯದಲ್ಲಿ ಧುರೀಣರನ್ನು ಪಕ್ಷದ ಶಿಸ್ತಿನ ಹೆಸರಿನಲ್ಲಿ ಉಚ್ಚಾಟಿಸುವುದು ತೀರಾ ಸಾಮಾನ್ಯ ರಾಜಕೀಯ ತಂತ್ರಗಾರಿಕೆ ಮತ್ತು ಬೆಳವಣಿಗೆ ಕೂಡಾ. ಕೆಲವು ಬಾರಿ ಪಕ್ಷದ ಹಿತದೃಷ್ಟಿಯಿಂದ ಮತ್ತು ಅದರ ಭವಿಷ್ಯಕ್ಕಾಗಿ ಈ ಕ್ರಮವನ್ನು ತೆಗೆದುಕೊಳ್ಳಲೇಬೇಕಾಗುತ್ತದೆ.
ಆದರೆ ಅಪಾರ ಬೆಂಬಲ ಮತ್ತು ಅನುಯಾಯಿಗಳನ್ನು ಹೊಂದಿರುವ, ಒಂದು ಸಮುದಾಯದ ಪ್ರಬಲ ನಿಷ್ಠೆ ಮತ್ತು ಬೆಂಬಲ ಇರುವ ಒಬ್ಬ ಪ್ರಭಾವಿ ಧುರೀಣರನ್ನು ಇಂಥ ಶಿಕ್ಷೆಗೆ ಒಳಪಡಿಸುವ ಮೊದಲು ಸುದೀರ್ಘ ಹೋಂವರ್ಕ್, ದೂರದೃಷ್ಟಿ ಮತ್ತು ದೂರಗಾಮಿ ಚಿಂತನೆಗಳು ಬೇಕಾಗುತ್ತವೆ. ಅವರ ಭಿನ್ನಮತೀಯ ಚಟುವಟಿಕೆ ಗಳ ಹೊರತಾಗಿಯೂ, ಅವರನ್ನು ಪಕ್ಷದಿಂದ ಉಚ್ಚಾಟನೆಗೊಳಿಸುವ ಅವರ ಹೈಕಮಾಂಡ್ ಕ್ರಮಕ್ಕೆ ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು ಉನ್ನತ ನಾಯಕರ ವರೆಗೆ ಅಂತಹ ಬೆಂಬಲ ಕಾಣಲಿಲ್ಲ. ಅಲ್ಲಲ್ಲಿ ಕೈಯಲ್ಲಿ ಎಣಿಸುವಷ್ಟು ಸಂಭ್ರಮ ವರದಿಯಾಗಿದೆಯೇ ವಿನಾ ಹೃತ್ಪೂರ್ವಕವಾಗಿ ಈ ಕ್ರಮವನ್ನು ಸ್ವಾಗತಿಸಿದಂತೆ ಕಾಣುವುದಿಲ್ಲ. ಪಕ್ಷದಲ್ಲಿ ಒಂದು ರೀತಿಯ ಕಂಪನ ಉಂಟಾದಂತೆ ಕಾಣುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಪ್ರತಿ ಕ್ರಿಯಿಸಿದ್ದಾರೆ. ಮುಂದಿನ ಅಧ್ಯಕ್ಷರಾಗಬಹುದು ಎನ್ನುವ ವದಂತಿಯಲ್ಲಿ ಮೊದಲಿಗರಾಗಿ ಕಾಣುವ ಬೊಮ್ಮಾಯಿಯವರು ತಾವು ಹೈಕಮಾಂಡ್ ಜೊತೆ ಮಾತನಾಡಿ ಉಚ್ಚಾಟನೆಯನ್ನು ಹಿಂತೆಗೆಸಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.
ಕೆಲವು ವರದಿಗಳ ಪ್ರಕಾರ ಬಿಜಾಪುರ ಜಿಲ್ಲೆಯಲ್ಲಿ ಭಾಜಪದ ಕಚೇರಿ ಖಾಲಿ ಹೊಡೆಯುತ್ತಿದೆ. ಸಾವಿರಾರು ಕಾರ್ಯಕರ್ತರು, ೮ -೧೦ ಪದಾಧಿಕಾರಿಗಳು ಪಕ್ಷ ತೊರೆಯಲು ಮುಂದಾಗಿದ್ದಾರೆ ಅಥವಾ ರಾಜೀನಾಮೆ ನೀಡಿದ್ದಾರೆ. “ಇದು ಅರಂಭವಷ್ಟೇ” ಮುಂದಿದೆ ಮಾರಿ ಹಬ್ಬ” ಎನ್ನುವ ಸುಳಿವು ಕಾಣುತ್ತಿದೆ ಎನ್ನಲಾಗು ತ್ತಿದೆ. “ಪಕ್ಷದಲ್ಲಿ ನಿಷ್ಠಾವಂತರಿಗೆ ಸ್ಥಳವಿಲ್ಲ ಹಿಂದುತ್ವಕ್ಕೆ ಬದ್ಧತೆ ಇಲ್ಲ” ಎನ್ನುವ ಆಕ್ರೋಶ ಕೇಳುತ್ತಿದೆ. “ಹಿಂದುತ್ವದ ಹುಲಿ ಹೊರಗೆ,ಇಲಿಗಳು ಒಳಗೆ” ಎನ್ನುವ ವ್ಯಂಗ್ಯ ದೊಡ್ಡದಾಗಿ ಸದ್ದು ಮಾಡುತ್ತಿದೆ.ಯತ್ನಾಳ್ ಒಂಟಿಯಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳುತ್ತಾ ಉಚ್ಚಾಟನೆಯನ್ನು ಹೈಕಮಾಂಡ್ ಪುನರ್ ಪರಿಶೀಲಿಸ ಬಹುದು ಎನ್ನುವ ಅಶಾಭಾವನೆಯನ್ನು ವ್ಯಕ್ತಮಾಡಿದ್ದಾರೆ. ಉಚ್ಚಾಟನೆ ದುರದೃಷ್ಟಕರ ಎಂದು ಸಿ.ಟಿ.ರವಿ ಅಭಿಪ್ರಾಯಪಟ್ಟಿದ್ದಾರೆ. ಈ ಕ್ರಮ ಭಾಜಪಕ್ಕೆ ಹಿನ್ನಡೆ ಯಾಗಬಹುದು ಎಂದು ಶ್ರೀರಾಮುಲು ಎಚ್ಚರಿಸಿದರೆ, ಯತ್ನಾಳ್ ಇಲ್ಲದೆ ಭಾಜಪ ಅಧಿಕಾರಕ್ಕೆ ಬರಲ್ಲ ಎಂದು ಎಚ್.ಸಿ. ಬಾಲಕೃಷ್ಣ ಭವಿಷ್ಯ ನುಡಿದದ್ದಾರೆ.
ಪಕ್ಷಾಧ್ಯಕ್ಷ ವಿಜಯೇಂದ್ರ ಕೂಡಾ ಈಗಾಗಲೇ ಪಕ್ಷಕ್ಕೆ ಸಾಕಷ್ಟು ನಷ್ಟ ಅಗಿದ್ದು ಮತ್ತು ಈಗಿನ ಉಚ್ಚಾಟನೆ ಇನ್ನೂ ನಷ್ಟ ಮಾಡಬಹುದು ಎಂದು ಎಚ್ಚರಿಕೆಯ ಪ್ರತಿ ಕ್ರಿಯೆ ಮಾಡಿದ್ದಾರೆ. ಬಹುತೇಕ ಉನ್ನತ ಮಟ್ಟದ ಧುರೀಣರು ಪ್ರತಿಕ್ರಿಯೆ ವ್ಯಕ್ತ ಮಾಡದೆ ಜಾಣ ಮೌನ ವಹಿಸಿ ಮುಂದಿನ ಬೆಳವಣಿಗೆಯನ್ನು ಕಾತುರದಿಂದ ಕಾಯುತ್ತಿದ್ದಾರೆ. ಯತ್ನಾಳ್ ಬೇರೆ ಕೆಲವು ಧುರೀಣರಂತೆ ಬೇರೆ ಪಕ್ಷದಿಂದ ಬಂದವರಲ್ಲ. ಅವರಿಗೆ ಭಾಜಪದ ಮಾತೃ ಸಂಸ್ಥೆಯಂದೇ ಹೇಳಲಾಗುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಕೃತಿಯ ಹಿನ್ನೆಲೆಯಿಂದ ಬಂದವರಾಗಿದ್ದು ಆ ಬದ್ಧ ತೆಯನ್ನು ತಮ್ಮ ರಾಜಕೀಯ ಜೀವನದಲ್ಲಿ ಅಳವಡಿಸಿ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಹಾಗೆಯೇ ಕಂಡದ್ದನ್ನು ಕಂಡ ಹಾಗೆ ನೇರವಾಗಿ ಮುಲಾಜಿಲ್ಲದೆ ಮಾತನಾಡಿ ರಾಜಕೀಯ ವೈರಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಅವರು ಎಂದೂ ಅಧಿ ಕಾರ ಮತ್ತು ಆಶೆ ಆಮಿಷಗಳಿಗೆ ಬಲಿಯಾದವರಲ್ಲ. ಅವರ ಪ್ರಭಾವ, ಸ್ಥಾನ ಮಾನವನ್ನು ನೋಡಿಯೇ ಹೈಕಮಾಂಡ್ ಅವರ ಬಗೆಗೆ ದಿಢೀರ ಎಂದು ನಿರ್ಣಯಿ ಸದೇ ಅವರಿಗೆ ತಪ್ಪು ಸರಿಪಡಿಸಿಕೊಳ್ಳಲು ಸಾಕಷ್ಟು ಕಾಲವಕಾಶ ನೀಡಿಯೇ ಅಂತಿಮವಾಗಿ ಕ್ರಮ ತೆಗೆದುಕೊಂಡಿದೆ ಎನ್ನಲಾಗುತ್ತದೆ. ಅವರಿಗೆ ಚುನಾವಣೆಯಲ್ಲಿ ಆರಿಸಿ ಬರಲು ಹೊರಗಿನವರ ಸಹಾಯದ ಅಗತ್ಯ ಕೂಡಾ ಇಲ್ಲ. ಅವರು ತಮ್ಮ ಮತಬ್ಯಾಂಕ ಅನ್ನು ಸುರಕ್ಷಿತವಾಗಿ ಇಟ್ಟುಕೊಂಡಿದ್ದು, ಅಂತೆಯೇ ಧ್ವನಿ ಏರಿಸಿ ನಿರ್ಭಿಡೆಯಿಂದ ಮಾತನಾಡುತ್ತಾರೆ. ಹಾಗೆಯೇ ರಾಜಕಾರಣದಲ್ಲಿ ತೀರಾ ಮಾಮೂಲಾಗಿರುವ ಭ್ರಷ್ಟಾಚಾರದ ಆರೋಪಗಳೂ ಅವರ ಮೇಲಿಲ್ಲ. ಸದ್ಯ ಯತ್ನಾಳ್ ಮತ್ತು ಅವರ ರೆಬೆಲ್ ಗುಂಪು ತಣ್ಣಗಿದ್ದರೂ, ವದಂತಿಗಳ ಪ್ರಕಾರ ಮುಂದಿನ ಕಾರ್ಯ ತಂತ್ರವನ್ನು ಹೆಣೆಯಲಾಗುತ್ತಿದೆಯಂತೆ. ಆ ಕಾರ್ಯತಂತ್ರಗಳಲ್ಲಿ ಹೊಸ ಪಕ್ಷದ ಸ್ಥಾಪನೆಯೂ ಒಂದು ಎನ್ನುವ ಮಾತು ಕೇಳಿ ಬರುತ್ತಿದೆ.
ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಭಾಜಪದಲ್ಲಿ ಒಬ್ಬೊಬ್ಬರೇ ಕಟ್ಟರ್ ಹಿಂದುತ್ವವಾದಿಗಳು ತೆರೆಯ ಹಿಂದೆ ಸರಿಯುತ್ತಿದ್ದಾರೆ. ಕಲ್ಯಾಣ ಸಿಂಗ್, ಲಾಲ ಕೃಷ್ಣ ಅಡ್ವಾಣಿ, ಉಮಾ ಭಾರತಿ, ಮುರಳಿ ಮನೋಹರ ಜೋಷಿ ಅನಂತಕುಮಾರ ಹೆಗಡೆ, ಪ್ರತಾಪ ಸಿಂಹ, ಸಿಟಿ ರವಿ, ನಳಿನ್ ಕಟೀಲ್, ಈಶ್ವರಪ್ಪ ನಂತರ ಈಗ ಯತ್ನಾಳ್ ಸರದಿ. ಹಿಂದೂ ಹುಲಿಯೆಂದೇ ಕರೆಯಲ್ಪಡುವ ಯತ್ನಾಳ್ ಹೊಸ ಪಕ್ಷವನ್ನು ಕಟ್ಟಿದರೆ, ಅವರು ಭಾಜಪದಲ್ಲಿರುವ ಕಟ್ಟರ್ ಹಿಂದುತ್ವ ವಾದಿಗಳನ್ನು ಸೆಳೆಯುವು ದರಲ್ಲಿ ಸಂಶಯವಿಲ್ಲ. ಇದು ಭಾಜಪದ ಬೆಳವಣಿಗೆಗೆ ಅಡಚಣೆಯಾಗುವುದು ಗ್ಯಾರಂಟಿ. ಭಾಜಪದ ಮುಖ್ಯಶಕ್ತಿ ಇರುವುದೇ ಹಿಂದುತ್ವದಲ್ಲಿ ಎನ್ನುವುದು ಬಹಿರಂಗ ಸತ್ಯ. ಹಾಗೆಯೇ ಇವರು ಉತ್ತರ ಕರ್ನಾಟಕದಲ್ಲಿ ಪ್ರಭಾವಿ ನಾಯಕರಾಗಿರುವುದು ಭಾಜಪದಲ್ಲಿ ಸಧ್ಯ ಅಗೋಚರವಾಗಿ ಮಿಡಿಯುತ್ತಿರುವ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಸಮೀಕರಣಕ್ಕೆ ಹೊಸ ಆಯಾಮ ದೊರಕುವ ಸಾಧತೆಯನ್ನು ತಳ್ಳಿ ಹಾಕುವಂತಿಲ್ಲ. ಹಾಗೆಯೇ ಅವರು ಲಿಂಗಾಯತ ಮತಬ್ಯಾಂಕಿಗೂ ಲಗ್ಗೆ ಇಡಬಹುದು. ಇದು ಕರ್ನಾಟದಲ್ಲಿರುವ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಅಪಾಯಕಾರಿ ಬೆಳವಣಿಗೆ ಆಗಬಹುದು.
ಹೊಸ ಪಕ್ಷದಂಥ ಬೆಳವಣಿಗೆ ಆಗೇ ಬಿಡುತ್ತದೆ ಎಂಧು ದೃಢವಾಗಿ ಹೇಳಲಾಗದು. ಆದರೆ, ಬದಲಾಗುತ್ತಿರುವ ರಾಜಕೀಯ ಸಮೀರಕರಣದಲ್ಲಿ ಇಂಥ ಸಾಧ್ಯತೆ ಯನ್ನು ತಳ್ಳಿ ಹಾಕಲಾಗದು. ಈ ಹಂತದಲ್ಲಿ ಯತ್ನಾಳ್ ರಾಜೀ ಮಾಡಿಕೊಳ್ಳುವ ಸಾಧತೆ ತುಂಬಾ ಕಡಿಮೆ. ಅವರು ಕುಟುಂಬ ರಾಜಕಾರಣ ಮತ್ತು ಹೊಂದಾಣಿಕೆ ರಾಜಕಾರಣವನ್ನು ಕಳೆದ ಎರಡು ವರ್ಷಗಳಿಂದ ನಖಶಿಖಾಂತ ವಿರೋಧಿಸುತ್ತಿದ್ದು, ಅದರೊಂದಿಗೆ ರಾಜಿ ಮಾಡಿಕೊಳ್ಳುವುದನ್ನು ಊಹಿಸಲಾಗದು. ಅವರು ಈ ಹಾದಿಯಲ್ಲಿ ತಿರುಗಿ ಬಾರದಷ್ಟು ಮುಂದೆ ಸಾಗಿದ್ದು, ಅವರು ರಿವರ್ಸ್ ಗೇರ್‌ಗೆ ಬದಲಾಯಿಸಲಾರರು. ಆದರೆ, ಊಹಾಪೋಹಗಳನ್ನು ನಂಬುವುದಾದರೆ, ಭಾಜಪದ ಹೈಕಮಾಂಡ್ ಯತ್ನಾಳರನ್ನು ಉಚ್ಚಾಟನೆ ಮಾಡುವಾಗ ಎಡವಿದ್ದು, ಅದು ಮುಂದಿನ ದಿನಗಳಲ್ಲಿ ಪಕ್ಷ ಕ್ಕೆ ಭಾರೀ ದುಬಾರಿಯಾಬಹುದೇನೋ ಎನ್ನುವ ಭಾವನೆ ಪಕ್ಷದ ಕಾರ್ಯಕರ್ತರಲ್ಲಿ ಬೇರು ಬಿಡುತ್ತಿದ್ದು, ಈ ಬೆಳವಣಿಗೆಯಿಂದ ಹೈಕಮಾಂಡ್ ತನ್ನ ನಿರ್ಣಯವನ್ನು ಬದಲಿಸಬಹುದೇನೋ ಎನ್ನುವ ಪಿಸು ಮಾತು ಕೇಳು ತ್ತಿದೆ. ಈ ಕ್ರಮ ಭಾಜಪದ ದಕ್ಷಿಣ ಸೀಮೋಲ್ಲಂಘನಕ್ಕೆ ಅಡೆತಡೆಯಾಗುವುದು ನಿಶ್ಚಿತ ಎನ್ನಬಹುದು. ಉಚ್ಚಾಟನೆಯ ಪರಿಣಾಮವನ್ನು ತಿಳಿಯಲು ಇನ್ನೂ ಕೆಲವು ಕಾಲ ಬೇಕಿದ್ದು, ಹೈಕಮಾಂಡ್ ಕಾಯ್ದು ನೋಡುವ ಪಾಲಿಸಿಗೆ ಶರಣಾಗಿರುವಂತೆ ಕಾಣುತ್ತಿದೆ.
ಹೊಸ ಪಕ್ಷ ಕಟ್ಟಿದರೆ ಅದು ಕೂಡಲೆ ಅಧಿಕಾರಕ್ಕೆ ಬರುತ್ತದೆ ಎನ್ನಲಾಗದು. ಎಲ್ಲಾ ಹೊಸ ಪಕ್ಷಗಳಿಗೆ ತೃಣಮೂಲ ಕಾಂಗ್ರೆಸ್, ತೆಲುಗು ದೇಶಂ ಮತ್ತು ವೈಎಸ್ಸಾರ್, ಆಮ್ ಅದ್ಮಿ ಪಕ್ಷದಷ್ಟು ಅದೃಷ್ಟ ಕಷ್ಟ. ಅದು ನೆಲೆಯೂರಲು ಸಮಯ ತೆಗೆದುಕೊಳ್ಳುತ್ತದೆ. ಅದರೆ, ಯಡಿಯೂರಪ್ಪನವರ ಕೆಜೆಪಿ ಮಾಡಿದಂತೆ ಭಾಜಪಕ್ಕೆ ಮಾರ್ಮಿಕ ಪೆಟ್ಟು ನೀಡಬಹುದು. ಅದರೆ, ಹಿಂದುತ್ವ ಅಜೆಂಡಾದಲ್ಲಿ ಪಕ್ಷ ಕಟ್ಟಿದರೆ ಬದಲಾದ ರಾಜಕೀಯ ಮತ್ತು ಚಿಂತನೆಯಲ್ಲಿ ಅದು ಉಳಿದ ಪಕ್ಷಗಳ ನಿದ್ರೆಯನ್ನು ಕೆಡಿಸಬಹುದು. ಕರ್ನಾಟಕದಲ್ಲಿ ಅತಿರಥ ಮಹಾರಥರು ಪಕ್ಷ ಕಟ್ಟಿ ಮಕಾಡೆ ಮಲಗಿದ ಸಾಕಷ್ಟು ಉದಾಹರಣೆ ಕಣ್ಣೆದುರಿಗೆ ಇರುವಾಗ ಯತ್ನಾಳ್ ಅಕಸ್ಮಾತ್ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟರೆ ಅದನ್ನು ಸಾಹಸ ಎನ್ನಲೇಬೇಕು. ಯತ್ನಾಳರದು ಪ್ರಾದೇಶಿಕ ಪಕ್ಷ ಆಗಬೇಕೆ ವಿನಾ ರಾಷ್ಟ್ರೀಯ ಪಕ್ಷವಾಗಲಾರದು. ಕನ್ನಡಿಗರು ಪ್ರಾದೇಶಿಕ ಪಕ್ಷಗಳತ್ತ ಮನಸ್ಸು ಮಾಡುವುದಿಲ್ಲ ಎನ್ನುವ ಸತ್ಯವನ್ನು ಅವರು ಆಳವಾಗಿ ಯೋಚಿಸಬೇಕಾಗುತ್ತದೆ.
ಯತ್ನಾಳರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದು ಸರಿಯೋ ತಪ್ಪೋ ಎನ್ನುವುದನ್ನು ಕಾಲವು ಮುಂದಿನ ದಿನಗಳಲ್ಲಿ ನಿರ್ಧರಿಸುತ್ತದೆ. ಆದರೆ, ಯತ್ನಾಳರು ತಮ್ಮ ಹೋರಾಟದಲ್ಲಿ ಎತ್ತಿದ ಅಂಶಗಳಿಗೆ ಹೈಕಮಾಂಡ್ ಮೌನವಾಗಿರುವುದು ಸಹನೀಯ ಎನಿಸುವುದಿಲ್ಲ. ಬೇರೆ ಪಕ್ಷಗಳ ಕುಟುಂಬ ರಾಜಕಾರಣವನ್ನು ಎರ್ರಾಬಿರ್ರಿಯಾಗಿ ಟೀಕಿಸುವ ಪಕ್ಷ ತನ್ನ ಪಕ್ಷದಲ್ಲಿ ಅದನ್ನು ಉಳಿಸಿ ಬೆಳೆಸಿಕೊಳ್ಳುತ್ತಿರುವುದು ಸರಿಯೇ ಎನ್ನುವದಕ್ಕೆ ಉತ್ತರ ಸಿಕ್ಕಿಲ್ಲ. ಅದಕ್ಕೆ ಬದಲಾಗಿ ಅವರಿಗೆ ಉಚ್ಚಾಟನೆಯ ಶಿಕ್ಷೆಯನ್ನು ನೀಡಲಾಗಿದ್ದು ಪ್ರಜ್ಞಾವಂತರಿಗೇಕೆ, ಜನಸಾಮಾನ್ಯರಿಗೂ ಅರ್ಥವಾಗುತ್ತಿಲ್ಲ. ಭಾಜಪದಲ್ಲಿ ಮೊದಲಿನ ಶಿಸ್ತು ಇಲ್ಲ ಎನ್ನುವುದು ಬಹಿರಂಗ ಸತ್ಯ. ಸಮಸ್ಯೆಯ ಮೂಲವನ್ನು ಕಂಡು ಹಿಡಿದು ಔಷಧ ನೀಡದಿದ್ದರೆ ರೋಗ ಉಲ್ಭಣವಾಗುವ ಸಾಧ್ಯತೆ ಹೆಚ್ಚು. ಉಚ್ಚಾಟನೆಯ ಮುಂದಿನ ಮತ್ತು ಅಂತಿಮ ಕಂತು ಏನೇ ಇರಲಿ, ಭಾಜಪ ತನ್ನ ಹಿಂದಿನ ಮೆರುಗನ್ನು ಕಳೆದುಕೊಂಡಿರುವುದು ಸತ್ಯ.