ಯೆಮೆನ್ ಸರ್ಕಾರದ ಜೊತೆಗೆ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರನ್ನು ಮರಣದಂಡನೆ ಶಿಕ್ಷೆಯಿಂದ ಪಾರು ಮಾಡುವಂತೆ ಭಾರತ ಸರ್ಕಾರ ನಡೆಸಲಾದ ಚರ್ಚೆಯಲ್ಲಿ ಅನೌಪಚಾರಿಕವಾಗಿ ಗಲ್ಲು ಶಿಕ್ಷೆ ಸ್ಥಗಿತ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ಭಾರತೀಯ ಸುಪ್ರೀಂಕೋರ್ಟ್ ತುರ್ತು ವಿಚಾರಣೆ ಮಾಡಿದ್ದು, ಪ್ರಕರಣವನ್ನು ಜು.18ಕ್ಕೆ ಮುಂದೂಡಿ, ವಸ್ತುಸ್ಥಿತಿ ವರದಿಯನ್ನು ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚನೆ ನೀಡಿದೆ. ಕೇಂದ್ರ ಸರ್ಕಾರ ಮತ್ತು ಯೆಮೆನ್ ಸರ್ಕಾರದ ನಡುವೆ ನೇರ ಮಾತುಕತೆ ನಡೆದಿದ್ದು, ಮರಣದಂಡನೆ ಸ್ಥಗಿತಗೊಳ್ಳುವ ಬಗ್ಗೆ ಅನೌಪಚಾರಿಕ ಮಾಹಿತಿ ಬಂದಿದೆ. ಅದು ಕಾರ್ಯರೂಪಕ್ಕೆ ಬರುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಸರ್ಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ತಿಳಿಸಿದ್ದಾರೆ.
ಭಾರತ ಸರ್ಕಾರ ಈ ಪ್ರಕರಣದ ಕುರಿತು ಯೆಮೆನ್ ಸರ್ಕಾರದೊಂದಿಗೆ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿದ್ದು, ಅಲ್ಲಿಯ ಆಡಳಿತಾಧಿಕಾರಿ ಶೇಖ್ ಅವರ ಜೊತೆಗೂ ಸಂಪರ್ಕ ಸಾಧಿಸಲಾಗಿದೆ. ಯಾವುದೇ ಸ್ಪಷ್ಟ ಮತ್ತು ನಿಖರವಾದ ಉತ್ತರ ದೊರಕಿಲ್ಲ ಎಂದು ಎಜಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ನಿಮಿಷಾ ಪ್ರಿಯಾಳ ಮರಣದಂಡನೆ ತಪ್ಪಿಸಲು ಪರಿಹಾರದ ರೂಪದಲ್ಲಿ ಹಣ ನೀಡುವ ಕುರಿತು ಮಾತುಕತೆ ನಡೆಸಲಾಗಿದ್ದು, ಪ್ರಯೋಜನಕಾರಿಯಾಗಿಲ್ಲ. ಯೆಮೆನ್ ಸರ್ಕಾರ ಈ ಸಂಬಂಧ ಸ್ಪಷ್ಟ ನಿರ್ಧಾರವನ್ನೇ ತೆಗೆದುಕೊಳ್ಳದ ಕಾರಣ ಪರಿಸ್ಥಿತಿ ಗಂಭೀರವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.
ಪಾಲಕ್ಕಾಡ್ ಜಿಲ್ಲೆಯವರಾದ ನಿಮಿಷಾ ಪ್ರಿಯಾ, 2011ರಲ್ಲಿ ನರ್ಸಿಂಗ್ ತರಬೇತಿ ಪೂರ್ಣಗೊಳಿಸಿ ಯೆಮೆನ್‌ಗೆ ತೆರಳಿದರು. ಯೆಮೆನ್‌ನಲ್ಲಿ ಕ್ಲಿನಿಕ್ ಪ್ರಾರಂಭಿಸಲು ಸಹಾಯ ಮಾಡುವುದಾಗಿ ತಲಾಲ್ 2014ರಲ್ಲಿ ಭರವಸೆ ನೀಡಿದಾಗ ಆಕೆ ತಲಾಲ್ ಅಬ್ದೋ ಮಹ್ದಿ ಜೊತೆ ಒಡನಾಟ ಬೆಳೆಸಿಕೊಂಡರು. ತಲಾಲ್ ಜೊತೆ 2015ರಲ್ಲಿ ಸನಾದಲ್ಲಿ ಕ್ಲಿನಿಕ್ ಪ್ರಾರಂಭಿಸಿದರು. ಸ್ವಲ್ಪ ದಿನದಲ್ಲೇ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡವು. ಆಕೆ ಯೆಮೆನ್ ಬಿಟ್ಟು ಹೋಗದಂತೆ ನೋಡಿಕೊಳ್ಳಲು ತಲಾಲ್ ನಿಮಿಷಾರ ಪಾಸ್‌ಪೋರ್ಟ್ ತೆಗೆದುಕೊಂಡಿದ್ದ.. ಆತನಿಂದ ನಿಮಿಷಾ ತನ್ನ ಪಾಸ್‌ಪೋರ್ಟ್ ಮರಳಿ ಪಡೆದು ಭಾರತಕ್ಕೆ ಹಿಂತಿರುಗಲು ಡ್ರಗ್ ಚುಚ್ಚಿದಳು. ಆದರೆ ಅದು ಓವರ್ ಡೋಸ್ ಆಗಿ ಆತ ಮೃತಪಟ್ಟಿದ್ದ. ಪ್ರಕರಣದಲ್ಲಿ ಆಕೆಯನ್ನು ಬಂಧಿಸಿದ್ದು, ಅಲ್ಲಿನ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ.
ಯೆಮೆನ್‌ನಲ್ಲಿ ನರ್ಸ್ ನಿಮಿಷಾಗೆ ತಪ್ಪಲಿದೆಯಾ ಗಲ್ಲು ?
