Thursday, February 19, 2026
Menu

ಚಳ್ಳಕೆರೆ ಪ್ರವಾಸಿ ಮಂದಿರ ಸರ್ಕಾರಿ ಅಧಿಕಾರಿಗಳ ಖಾಯಂ ನಿವಾಸ ಆಯ್ತಾ?

 

*ರಘುನಾಗ್. ಎಂ – ಉದಯಕಾಲ ವಿಶೇಷ

ಚಳ್ಳಕೆರೆ ತಾಲೂಕಿನ ಪ್ರವಾಸಿ ಮಂದಿರವನ್ನು ಇತ್ತೀಚೆಗೆ ಕೆಲವು ಸರ್ಕಾರಿ ಅಧಿಕಾರಿಗಳು ಸ್ವಂತ ಮನೆಯಂತೆ ಮಾಡಿಕೊಂಡು, ಅಧಿಕಾರ ವಹಿಸಿಕೊಂಡ ನಂತರವೂ ಬಿಟ್ಟು ಕದಲದೆ ವಾಸಿಸುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿದ್ದು,  ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿ ಟೀಕೆಗಳು ವ್ಯಕ್ತವಾಗಿವೆ.

ಸರ್ಕಾರದ ನಿಯಮಗಳ ಪ್ರಕಾರ ಸಾಮಾನ್ಯವಾಗಿ  ಪ್ರವಾಸಿ ಮಂದಿರಗಳಲ್ಲಿ  ಅಧಿಕಾರಿಗಳ ತಾತ್ಕಾಲಿಕ ವಸತಿಗೆ,  ಸರ್ಕಾರಿ ಅತಿಥಿಗಳ ಸ್ವಾಗತಕ್ಕೆ,ಅಧಿಕೃತ ಸಭೆ–ಕಾರ್ಯಕ್ರಮಗಳಿಗೆ ಮಾತ್ರ ಅನುಮತಿ ಪಡೆಯಬೇಕು. ಶಾಶ್ವತ ವಾಸಕ್ಕೆ ಅನುಮತಿ ಇರುವುದಿಲ್ಲ. ಆದರೆ ನಿಯಮಗಳ ಉಲ್ಲಂಘನೆಯಾಗಿ ದುರುಪಯೋಗವಾಗುತ್ತಿದೆ.

ನಗರದ ಚಿತ್ರದುರ್ಗ ರಸ್ತೆಯಲ್ಲಿರುವ ವಿಐಪಿ ಪ್ರವಾಸಿ ಮಂದಿರವು ಎಲ್ಲಾ ಆಧುನಿಕ ಸೌಲಭ್ಯಗಳೊಂದಿಗೆ 2017ರ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯಲ್ಲಿ ಉದ್ಘಾಟನೆಗೊಂಡಿತು.ತಾಲೂಕಿನ ಕಾರ್ಯನಿರತ ಪತ್ರಕರ್ತರಿಗೆ ಸಮರ್ಪಕವಾದ ಪತ್ರಿಕಾ ಭವನ ಇಲ್ಲದ ಕಾರಣ ರೈತ ಮುಖಂಡರು ಸೇರಿದಂತೆ ವಿವಿಧ ಪಕ್ಷಗಳ ಹಾಗೂ ಸಂಘಟನೆಗಳ ಪತ್ರಿಕಾಗೋಷ್ಠಿಗಳಿಗೆ ಈ ಪ್ರವಾಸಿ ಮಂದಿರವು ಪ್ರಮುಖ ಸ್ಥಳವಾಗಿದೆ. ಇದನ್ನೇ ನೆಪ ಮಾಡಿಕೊಂಡು ಕೆಲವು ಅನಾಮಿಕ ವ್ಯಕ್ತಿಗಳು ಪ್ರವಾಸಿ ಮಂದಿರ ಪ್ರವೇಶಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಸಿಸಿ ಕ್ಯಾಮೆರಾಗಳ ಕಣ್ಮರೆ

ಪ್ರವಾಸಿ ಮಂದಿರದಲ್ಲಿ ಸಿಸಿ ಕ್ಯಾಮೆರಾಗಳು ಇಲ್ಲದೆ ಇರುವುದು  ಹಲವು ನಿಗೂಢ ಚಟುವಟಿಕೆಗಳಿಗೆ ಕಾರಣವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಯಾರು ಬರುತ್ತಾರೆ ಹೋಗುತ್ತಾರೆ ಎಂಬ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ಇಲ್ಲದಿದ್ದಾಗ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದರೆ ಅಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಹಾಗೂ ಅಕ್ರಮ ಪ್ರವೇಶ ಮಾಡುವವರ ಚಲನವಲನ ತಿಳಿಯಲು ಅನುಕೂಲವಾಗುತ್ತದೆ. ಗಂಭೀರ ಅನಾಹುತಗಳು ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

ತಾಲೂಕಿಗೆ ನೂತನವಾಗಿ ಆಗಮಿಸುವ ತಹಶೀಲ್ದಾರ್ , ಡಿವೈಎಸ್ಪಿ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳು  ಎಲ್ಲಾ ಸೌಲಭ್ಯಗಳುಳ್ಳ  ವಿಐಪಿ ಪ್ರವಾಸಿ ಮಂದಿರವನ್ನು  ಖಾಯಂ ನಿವಾಸವನ್ನಾಗಿ ಮಾಡಿಕೊಂಡು ವಾಸ ಮಾಡುತ್ತಿರುವುದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಕೆಲವು ಅಧಿಕಾರಿಗಳು ವರ್ಗಾವಣೆಗೊಂಡ ನಂತರ ಪ್ರವಾಸಿ ಮಂದಿರವನ್ನು ಖಾಲಿ ಮಾಡಿದ ನಿದರ್ಶನವೂ ಇದೆ.  ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು ಇದನ್ನು ತಡೆಯಬೇಕಾದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮೌನ ವಹಿಸಿರುವುದು ವಿಪರ್ಯಾಸ.

ಸ್ಥಳೀಯ ಪ್ರಗತಿಪರ ಹೋರಾಟಗಾರರ ಮೂಲಗಳ ಪ್ರಕಾರ, ಅಧಿಕಾರ ವಹಿಸಿಕೊಂಡ ಬಳಿಕವೂ ತಿಂಗಳುಗಟ್ಟಲೆ ಪ್ರವಾಸಿ ಮಂದಿರದಲ್ಲೇ ವಾಸ ಮಾಡುತ್ತಾರೆ. ಸಾರ್ವಜನಿಕರಿಗೆ ಹಾಗೂ ಇತರ ಅಧಿಕಾರಿಗಳಿಗೆ ಕೊಠಡಿ ಲಭ್ಯವಿಲ್ಲ ಎಂಬ ಉತ್ತರ ದೊರೆಯುತ್ತದೆ. ಇಲ್ಲಿ  ದಾಖಲೆಗಳ ಪಾರದರ್ಶಕತೆ ಇಲ್ಲ ಎಂಬ ಅನುಮಾನವಿದೆ. ಸಾರ್ವಜನಿಕ ಆಸ್ತಿಯ ದುರುಪಯೋಗ ನಿಲ್ಲಿಸಲು ಪಾರದರ್ಶಕತೆ ಮತ್ತು ಕಠಿಣ ಕ್ರಮ ಅವಶ್ಯಕ. ಇಲ್ಲವಾದರೆ, ಪ್ರವಾಸಿಗರಿಗಾಗಿ ಕಟ್ಟಿದ ಮಂದಿರವು ಪ್ರಭುತ್ವದ ಆರಾಮಗೃಹವಾಗಿಯೇ ಉಳಿಯುವ ಅಪಾಯವಿದೆ.

ವಿಐಪಿ ಪ್ರವಾಸಿ ಮಂದಿರವು ಸಾರ್ವಜನಿಕರ ಬಳಕೆಯ ಉದ್ದೇಶಕ್ಕಾಗಿ ನಿರ್ಮಿತವಾಗಿವೆ. ಅವು ಅಧಿಕಾರಿಗಳ ಖಾಸಗಿ ಮನೆಗಳಲ್ಲ. ಸಾರ್ವಜನಿಕರಿಗೆ ಸಿಗದಿದ್ದರೆ ಆ ಕಟ್ಟಡ ನಿರ್ಮಾಣದ ಉದ್ದೇಶವೇನು?ಪ್ರವಾಸಿ ಮಂದಿರ ಬಳಕೆಯ ಮಾಹಿತಿ ಸಾರ್ವಜನಿಕಗೊಳಿಸಬೇಕು. ಯಾರು ಎಷ್ಟು ದಿನ ವಾಸಿಸಿದ್ದಾರೆ ಎಂಬ ವಿವರ ಪ್ರಕಟವಾಗಲಿ ಎಂದು ಕೆ ಆರ್ ಎಸ್ ಪಕ್ಷದ ಮುಖಂಡ ಮಹೇಶ್ ಸಿ ಹೇಳುತ್ತಾರೆ.

ತಾಲೂಕಿನ ಶಾಸಕರ ಭವನದ ಪಕ್ಕದಲ್ಲಿರುವ ಪತ್ರಕರ್ತರ ಭವನವು ಪಾಳು ಬಿದ್ದಂತಾಗಿದ್ದು ಇದರಿಂದ ಪತ್ರಕರ್ತರಿಗೆ ಸುದ್ದಿ ಅಥವಾ ವಿಶ್ರಾಂತಿ ಪಡೆಯಲು ಸಹ ಸೂಕ್ತ ಸ್ಥಳಾವಕಾಶ ಇಲ್ಲದಂತಾಗಿ ಪತ್ರಿಕಾಗೋಷ್ಠಿಗಳಿಗೆ ಪತ್ರಕರ್ತರು ಹಾಗೂ ಸಂಘಟನೆಗಳು ರಾಜಕೀಯ ಪಕ್ಷಗಳು ಪ್ರವಾಸಿ ಮಂದಿರವನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡಿವೆ ಕೂಡಲೇ ಸ್ಥಳೀಯ ಶಾಸಕರು ಪತ್ರಕರ್ತರಿಗಾಗಿ ಭವನ ನಿರ್ಮಿಸಿದರೆ ಪ್ರವಾಸಿ ಮಂದಿರದಲ್ಲಿನ ಪತ್ರಿಕಾಗೋಷ್ಠಿಗಳನ್ನು ತಡೆಯಬಹುದು ಹಾಗೂ ಅನ್ಯ ವ್ಯಕ್ತಿಗಳು ಪ್ರವಾಸಿ ಮಂದಿರ ಪ್ರವೇಶಿಸುವುದನ್ನು ತಡೆಗಟ್ಟಬಹುದು ಎಂದು ಸಾಮಾಜಿಕ ಹೋರಾಟಗಾರ ಕೆ.ಮುರುಳಿ ಹೇಳುತ್ತಾರೆ.

Related Posts

Leave a Reply

Your email address will not be published. Required fields are marked *