ಶಿವಮೊಗ್ಗ ಜಿಲ್ಲೆಯ ತಿರ್ಥಹಳ್ಳಿ ತಾಲೂಕಿನ ಆಗುಂಬೆ ಬಳಿಯ ಮಲಂದೂರಿನಲ್ಲಿ ಕಾಡಾನೆ ಪ್ರತ್ಯಕ್ಷವಾಗಿದೆ. ಕಾಡಾನೆ ತಡರಾತ್ರಿ ಗದ್ದೆಗೆ ನುಗ್ಗಿ ಬೆಳೆ ಹಾಳು ಮಾಡಿದೆ, ಕಾಡಾನೆ ಕಾಟದಿಂದ ಮಲೆನಾಡಿನ ರೈತರು ಕಂಗಾಲಾಗಿದ್ದಾರೆ.
ಕಳೆದ ತಿಂಗಳು ಆಗುಂಬೆ ಐಬಿ ಬಳಿ ಕಾಡಾನೆ ಕಾಣಿಸಿಕೊಂಡಿತ್ತು. ಈಗ ಮತ್ತೊಮ್ಮೆ ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಗಾಂಭಿರ್ಯದಿಂದ ರಾಷ್ಟ್ರೀಯ ಹೆದ್ದಾರಿ ದಾಟುತ್ತಿರುವ ವೀಡಿಯೊ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.
ಅರಕಲಗೂಡು, ಶಿವಮೊಗ್ಗ, ಕಡಬ ಮತ್ತು ಚಿಕ್ಕಮಗಳೂರು ಮುಂತಾದ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದ್ದು, ರೈತರು ಮತ್ತು ಸ್ಥಳೀಯರು ಮಾನವ ಮತ್ತು ಆನೆಗಳ ಸಂಘರ್ಷ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಂತೆ ಆಗ್ರಹಿಸುತ್ತಿದ್ದಾರೆ.
ಅರಣ್ಯ ಅಧಿಕಾರಿಗಳು ಕಂದಕ ನಿರ್ಮಾಣದಂತಹ ಪರಿಹಾರ ಕ್ರಮಗಳ ಭರವಸೆ ನೀಡಿದ್ದರೂ ಸರಿಯಾಗಿ ಅನುಷ್ಠಾನಗೊಳಿಸಿಲ್ಲ ಎಂಬ ಆರೋಪವಿದೆ.
ಅರಣ್ಯ ಪ್ರದೇಶಗಳ ಅತಿಕ್ರಮಣದೊಂದಿಗೆ ರೆಸಾರ್ಟ್, ಕಾಫಿ ತೋಟಗಳ ನಿರ್ಮಾಣ, ಅತಿಕ್ರಮಣ ಕೃಷಿ ಚಟುವಟಿಕೆಗಳ ಕಾರಣ ವನ್ಯಜೀವಿಗಳ ಆವಾಸ ಸ್ಥಾನಕ್ಕೆ ಧಕ್ಕೆಯಾಗಿದ್ದು, ಅವು ನೀರು ಆಹಾರ ಅರಸಿಕೊಂಡು ನಾಡಿಗೆ ಲಗ್ಗೆ ಇಡುತ್ತಿವೆ. ಆನೆಗಳಿಗೂ ಕಾಡಿನಲ್ಲಿ ಬ ಇದಿರು ಸೇರಿದಂತೆ ಸೂಕ್ತ ಆಹಾರ ಸಿಗುತ್ತಿಲ್ಲ. ಹೀಗಾಗಿ ಅವುಗಳು ಕೃಷಿ ಜಮೀನುಗಳಿಗೆ ದಾಳಿಯಿಡುತ್ತಿವೆ.


