ಬೆಟಗೇರಿಯ ಗುಲ್ಬರ್ಗಾ ಓಣಿಯಲ್ಲಿ ಆಸ್ತಿಯನ್ನು ಪಡೆದುಕೊಳ್ಳುವುದಕ್ಕಾಗಿ ಮಹಿಳೆಯೊಬ್ಬಳು ಗಂಡನನ್ನು ಗೃಹಬಂಧನದಲ್ಲಿ ಇರಿಸಿರುವುದು ಪತ್ತೆಯಾಗಿದೆ. ಗಜಾನನ ಬಸವಾ ಗೃಹ ಬಂಧನಕ್ಕೆ ಒಳಗಾಗಿದ್ದ ವ್ಯಕ್ತಿ.
ಗಜಾನನಗೆ 28 ವರ್ಷಗಳ ಹಿಂದೆ ಶೋಭಾ ಎನ್ನುವ ಮಹಿಳೆಯೊಂದಿಗೆ ಮದುವೆಯಾಗಿತ್ತು. ಒಬ್ಬ ಮಗ ಇದ್ದು ಬಾರ್‌ನಲ್ಲಿ ಕೆಲಸ ಮಾಡುತ್ತಾನೆ. ಮಗಳು ಕಾಲೇಜಿಗೆ ಹೋಗುತ್ತಾಳೆ. ಗಂಡ ಹೆಂಡತಿ ನಡುವೆ ಆಸ್ತಿಗಾಗಿ ಮನಸ್ತಾಪ ಇತ್ತು. ಹೀಗಾಗಿ ಆಕೆ ಗಂಡನನ್ನು ಬಿಟ್ಟು ಹೋಗಿದ್ದಳು. ಐದು ವರ್ಷಗಳ ಹಿಂದೆ ವಾಪಸ್ ಬಂದಿದ್ದಳು. ಗಂಡ ಹಾಗೂ ಹೆಂಡತಿ ನಡುವೆ ಮನಸ್ತಾಪ ಮುಂದುವರದಿತ್ತು.
ಈ ಹಿಂದೆ ಗಜಾನನ ಸಹೋದರಿಯ ಹೆಸರಿಗೆ ತನ್ನ ಆಸ್ತಿ ನೋಂದಣಿ ಮಾಡಲು ಮುಂದಾಗಿದ್ದನಂತೆ. ಆಗ ಗದಗನ ಗಂಗಿಮಡಿ ಪ್ರದೇಶದಲ್ಲಿ ಗಜಾನನನ್ನು ಕೂಡಿ ಹಾಕಿದ್ದರು. ಗದಗ ಗ್ರಾಮೀಣ ಪೊಲೀಸರು ಬಿಡಿಸಿದ್ದರು. ಮತ್ತೆ ಸಹೋದರಿಗೆ ಆಸ್ತಿ ನೀಡಲು ಆಸ್ತಿಗೆ ಸಹಿ ಮಾಡುತ್ತಾನೆ ಎಂದು ಶೋಭಾ ಆತನನ್ನು ಗೃಹ ಬಂಧನದಲ್ಲಿ ಇಟ್ಟಿದ್ದಳು. ಅಕ್ಕಪಕ್ಕದ ಜನರಿಗೆ ಗೊತ್ತಾಗಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಪೊಲೀಸರು, ಮಾಧ್ಯಮ ಪ್ರತಿನಿಧಿಗಳು ಹಾಗೂ ಸ್ಥಳೀಯರು ಮನೆ ಬಳಿ ಹೋದಾಗ ಶೋಭಾ ಹೈಡ್ರಾಮಾ ನಡೆಸಿದ್ದಳು.
ಗಜಾನನ ನೇಕಾರಿಕೆ ಕೆಲಸ ಮಾಡುತ್ತಾನೆ. ಹಲವು ತಿಂಗಳು ಹೊರಗಡೆ ಸ್ನಾನ ಮಾಡಿಕೊಂಡು ಎಲ್ಲೆಂದರಲ್ಲಿ ಊಟ ಮಾಡಿ ಮಲಗುತ್ತಿದ್ದನಂತೆ. ಕೆಲವು ದಿನಗಳಿಂದ ನೇಕಾರಿಕೆ ಕೆಲಸಕ್ಕೆ ಬಂದಿಲ್ಲ. ಹೀಗಾಗಿ ಸ್ಥಳೀಯರಿಗೆ ಸಂಶಯ ಬಂದಿದೆ. ಗೃಹ ಬಂಧನಲ್ಲಿ ಇರುವುದು ಗೊತ್ತಾಗಿದೆ.
ಗಜಾನನ ಮಾನಸಿಕ ಅಸ್ವಸ್ಥತೆ ಹೊಂದಿದ್ದು, ಆಸ್ತಿಯನ್ನು ಹೆಂಡತಿ, ಮಕ್ಕಳಿಗೆ ನೀಡದೆ ಸಹೋದರಿಗೆ ನೀಡುತ್ತಾನೆ ಎನ್ನುವ ಕಾರಣಕ್ಕೆ ಕೂಡಿ ಹಾಕಿದ್ದಾರೆ ಎನ್ನಲಾಗಿದೆ. 15 ದಿನಗಳಿಂದ ಕೂಡಿ ಹಾಕಿದ್ದಾರೆ. ಸರಿಯಾಗಿ ಊಟ ನೀಡಿಲ್ಲ. ಶಾಲೆಯ ಬಿಸಿಯೂಟ ಮಾತ್ರ ನೀಡುತ್ತಾರೆ ಎಂದು ಗಜಾನನ ಆರೋಪಿಸಿದ್ದಾರೆ. ಗಜಾನನ ಕುಟುಂಬಸ್ಥರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಟಗೇರಿ ಪೊಲೀಸರು ಗೃಹ ಬಂಧನದಿಂದ ಗಜಾನನನಿಗೆ ಬಿಡುಗಡೆ ನೀಡಿ ತನಿಖೆ ಮುಂದುವ ರಿಸಿದ್ದಾರೆ.


